ಮೈಸೂರು

ಪ. ಜಾತಿ/ ಪ. ಪಂಗಡದ ರೈತರಿಗೆ ಮೀಸಲಿರುವ ಅನುದಾನವನ್ನು ಪೂರ್ಣ ಪ್ರಮಾಣದಲ್ಲಿ ವೆಚ್ಚ ಮಾಡಲು ಸಚಿವ ಮನಗೊಳಿ ಸೂಚನೆ

ಮೈಸೂರು,ಫೆ.4:-  ತೋಟಗಾರಿಕೆ ಸಚಿವರಾದ ಎಂ.ಸಿ. ಮನಗೊಳಿರವರ ಅಧ್ಯಕ್ಷತೆಯಲ್ಲಿ  ಮೈಸೂರಿನ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಮೈಸೂರು, ವಿಭಾಗ ಮಟ್ಟದ ಪ್ರಗತಿ ಪರಿಶೀಲನಾ ಸಭೆ ಇತ್ತೀಚೆಗೆ ನಡೆಯಿತು.

ತೋಟಗಾರಿಕೆ ಸಚಿವ ಎಂ.ಸಿ. ಮನಗೊಳಿರವರು ಮೈಸೂರಿನ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಮೈಸೂರು, ಮಂಡ್ಯ, ಚಾಮರಾಜನಗರ, ಕೊಡಗು, ಚಿಕ್ಕಮಗಳೂರು, ಉಡುಪಿ ಹಾಗೂ ಹಾಸನ ಜಿಲ್ಲೆಗಳ ವಿಭಾಗ ಮಟ್ಟದ ಪ್ರಗತಿ ಪರಿಶೀಲನಾ ಸಭೆಯನ್ನು ನಡೆಸಿದರು.

ಪ್ರಗತಿ ಪರಿಶೀಲನಾ ಸಚಿವರ ವಿಶೇಷ ಕರ್ತವ್ಯಾಧಿಕಾರಿಯಾದ  ವಿನಯ್‍ಕುಲಕರ್ಣಿರವರು ಹಾಗೂ ವಿಭಾಗಮಟ್ಟದ ಜಂಟಿ ನಿರ್ದೇಶಕರಾದ ಹೆಚ್.ಎಂ. ನಾಗರಾಜ್‍ ಅವರು ಸಭೆಯಲ್ಲಿ ಉಪಸ್ಥಿತರಿದ್ದರು.  ಮೈಸೂರು ಜಿಲ್ಲೆಯ ತೋಟಗಾರಿಕೆ ಉಪನಿರ್ದೇಶಕರಾದ ಡಿ. ಮಂಜುನಾಥ್‍ ಅವರು  ಸಚಿವರು ಹಾಗೂ ಭಾಗವಹಿಸಿದ ಅಧಿಕಾರಿಗಳಿಗೆ ಸಭೆಗೆ ಸ್ವಾಗತ ಕೋರಿದರು. ಜಿಲ್ಲೆಗಳ ತೋಟಗಾರಿಕೆ ಉಪನಿರ್ದೇಶಕರುಗಳು ಹಾಗೂ ತಾಲೂಕು ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದು, ಇಲಾಖೆಯಿಂದ ಅನುಷ್ಠಾನಗೊಳಿಸುತ್ತಿರುವ ವಿವಿಧ ಯೋಜನೆಗಳ ಪ್ರಗತಿಯನ್ನು ವಿವರಿಸಿದರು.

ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆ, ಪ್ರಧಾನಮಂತ್ರಿ ಕೃಷಿ ಸಿಂಚಾಯ್ ಯೋಜನೆ, ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ, ರಾಜ್ಯ ವಲಯ ಯೋಜನೆ, ಜಿಲ್ಲಾ ಪಂಚಾಯತ್ ಯೋಜನೆಗಳಡಿ ಪ್ರಗತಿ ಪರಿಶೀಲಿಸಿ, ಬಿಡುಗಡೆಯಾದ ಮೊತ್ತಕ್ಕೆ ತ್ವರಿತವಾಗಿ ಪೂರ್ಣ ಪ್ರಗತಿ ಸಾಧಿಸಿ ರೈತರಿಗೆ ಇಲಾಖಾ ಸೌಲಭ್ಯಗಳನ್ನು ತಲುಪಿಸುವಂತೆ ಸೂಚಿಸಿದರು. ಗ್ರಾಮ ಮಟ್ಟದಲ್ಲಿ ಇಲಾಖಾ ಯೋಜನೆಗಳ ಬಗ್ಗೆ ರೈತರಲ್ಲಿ ಅರಿವು ಮೂಡಿಸಲು ವ್ಯಾಪಕ ಪ್ರಚಾರ ನೀಡಲು ಹಾಗೂ ಫಲಾನುಭವಿಗಳ ಆಯ್ಕೆ ಸಂದರ್ಭದಲ್ಲಿ ಸಣ್ಣ/ಅತಿ ಸಣ್ಣ ರೈತರನ್ನು ಆದ್ಯತೆ ಮೇರೆಗೆ ಗುರುತಿಸಿ ಸೌಲಭ್ಯ ನೀಡಲು ತಿಳಿಸಿದರು. ಒಣಗಿರುವ ತೆಂಗಿನ ಮರಗಳಿಗೆ ನೀಡಬೇಕಾಗಿರುವ ಸಹಾಯಧನವನ್ನು ಡಿ.ಬಿ.ಟಿ. ಮುಖೇನ ತ್ವರಿತಗತಿಯಲ್ಲಿ ಪಾವತಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ವಿವಿಧ ಕಾರ್ಯಕ್ರಮಗಳಡಿ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ ರೈತರಿಗೆ ಮೀಸಲಿರುವ ಅನುದಾನವನ್ನು ಪೂರ್ಣ ಪ್ರಮಾಣದಲ್ಲಿ ವೆಚ್ಚ ಮಾಡಲು ಸೂಚಿಸಿದರು.

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ತೋಟಗಾರಿಕೆ ಬೆಳೆಗಳನ್ನು ಬೆಳೆಯಲು ಉತ್ತೇಜಿಸಲು ರೈತರಿಗೆ ಕೂಲಿ ಮತ್ತು ಸಾಮಗ್ರಿ ವೆಚ್ಚವನ್ನು ಭರಿಸಲು ಹೆಚ್ಚಿನ ಅನುದಾನವನ್ನು ಬಳಕೆ ಮಾಡಿಕೊಳ್ಳಲು ತಿಳಿಸಿದರು.  ಕ್ಷೇತ್ರ ಮತ್ತು ನರ್ಸರಿಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ತೆಂಗು, ಮಾವು, ಸಪೋಟ, ಸೀಬೆ ಇತ್ಯಾದಿ ತೋಟಗಾರಿಕೆ ಬೆಳೆಗಳ ಸಸ್ಯೋತ್ಪತಿ ಕೈಗೊಂಡು ರೈತರಿಗೆ ಉತ್ತಮ ಗುಣಮಟ್ಟದ ಗಿಡಗಳನ್ನು ರಿಯಾಯತಿ ದರದಲ್ಲಿ ವಿತರಿಸಲು ಸೂಚಿಸಿದರು. ಅಧಿಕಾರಿಗಳು ಅಗ್ಗಿಂದಾಗೆ ರೈತರ ತಾಕುಗಳಿಗೆ ಬೇಟಿ ನೀಡಿ ರೈತರಿಗೆ ತಾಂತ್ರಿಕ ಮಾಹಿತಿಯನ್ನು ನೀಡುವಂತೆ ತಿಳಿಸಿದರು.  ಯಾಂತ್ರೀಕರಣ, ಕೃಷಿಹೊಂಡ, ಹಸಿರುಮನೆ ಘಟಕಗಳಿಗೆ ಸಹಾಯಧನ ವಿತರಿಸುವ ಸಂದರ್ಭದಲ್ಲಿ ಯಾವುದೇ ಲೋಪದೋಷಗಳು ಬರದಂತೆ ಕ್ರಮವಹಿಸಲು ತಿಳಿಸಿದರು.

ತೋಟಗಾರಿಕೆ ಜಂಟಿ ನಿರ್ದೇಶಕರು, ಮೈಸೂರು ವಿಭಾಗರವರು   ವಂದನಾರ್ಪಣೆ ಸಲ್ಲಿಸಿ, ಸಭೆಯನ್ನು ಮುಕ್ತಾಯಗೊಳಿಸಲಾಯಿತು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: