ಪ್ರಮುಖ ಸುದ್ದಿ

ಫೆ.17 ರಂದು ಅರೆಭಾಷೆ ಗೌಡ ಜನಾಂಗದ ‘ವಧು-ವರರ ಸಮಾವೇಶ’

ರಾಜ್ಯ(ಮಡಿಕೇರಿ) ಫೆ.3 :- ಕೊಡಗು ಗೌಡ ನಿವೃತ್ತ ನೌಕರರ ಸಂಘದ ಆಶ್ರಯದಲ್ಲಿ 11ನೇ ವರ್ಷದ ಅರೆಭಾಷೆ ಗೌಡ ಜನಾಂಗದ ‘ವಧು-ವರರ ಸಮಾವೇಶ’ ಫೆ.17 ರಂದು ನಗರದ ಕೊಡಗು ಗೌಡ ವಿದ್ಯಾಸಂಘದ ಸಭಾಂಗಣದಲ್ಲಿ ನಡೆಯಲಿದೆ.
ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಸಂಘದ ಅಧ್ಯಕ್ಷ ಕೋರನ ಸಿ.ವಿಶ್ವನಾಥ್, ಅರೆಭಾಷೆ ಗೌಡ ಜನಾಂಗದ ಯುವಕ ಯುವತಿಯರಿಗೆ ಕಂಕಣ ಭಾಗ್ಯ ದೊರಕಿಸಿಕೊಡುವ ದಿಸೆಯಲ್ಲಿ ನಿವೃತ್ತ ನೌಕರರ ಸಂಘ ಶ್ರಮಿಸುತ್ತಿದ್ದು, ಇಲ್ಲಿಯವರೆಗೆ ಸಮಾವೇಶದ ಮೂಲಕ 45 ಕ್ಕೂ ಹೆಚ್ಚಿನ ಸಂಬಂಧಗಳನ್ನು ಬೆಸೆಯಲಾಗಿದೆಯೆಂದು ತಿಳಿಸಿದರು. ಸೂಚಿತ ಫೆ.17 ರಂದು ಬೆಳಗ್ಗೆ 9.30 ರಿಂದ ಸಮಾವೇಶ ಆರಂಭಗೊಳ್ಳಲಿದೆ ಎಂದು ತಿಳಿಸಿದರು.
ಪ್ರಸಕ್ತ ಸಂಘದಲ್ಲಿ ಸುಮಾರು 200 ಕ್ಕೂ ಹೆಚ್ಚಿನ ವಧು ವರರು ನೋಂದಾಯಿಸಿಕೊಂಡಿದ್ದು, ಈ ಪ್ರಕ್ರಿಯೆ ವರ್ಷ ಪೂರ್ತಿ ನಡೆಯುತ್ತದೆ. ಆದರೆ, ಸಮಾವೇಶವನ್ನು ವರ್ಷಕ್ಕೊಮ್ಮೆ ಮಾತ್ರ ನಡೆಸಲಾಗುತ್ತದೆ. ಆಸಕ್ತರು 300 ರೂ. ಶುಲ್ಕ ಪಾವತಿಸಿ ನೋಂದಣಿ ಮಾಡಿಕೊಳ್ಳಬಹುದು ಮತ್ತು ಸಂಘದಲ್ಲಿ ಅದಾಗಲೆ ನೋಂದಣಿಯಾಗಿರುವ ವಧು ಅಥವಾ ವರರ ಮಾಹಿತಿಯನ್ನು ಗಮನಿಸಿ ತಮ್ಮ ಇಚ್ಚೆಯಂತೆ ವಿವಾಹವಾಗಲು ಅವಕಾಶವನ್ನು ಒದಗಿಸಲಾಗುತ್ತಿದೆಯೆಂದು ಮಾಹಿತಿ ನೀಡಿದರು.
ಪ್ರಸ್ತುತ ಅರೆ ಭಾಷಾ ಸಮೂಹದಲ್ಲಿ ಉನ್ನತ ಶಿಕ್ಷಣ ಪಡೆದ ಯುವತಿಯರಿಗೆ ಅದಕ್ಕೆ ತಕ್ಕಂತೆ ವರನು ಲಭ್ಯವಾಗುತ್ತಿಲ್ಲ. ಇಂತಹ ಸಮಾವೇಶಗಳ ಮೂಲಕ ವಧು ವರರ ಸಂಪೂರ್ಣ ವಿವರವನ್ನು ಪರಸ್ಪರ ಪಡೆದುಕೊಳ್ಳುವ ಮೂಲಕ ವಿವಾಹದ ಹಾದಿ ಸುಗಮಗೊಳಿಸುವ ಪ್ರಯತ್ನ ತಮ್ಮದಾಗಿದೆಯೆಂದು ಹೇಳಿದರು.
ಸಮಾವೇಶದಲ್ಲಿ ವಧು ಇಲ್ಲವೆ ವರ ನಿಯೋಜಿತ ನಿರೂಪಕರ ಸಮ್ಮುಖದಲ್ಲಿ ತಮ್ಮ ಶಿಕ್ಷಣ, ಉದ್ಯೋಗ, ತಾವು ಅಪೇಕ್ಷಿಸುವ ವರ ಇಲ್ಲವೆ ವಧುವಿನ ಗುಣ ಲಕ್ಷಣಗಳ ಬಗ್ಗೆ ಮಾಹಿತಿಯನ್ನು ನೀಡುತ್ತಾರೆ. ಅದರಂತೆ ಸ್ಥಳದಲ್ಲೆ ಸಂಬಂಧ ಕುದುರಿಸಲು ಅವಕಾಶಗಳು ಇರುತ್ತವೆ ಎಂದು ಸ್ಪಷ್ಟಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಕುದುಪಜೆ ಎಂ. ಬೋಜಪ್ಪ, ಕಾರ್ಯದರ್ಶಿ ಬೈತಡ್ಕ ಎ.ಬೆಳ್ಯಪ್ಪ ಹಾಗೂ ಖಜಾಂಚಿ ಪೊನ್ನಚ್ಚನ ಜಿ. ಸೋಮಣ್ಣ ಉಪಸ್ಥಿತರಿದ್ದರು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: