ಮೈಸೂರು

ರಂಗಾಸಕ್ತರನ್ನು ಕೈಬೀಸಿ ಕರೆಯುತ್ತಿದೆ ಬಹುರೂಪಿ ನಾಟಕೋತ್ಸವ: ತೆರೆದಿಟ್ಟಿದೆ ಗತಕಾಲದ ಇತಿಹಾಸ

ರಂಗಾಸಕ್ತರನ್ನು ಕೈಬೀಸಿ ಕರೆಯುತ್ತಿರುವ ವಿಭಿನ್ನ ನಾಟಕಗಳು, ಭೋಜನ ಪ್ರಿಯರ ಬಾಯಲ್ಲಿ ನೀರೂರಿಸುವ  ಬಗೆ ಬಗೆಯ ಖಾದ್ಯಗಳು, ಸಾಹಿತ್ಯಾಸಕ್ತರ ಮನಸ್ಸಿಗೆ ಮುದ ನೀಡುವ ಪುಸ್ತಕ ಭಂಡಾರ, ನೂರಾರು ವರ್ಷಗಳ ಇತಿಹಾಸ ಸಾರುತ್ತಿರುವ ಪತ್ರಗಳು, ಬಟ್ಟೆಗಳು, ಕರಕುಶಲ ವಸ್ತುಗಳು  ಒಂದಾ ಎರಡಾ..? ಹೇಳುತ್ತಾ ಹೋದರೆ ಹನುಮಂತನ ಬಾಲದಂತೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.

ಮೈಸೂರಿನ ಕಲಾಮಂದಿರದ ರಂಗಾಯಣದಲ್ಲಿ ನಡೆಯುತ್ತಿರುವ ಬಹುರೂಪಿ ಅಂತಾರಾಷ್ಟ್ರೀಯ ಬಹುಭಾಷಾ ನಾಟಕೋತ್ಸವ 4ನೇ ದಿನಕ್ಕೆ ಕಾಲಿಟ್ಟಿದ್ದು,  ದಿನದಿಂದ ದಿನಕ್ಕೆ ರಂಗೇರುತ್ತಿದೆ. ಬೇರೆ ಬೇರೆ ದೇಶಗಳ ನಾಟಕಗಳ ಪ್ರದರ್ಶನ ಬಹುರೂಪಿಯ ಸಂಭ್ರಮವನ್ನು ಹೆಚ್ಚಿಸಿದರೆ, ರಾಜ್ಯ ಹೊರರಾಜ್ಯದ ನಾಟಕಗಳು ರಂಗಪ್ರಿಯರನ್ನು ತನ್ನತ್ತ ಸೆಳೆಯುತ್ತಿವೆ. ಭೋಜನಪ್ರಿಯರನ್ನು ಈ ಬಾರಿಯ ಬಹುರೂಪಿ ವಿಶಿಷ್ಟ, ವಿಭಿನ್ನ ಖಾದ್ಯಗಳ ಘಮಲಿನ ಅಮಲಿನಲ್ಲಿ ತೇಲುವಂತೆ ಮಾಡಿವೆ. ಇದೆಲ್ಲದಕ್ಕಿಂತ ಮುಖ್ಯವಾಗಿ ನಾಟಕ, ಕಲೆ, ಸಂಸ್ಕೃತಿಗೆ ಮೈಸೂರಿನ ರಾಜಮಹಾರಾಜರ ಕೊಡುಗೆಯನ್ನು ಸಾರುವ  ಪತ್ರಗಳ ಪ್ರದರ್ಶನ ಗತಕಾಲದ ಇತಿಹಾಸ ಸಾರುತ್ತಿವೆ.

ನೂರಾರು ವರ್ಷಗಳ ಇತಿಹಾಸ ಸಾರುತ್ತಿರುವ ಪತ್ರಗಳು: ದೇಶದ ಇತಿಹಾಸವನ್ನೊಮ್ಮೆ ಹಿಂತಿರುಗಿ ನೋಡಿದರೆ ಮೈಸೂರು ಯದುವಂಶದ ಅರಸರ ಆಡಳಿತ ಅವಧಿ, ಅವರ ಕೊಡುಗೆಗಳು ಉನ್ನತ ಸ್ಥಾನದಲ್ಲಿ ನಿಲ್ಲುತ್ತವೆ. ಅದರಲ್ಲೂ ಸಾಂಸ್ಕೃತಿಕ ನಗರಿ ಮೈಸೂರನ್ನು ಒಂದು ಸುತ್ತು ಹಾಕಿದರೆ ಅವರ ಅವಿಸ್ಮರಣೀಯ ಕೊಡುಗೆಗಳು ನಮ್ಮ ಅಕ್ಷಿಪಟಲದಲ್ಲಿ ಶಾಶ್ವತವಾಗಿ ನಿಲ್ಲುತ್ತವೆ. ಅವರು ಕೇವಲ ಆಡಳಿತದಲ್ಲಿ ಮುಂದಿರಲಿಲ್ಲ. ಕಲೆ, ಸಾಹಿತ್ಯ, ಸಂಸ್ಕೃತಿ ಪರಂಪರೆಯನ್ನು ಪೋಷಿಸಿ ಬೆಳೆಸುತ್ತಿದ್ದರು. ಅದಕ್ಕೆ ತಾಜಾ ಉದಾಹರಣೆ ಬಹುರೂಪಿಯಲ್ಲಿ ಪ್ರದರ್ಶನಗೊಂಡಿರುವ ಪತ್ರಗಳು.

ಬಹುರೂಪಿ ಅಂತಾರಾಷ್ಟ್ರೀಯ ನಾಟಕೋತ್ಸವದಲ್ಲಿ ನಾಟಕ, ಚಲನಚಿತ್ರೋತ್ಸವ, ವಸ್ತುಪ್ರದರ್ಶನ, ಛಾಯಾಚಿತ್ರ ಪ್ರದರ್ಶನ, ಪುಸ್ತಕ ಮೇಳ ಹಾಗೂ ಆಹಾರ ಮೇಳಕ್ಕೆ ಭೇಟಿ ನೀಡುವವರು ಪಿ.ಲಂಕೇಶ್ ಸಭಾಂಗಣಕ್ಕೂ ಭೇಟಿ ನೀಡಿದರೆ ಇತಿಹಾಸದ ಅರಿವು ನಿಮಗಾಗುತ್ತದೆ. ರಾಜರ ಕಾಲದಲ್ಲಿ ಅಂದರೆ 150 ವರ್ಷಗಳ ಹಿಂದೆ ರಂಗಭೂಮಿ ಕ್ಷೇತ್ರಕ್ಕೆ ಯಾವ ರೀತಿಯಲ್ಲಿ ಅರಸರು ಪ್ರೋತ್ಸಾಹ ನೀಡುತ್ತಿದ್ದರು ಎಂಬ ಮಾಹಿತಿಗಳನ್ನು ಪತ್ರಾಗಾರ ಇಲಾಖೆ ಪ್ರದರ್ಶನಕ್ಕಿಟ್ಟಿದೆ.

1906ರಲ್ಲಿ ಪಾರ್ವತಿ ಸತ್ವ ಪರೀಕ್ಷೆ ನಾಟಕವನ್ನು ಏರ್ಪಡಿಸಿದ್ದು, ಮಹಾರಾಜರು 1929ರಲ್ಲಿ ಶ್ರೀ ಹಾಲ ಸಿದ್ದೇಶ್ವರ ಪ್ರಸಾಧಿಕ ನಾಟಕ ಮಂಡಳಿಯ ನಾಟಕದ ಬಗ್ಗೆ ಮೆಚ್ಚುಗೆಯನ್ನಾಡಿರುವ ಪತ್ರ, 1909ರಲ್ಲಿ ಛತ್ರಪತಿ ಶಿವಾಜಿ ನಾಟಕವನ್ನು ಏರ್ಪಡಿಸಿದ್ದು, ಕಿವುಡ ಮತ್ತು ಮೂಖ ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಾಯವಾಗಲೆಂದು ನಡೆಸಿದ್ದ ನಾಟಕ, ಹಿಂದು ಡಿಪ್ರೆಸ್ಡ್ ಕ್ಲಾಸ್ ವಿದ್ಯಾಭ್ಯಾಸದ ಸಹಾಯಾರ್ಥ ಆಡಿಸಿದ್ದ ನಾಟಕಗಳ ಕುರಿತ ಮಾಹಿತಿಗಳನ್ನು ನಿಮಗೆ ಸಾಕ್ಷಿ ಸಮೇತವಾಗಿ ನೀಡುತ್ತದೆ. ಹಲವು ಸಂಗೀತ ವಿದ್ವಾಂಸರಿಗೆ, ಗಾಯಕರಿಗೆ ಪ್ರೋತ್ಸಾಹ ಧನ ನೀಡಿರುವ ಬಗೆಗಿನ ಪತ್ರಗಳು ಎಲ್ಲವನ್ನು ನೀವು ಕಣ್ತುಂಬಿಕೊಳ್ಳಬಹುದು. ಸುಮಾರು 150 ವರ್ಷಗಳ ಹಿಂದಿನ ರಾಜವೈಭವವನ್ನು ಛಾಯಾಚಿತ್ರಗಳು ನಿಮ್ಮ ಕಣ್ಣ ಮುಂದೆ ತೆರೆದಿಡುತ್ತವೆ.

ಸಿಟಿಟುಡೆಯೊಂದಿಗೆ ವಿಭಾಗೀಯ ಪತ್ರಾಗಾರ ಕಚೇರಿಯ ಸಹಪತ್ರ ಪಾಲಕ ಮಂಜುನಾಥ್.ಎಚ್.ಎಲ್,  ಮಾತನಾಡಿ

ನಾಟಕ ಸೇರಿದಂತೆ ಕಲೆ, ಸಂಸ್ಕೃತಿ, ಪರಂಪರೆಯ ಬೆಳವಣಿಗೆಗೆ ಮೈಸೂರಿನ ಅರಸರ ಕೊಡುಗೆಗಳನ್ನು ಸಾರ್ವಜನಿಕರಿಗೆ ತಿಳಿಸುವ ಉದ್ದೇಶದಿಂದ ಪತ್ರಗಳ ಪ್ರದರ್ಶನವನ್ನು ಮೊದಲ ಬಾರಿಗೆ ಬಹುರೂಪಿಯಲ್ಲಿ ಏರ್ಪಡಿಸಲಾಗಿದೆ. ಪ್ರದರ್ಶನದಲ್ಲಿ 150ಕ್ಕೂ ಹೆಚ್ಚು ವರ್ಷಗಳ ಇತಿಹಾಸವನ್ನು ತಿಳಿಯಬಹುದಾಗಿದ್ದು 1906ರಿಂದ 1931ರವರೆಗೆ ನಾಟಕೋತ್ಸವದಲ್ಲಿ ಭಾಗವಹಿಸುವ ಕಲಾವಿದರೊಂದಿಗೆ ನಡೆಸಿದ ಪತ್ರವ್ಯವಹಾರ, ಸಿದ್ಧತೆ ಸೇರಿದಂತೆ ಎಲ್ಲ ಮಾಹಿತಿಗಳನ್ನು ಪತ್ರದಲ್ಲಿ ವಿವರಿಸಲಾಗಿದೆ. ಜತೆಗೆ ಪ್ರದರ್ಶನದ ಮತ್ತೊಂದು ವಿಶೇಷತೆಯೆಂದರೆ ಅಂದ ಮತ್ತು ಕಿವುಡ ಮಕ್ಕಳಿಗೂ ಸಹಾಯಕವಾಗುವಂತೆ ಪ್ರದರ್ಶನ ಆಯೋಜಿಸಲಾಗಿದೆ ಎಂದರು.

 ಬಾಯಲ್ಲಿ ನೀರೂರಿಸುತ್ತಿದೆ ಜೋಳದ ರೊಟ್ಟಿ :    ಬಹುರೂಪಿಯ ಪ್ರಮುಖ ಆಕರ್ಷಣೆಗಳಲ್ಲಿ ಆಹಾರ ಮೇಳವೂ ಒಂದು. ನಾಟಕಗಳನ್ನು ನೋಡಲು ಬರುವವರು ಮೊದಲು ತಮ್ಮ ಹೊಟ್ಟೆ ತುಂಬಿಸಿಕೊಂಡು ಬಳಿಕ ನಾಟಕಗಳತ್ತ ಮುಖ ಮಾಡುತ್ತಾರೆ. ಪ್ರತಿವರ್ಷದಂತೆ ಈ ಬಾರಿಯೂ ರಂಗಾಸಕ್ತರ ನಾಲಿಗೆಗೆ ರುಚಿ ನೀಡುತ್ತಿರುವುದು ಉತ್ತರ ಕರ್ನಾಟಕದ ಖಡಕ್ ಜೋಳದ ರೊಟ್ಟಿ. ಗದಗದಿಂದ ಬಂದಿರುವ 10ಮಂದಿ ತಂಡ ಹುಚ್ಚಳ್ ಚಟ್ನಿ, ಶೇಂಗಾ ಚಟ್ನಿಯೊಂದಿಗೆ ವಿಶೇಷ ಜೋಳದ ರೊಟ್ಟಿಯ ಸವಿಯನ್ನು ನೀಡುತ್ತಿದ್ದಾರೆ. ಪ್ರತಿದಿನವೂ ಸುಮಾರು 200ರಿಂದ 300ಪ್ಲೇಟ್ ಜೋಳದ ರೊಟ್ಟಿ ಮಾರಾಟವಾಗುತ್ತಿದ್ದು, ತುಂಬಾ ಬೇಡಿಕೆಯಿದೆ. ಇದಲ್ಲದೆ ದೋಸೆ, ವಡಾಪಾವ್, ಚಾಟ್ಸ್, ಚುರುಮುರಿ ಸೇರಿದಂತೆ ವಿಶೇಷ ತಿಂಡಿಗಳು ಚಪ್ಪರಿಸಿ ತಿನ್ನುವಂತೆ ಮಾಡಿವೆ.

ಹೋಟೆಲ್ ಮಾಲೀಕ  ಮಹದೇವು,  ಮಾತನಾಡಿ ಕಳೆದ ನಾಲ್ಕೈದು ವರ್ಷಗಳಿಂದಲೂ ಗದಗದಿಂದ ಜೋಳದ ರೊಟ್ಟಿ ಮಾಡಲೆಂದೆ 10ಮಂದಿ ತಂಡವನ್ನು ಕರೆಸಲಾಗುತ್ತಿದೆ. ಪ್ರತಿವರ್ಷದಿಂತೆ ಈ ಬಾರಿಯೂ ಜೋಳದ ರೊಟ್ಟಿಗೆ ತುಂಬಾ ಬೇಡಿಕೆಯಿದ್ದು, ಉತ್ತಮವಾಗಿ ಮಾರಾಟವಾಗುತ್ತಿದೆ. ಮಧ್ಯಾಹ್ನ 1ಗಂಟೆಗೆ ಆರಂಭವಾದರೆ ರಾತ್ರಿ 10ಗಂಟೆವರೆಗೂ ರೊಟ್ಟಿ ಲಭ್ಯವಿರಲಿದೆ. ಎಂದರು.

ಒಟ್ಟಿನಲ್ಲಿ ರಂಗಾಯಣದಲ್ಲಿ ನಡೆಯುತ್ತಿರುವ ಬಹುರೂಪಿ ಅಂತಾರಾಷ್ಟ್ರೀಯ ನಾಟಕೋತ್ಸವದಲ್ಲಿ ವಿದೇಶಗಳ ಜೊತೆ ದೇಶೀಯ ನಾಟಕಗಳ ಸೊಗಡು ಬೆರೆತು, ಆಹಾರ ಮೇಳವೂ ಮೇಳೈಸಿ, ಕಣ್ಣಿಗೂ, ಹೊಟ್ಟೆಗೂ ತಂಪು ಮಾಡುತ್ತಿರುವುದರಲ್ಲಿ ಎರಡು ಮಾತಿಲ್ಲ.

ಬಿ.ಎಂ.

 

Leave a Reply

comments

Related Articles

error: