ಪ್ರಮುಖ ಸುದ್ದಿಮೈಸೂರು

ಮೈಸೂರು ವಿಮಾನ ನಿಲ್ದಾಣ ನಾಗರಿಕರ ಸೇವೆಗೆ, ಏರ್ ಪೋರ್ಸ್ ಗೆ ನೀಡಲು ಬಿಡೋದಿಲ್ಲ : ಸಂಸದ ಪ್ರತಾಪ್ ಸಿಂಹ

ಮೈಸೂರು,ಫೆ.2:- ಭಾರತದ ಅತ್ಯದ್ಭುತ ರೈಲ್ವೆ ನಿಲ್ದಾಣಗಳಲ್ಲಿ ಮೈಸೂರು ರೈಲ್ವೇ ನಿಲ್ದಾಣ ಕೂಡ ಒಂದಾಗಬೇಕು. ಈ ನಿಟ್ಟಿನಲ್ಲಿ ಮುಂದಿನ 5 ವರ್ಷಗಳ ರೈಲ್ವೇ ಸಂಬಂಧ ಬೇಡಿಕೆ ಇರಬಾರದು.ಈ ನಿಟ್ಟಿನಲ್ಲಿ ವಿವಿಧ ಯೋಜನೆ ಜಾರಿಗೆ ಚಿಂತನೆ ನಡೆಸಲಾಗಿದೆ.ಮುಂದಿನ 5 ವರ್ಷಗಳಲ್ಲಿ ಮೈಸೂರಿನ ವಿಮಾನ ನಿಲ್ದಾಣಕ್ಕೆ ಸುಮಾರು 25 ಪ್ಲೈಟ್ ಗಳ ಸಂಚಾರವಾಗಲಿದೆ ಎಂದು ಕೊಡಗು-ಮೈಸೂರು ಸಂಸದ ಪ್ರತಾಪ್ ಸಿಂಹ ತಿಳಿಸಿದರು.

ಜಲದರ್ಶಿನಿಯಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕೇಂದ್ರದ ಬಜೆಟ್ ಆಶಾದಾಯಕವಾಗಿದೆ. ಭಾರತದ ಇತಿಹಾಸದಲ್ಲಿ ಎಲ್ಲಾ ವರ್ಗದವರ ಮುಖದಲ್ಲಿ ಮಂದಹಾಸ ತರುವ ಬಜೆಟ್ ಮಂಡಿಸಿದ್ದಾರೆ. ಕೂಲಿಕಾರ್ಮಿಕರು,ರೈತರು,ಮಧ್ಯಮ ವರ್ಗದವರು ಸೇರಿದಂತೆ ಎಲ್ಲಾ ವರ್ಗದವರಿಗೆ ಈ ಬಾರಿಯ ಬಜೆಟ್ ನೆರವಾಗಲಿದೆ. ರೈತರಿಗೆ ಸಹಾಯವಾಗಿ ಪ್ರತಿಯೊಬ್ಬರಿಗೂ 6 ಸಾವಿರ ಕೊಡುತ್ತಿದ್ದೇವೆ. ಜನ್ ಧನ್ ಅಕೌಂಟ್ ಮೂಲಕ ಎಲ್.ಪಿ.ಜಿ. ಸಬ್ಸಿಡಿ ನೇರವಾಗಿ ಜನರಿಗೆ ತಲುಪುತ್ತದೆ. ಮೋದಿ ಅವರಿಗೆ ನಾನು ಈ ಮೂಲಕ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ಮೋದಿ ಅವರು ರೈತರಿಗೆ ನೀಡುವಂತ 6 ಸಾವಿರ ದೊಡ್ಡ ಮೊತ್ತದ ಹಣವಾಗಿದೆ. ಮೈಸೂರಿನ ಆಲ್ ಇಂಡಿಯಾ ಸ್ಪೀಚ್ ಅಂಡ್ ಹಿಯರಿಂಗ್ ಗೆ 55 ಕೋಟಿ ನೀಡಿದ್ದಾರೆ. ಪ್ರಸಾದ್ ಸ್ಕೀಂ ನಲ್ಲಿ 100 ಕೋಟಿ ಸಿಕ್ಕಿದ್ದು, ಚಾಮುಂಡಿ ಬೆಟ್ಟದ ಅಭಿವೃದ್ಧಿಗೆ ಸಹಾಯಕಾರಿಯಾಗಿದೆ. ಬೆಟ್ಟದ ಅಭಿವೃದ್ಧಿ, ಭಕ್ತಿಗೆ ಬೇಕಿರೋ ಎಲ್ಲಾ ಸೌಲಭ್ಯಗಳನ್ನು ಕಲ್ಪಿಸಲು ಸಹಾಯಕಾರಿದೆ. ಉಡಾನ್ ಯೋಜನೆಯಲ್ಲಿ  ಮೈಸೂರಿಗೆ 6 ಪ್ಲೈಟ್ ಸಿಕ್ಕಿದೆ. ಇನ್ನೂ ಮೂರು ತಿಂಗಳಲ್ಲಿ ಮಂಡಕಳ್ಳಿ ವಿಮಾನ ನಿಲ್ದಾಣದಿಂದ 6 ವಿಮಾನಗಳು ಹಾರಾಟ ನಡೆಸಲಿವೆ ಎಂದು ತಿಳಿಸಿದರು.  ಮೈಸೂರು ವಿಮಾನ ನಿಲ್ದಾಣ ನಾಗರಿಕರ ಸೇವೆಗೆ ಮೀಸಲಿರಲಿದೆ. ರಾಜ್ಯ ಸರ್ಕಾರ ಮುಂದೆ ಬಂದರೂ ಏರ್ ಪೋರ್ಸ್ ಗೆ ವಹಿಸೋದಿಲ್ಲ. ಮೈಸೂರು ವಿಮಾನ ನಿಲ್ದಾಣ ಕೇಂದ್ರ ಸರ್ಕಾರಕ್ಕೆ ಸೇರಿದ್ದು.ಏರ್ ಪೋರ್ಸ್ ಗೆ ಕೊಟ್ಟರೆ ಇಲ್ಲಿ ವ್ಯವಸ್ಥೆ ಹಾಳಾಗಲಿದೆ.ಯಾವುದೇ ಕಾರಣಕ್ಕೂ ಏರ್ ಪೋರ್ಸ್ ಗೆ ನೀಡಲು ಬಿಡೋದಿಲ್ಲ. ರಾಜ್ಯ ಸರ್ಕಾರ ಏರ್ ಪೊರ್ಸ್ ಗೆ ಲ್ಯಾಂಡ್ ನೀಡಲು ಮುಂದಾಗಿದ್ದಾರೆ. ಈ ಯೋಜನೆ ಕೂಡಲೇ ಕೈಬಿಡಬೇಕು ಎಂದು ಒತ್ತಾಯಿಸಿದರು.

ತೆರಿಗೆ  ವಿನಾಯಿತಿ ದೋಖಾ ಎಂಬ ಸಿಎಂ ಕುಮಾರಸ್ವಾಮಿ ಹೇಳಿಕೆ ವಿಚಾರವಾಗಿ ಖಾರವಾಗಿ ಪ್ರತಿಕ್ರಿಯಿಸಿ ಅವರು ತೆರಿಗೆ ವಿನಾಯಿತಿಯಿಂದ ಏನು ಅನುಕೂಲ ವಾಗುತ್ತದೆ ಎಂಬುದು ಸಂಬಳ ತೆಗೆದುಕೊಳ್ಳುವ ನೌಕರರಿಗೆ ಮಾತ್ರ ಅರ್ಥವಾಗುತ್ತದೆ. ಕಮಿಷನ್ ಪಡೆಯುವ ರಾಜಕಾರಣಿಗಳಿಗೆ ಇದು ಅರ್ಥ ಆಗಲ್ಲ. ಪಿಯೂಶ್ ಗೋಯಲ್ ಅನುಭವಿ ಚಾರ್ಟರ್ಡ್ ಅಕೌಂಟೆಂಟ್. ಅವರು ಮೊದಲ ಬಾರಿ ಎಲ್ಲರಿಗೂ ಅನುಕೂಲವಾಗುವಂತೆ ಬಜೆಟ್ ಮಂಡಿಸಿದ್ದಾರೆ ಎನ್ನುವ ಮೂಲಕ ಪರೋಕ್ಷವಾಗಿ ಕುಮಾರಸ್ವಾಮಿಯವರ ಮೇಲೆ ಕಮಿಷನ್ ಆರೋಪ ಹೊರಿಸಿದರು.

ಲೋಕಸಭಾ ಚುನಾವಣಾ ವಿಚಾರವಾಗಿ ಮಾತನಾಡಿ ಚುನಾವಣೆ ಅಂತ ಬಂದರೆ ನನ್ನ ಎದುರಾಳಿ ಯಾರು ಅಂತ ನೋಡಲ್ಲ. ಮೋದಿ ಸ್ಪರ್ಧೆ ಮಾಡುವ ವಾರಣಾಸಿ ಬಿಟ್ಟು ಎಲ್ಲಾ ಕಡೆ ಟಿಕೆಟ್ ಆಕಾಂಕ್ಷಿಗಳು ಇದ್ದಾರೆ‌. ನಾನು ಈ ಬಾರಿ ಸುಲಭವಾಗಿ ಗೆಲ್ಲುತ್ತೇನೆ.2014 ರ ಚುನಾವಣೆ ನನಗೆ ತುಂಬಾ ಕಷ್ಟಕರವಾಗಿತ್ತು. ಆಗ ನನಗೆ ಕೇರಿಯ ಮಂದಿ ಯಾರೂ ಗೊತ್ತಿರಲಿಲ್ಲ. ಅಂತಹ ಸಂದರ್ಭದಲ್ಲೇ ಜನರು ನನ್ನನ್ನು ಗೆಲ್ಲಿಸಿದ್ದಾರೆ. ಈಗ ನನಗೆ ಕೇರಿಯ ಮಂದಿಯೆಲ್ಲಾ ಗೊತ್ತು. 2014 ರಲ್ಲಿ ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರದಲ್ಲಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಸಹ ಬಂದು ಹೋಗ್ತಿದ್ದರು. ಅಂತಹ ಪರಿಸ್ಥಿತಿಯಲ್ಲಿ ಜನರು ನನ್ನ ಗೆಲ್ಲಿಸಿದ್ದಾರೆ ಎನ್ನುವ ಮೂಲಕ ಈ ಬಾರಿಯೂ ಲೋಕಸಭಾ ಚುನಾವಣೆಯಲ್ಲಿ ಗೆಲ್ಲುವ ಹುಮ್ಮಸ್ಸು ತೋರಿಸಿದರು.

ಸುದ್ದಿಗೋಷ್ಠಿಯಲ್ಲಿ ಶಾಸಕ ಎಲ್.ನಾಗೇಂದ್ರ ಸೇರಿದಂತೆ ಹಲವರಿದ್ದರು. (ಕೆ.ಎಸ್,ಎಸ್.ಎಚ್)

 

Leave a Reply

comments

Related Articles

error: