ಮೈಸೂರು

ಹಣಕ್ಕಾಗಿ ಅಪಹರಣವಾಗಿದ್ದ  ವ್ಯಾಪಾರಿಯ ಅನುಮಾನಾಸ್ಪದ ಸಾವಿನ ಕೊಲೆ ಪ್ರಕರಣವನ್ನು ಭೇದಿಸಿದ ಪೊಲೀಸರು : 6ಮಂದಿ ಬಂಧನ

ಮೈಸೂರು,ಫೆ.4:- ಹಣಕ್ಕಾಗಿ ಅಪಹರಣವಾಗಿದ್ದ  ಮೈಸೂರು ನಗರದ ಫಾಮ್ ಆಯಿಲ್(ಅಡಿಗೆ ಎಣ್ಣೆ) ವ್ಯಾಪಾರಿಯ ಅನುಮಾನಾಸ್ಪದ ಸಾವಿನ ಕೊಲೆ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿರುವ ಬನ್ನೂರು ಪೊಲೀಸರು ಅನುಮಾನಾಸ್ಪದ ಸಾವಿನ ಜಾಡನ್ನು ಹಿಡಿದು ಹಣಕ್ಕಾಗಿ  ವ್ಯಾಪಾರಿಯನ್ನು ಅಪಹರಿಸಿ ಕೊಲೆ ಮಾಡಿ ಬೀಸಾಡಿದ್ದ 6 ಮಂದಿ ಹಂತಕರನ್ನು ಬಂಧಿಸಲಾಗಿದೆ ಎಂದು ಎಸ್ಪಿ ಅಮಿತ್ ಸಿಂಗ್ ಮಾಹಿತಿ ನೀಡಿದ್ದಾರೆ.

ಈ ಕುರಿತು ಮಾಹಿತಿ ನೀಡಿದ ಅವರು ಕೃತ್ಯಕ್ಕೆ ಬಳಸಿದ್ದ ಜೈಲೋ ಕಾರು, 1,54,450 ರೂ ನಗದು, 6 ಮೊಬೈಲ್ ಗಳು, ಮೃತರ ಸ್ಕೂಟಿ ಮತ್ತು ಮೊಬೈಲ್ ವಶಪಡಿಸಿಕೊಳ್ಳಲಾಗಿದೆ.

ಬಂಧಿತರನ್ನು ಕೆ.ಆರ್.ಮೊಹಲ್ಲಾದ ಲೇಟ್ ಶ್ರೀನಿವಾಸ ಎಂಬವರ ಪುತ್ರ ಎಂ.ಎಸ್.ಶ್ರೀಧರ, ಮೇಟಗಳ್ಳಿಯ ಲೇಟ್ ಮಹೇಶ ಎಂಬುವರ ಪುತ್ರ ಮಂಜುನಾಥ @ ಚೋಳು, ಕುಂಬಾರಕೊಪ್ಪಲು ನಾಗರಾಜು ಎಂಬುವರ ಪುತ್ರ ಮಂಜು @ ಮಂಜುನಾಥ, ಇಟ್ಟಿಗೆಗೂಡು ಲೇಟ್ ಗೋಪಾಲ್ ಎಂಬುವರ ಪುತ್ರ ಸಂತೋಷ, ಬನ್ನೂರು ಟೌನ್ ನ ಇಮ್ರಾನ್ @ ಗಬ್ಬರ್ ಹಾಗೂ ಇಮ್ರಾನ್ ಪಾಷ @ ಮಾಯಿ ಎಂದು ಗುರುತಿಸಲಾಗಿದೆ. ಇವರು ಮೈಸೂರು ನಗರದ ಕೆ.ಆರ್.ಮೊಹಲ್ಲಾದ ಸಿ.ಆರ್.ರಾಜು ಎಂಬುವರ ಪುತ್ರ ಚೆಂದಿಲ್(38) ಎಣ್ಣೆ ವ್ಯಾಪಾರಿಯನ್ನು ಕಲೆ ಮಾಡಿದ್ದರು. ತಾಲೂಕಿನ ಬನ್ನೂರು ಪೊಲೀಸ್ ಠಾಣೆಯ ವ್ಯಾಪ್ತಿಯ ರಾಜ ಪರಮೇಶ್ವರಿ ನಾಲೆ(ಬಿದರಹಳ್ಳಿಹುಂಡಿ ಸಮೀಪ) ಬಳಿ ಕಳೆದ ಜ.29 ರಂದು ಅಡಿಗೆ ಎಣ್ಣೆ ವ್ಯಾಪಾರಿ ಚೆಂದಿಲ್ ಮೃತದೇಹ ಪತ್ತೆಯಾಗಿತ್ತು. ಅನುಮಾನಾಸ್ಪದವಾಗಿ ಅವರು  ಸಾವನ್ನಪ್ಪಿದ್ದರು. ಆರು ಮಂದಿ ಹಂತಕರು ಹಣಕ್ಕಾಗಿ ವ್ಯಾಪಾರಿಯನ್ನು ಅಪಹರಿಸಿ, ಹೆಚ್ಚಿನ ಹಣ ಸಿಗದ್ದಕ್ಕೆ ಹತ್ಯೆ ಮಾಡಿ ಪರಾರಿಯಾಗಿ  ಇದೀಗ ಪೊಲೀಸರ ಅತಿಥಿಯಾಗಿದ್ದಾರೆ.

ಬನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣದ ಮಾಹಿತಿಯನ್ನು ನೀಡಿದ ಎಎಸ್ಪಿ ಪಿ.ವಿ.ಸ್ನೇಹ ಅವರು ಫಾಮ್ ಆಯಿಲ್ ವ್ಯಾಪಾರ ಕುದುರಿಸುವ ನೆಪದಲ್ಲಿ ಕಳೆದ ಜ.28 ರಂದು ಬನ್ನೂರು ಬಳಿ ವ್ಯಾಪಾರಿ ಚೆಂದಿಲ್ ನನ್ನು ಅಪಹರಿಸಿದ್ದ ಹಂತಕರು 25 ಲಕ್ಷ ರೂಗಳಿಗೆ ಬೇಡಿಕೆಯಿಟ್ಟಿದ್ದಾರೆ. ಹಣ ಕೊಡದಿದ್ದರೆ ಕೊಲೆ ಮಾಡುವುದಾಗಿ ಬೆದರಿಸಿದ್ದರಿಂದ ಅಷ್ಟೊಂದು ಹಣವಿಲ್ಲ. ಸ್ವಲ್ಪ ಹಣ ಹೊಂದಿಸಿ ಕೊಡುವುದಾಗಿ ಒಪ್ಪಿಸಿ ಬೇಡಿಕೆಗೆ ಮಣಿದು ಅಂದೇ ರಾತ್ರಿ ಬಾಮೈದ ನೀಲಕಂಠ ಅವರಿಗೆ ಕರೆ ಮಾಡಿ 2,22,೦೦೦ ರೂಗಳ ಹಣವನ್ನು ನೀಡುವಂತೆ ಸೂಚಿಸಿದ್ದಾರೆ. ಮೊಬೈಲ್ ಕರೆಯ ನಂತರ ಮುಖಕ್ಕೆ ಕರ್ಚೀಫ್ ಕಟ್ಟಿಕೊಂಡಿದ್ದ ಹಂತಕರಲ್ಲಿ ಒಬ್ಬ ಹಣವನ್ನು ಸ್ವೀಕರಿಸಿದ್ದಾನೆ. ಪೊಲೀಸರಿಗೆ ಸಿಕ್ಕಿ ಬೀಳಬೇಕಾಗುತ್ತದೆ ಎಂಬ ಭಯದಲ್ಲಿ ವೈಯರ್ ನಿಂದ ಚೆಂದಿಲ್ ಕುತ್ತಿಗೆ ಬಿಗಿದು ಹತ್ಯೆ ಮಾಡಿ ನಾಲೆ ಬಳಿ ಬಿಸಾಕಿ ಪರಾರಿಯಾಗಿರುವುದಾಗಿ ಹೇಳಿದ್ದಾರೆ.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಎಸ್ಪಿ ಅಮಿತ್ ಸಿಂಗ್, ನಂಜನಗೂಡು ಉಪ ವಿಭಾಗದ ಡಿವೈ ಎಸ್ಪಿ ಸಿ.ಮಲ್ಲಿಕ್ ಮಾರ್ಗದರ್ಶನದಲ್ಲಿ ಪೊಲೀಸ್ ಸರ್ಕಲ್ ಇನ್ಸಪೆಕ್ಟರ್ ಎಂ.ಆರ್.ಲವ ಮತ್ತು ಬನ್ನೂರು ಪಿಎಸ್ ಐ ಡಿ.ಎನ್.ಅಜಯ್ ಕುಮಾರ್ ನೇತೃತ್ವದ ತಂಡವನ್ನು ರಚನೆ ಮಾಡಲಾಗಿತ್ತು. ತನಿಖೆಯನ್ನು ಚುರುಕುಗೊಳಿಸಿದ ಪೊಲೀಸರ ತಂಡ ಪ್ರಕರಣವನ್ನು ಭೇದಿಸಿ ಆರು ಹಂತಕರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಹಂತಕರಿಂದ ಕೃತ್ಯಕ್ಕೆ ಬಳಸಿದ್ದ ಜೈಲೋ ಕಾರು(ಕೆಎ ೦3, ಎಇ 3291), 6 ಮೊಬೈಲ್ ಗಳು ಹಾಗೂ 1,54,450 ರೂಗಳ ನಗದು ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಮೃತರ ಸುಜುಕಿ ಅಸಸ್ (ಕೆಎ 09, ಇಜಡ್ 8138) ಹಾಗೂ ಮೊಬೈಲ್ ಪೊಲೀಸರ ವಶದಲ್ಲಿದೆ. ಪತ್ತೆ ಕಾರ್ಯಚರಣೆಯಲ್ಲಿ ಎಎಸ್ ಐ ಬಿ.ವೈ.ಶಿವಣ್ಣ, ಮುಖ್ಯ ಪೇದೆಗಳಾದ ಎಸ್.ಜೆ.ಮಂಜುನಾಥ, ನಾರಾಯಣ, ಸೋಮಶೇಖರ್, ಪ್ರಭಾಕರ, ನಾಗೇಂದ್ರ, ಮುಕುಂದ, ಪೇದೆಗಳಾದ ಮಹೇಶ, ಇಸ್ಮಾಯಿಲ್, ಗಿರೀಶ್, ಚಾಲಕರಾದ ಪುಟ್ಟಸ್ವಾಮಿ ಹಾಗೂ ವಿಜಯಕುಮಾರ್ ಭಾಗವಹಿಸಿದ್ದರು ಎಂದು ಮಾಹಿತಿ ನೀಡಿದರು.

ಘಟನೆ ನಡೆದ ಕೆಲವೇ ದಿನಗಳಲ್ಲಿ ಪ್ರಕರಣವನ್ನು ಭೇದಿಸಿದ ಬನ್ನೂರು ಪೊಲೀಸರ ಕಾರ್ಯವನ್ನು ಶ್ಲಾಘಿಸಿರುವ ಎಸ್ಪಿ ಅಮಿತ್ ಸಿಂಗ್ ನಗದು ಬಹುಮಾನವನ್ನೂ ಘೋಷಿಸಿದ್ದಾರೆ. 6 ಮಂದಿ ಹಂತಕರನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿ ನ್ಯಾಯಾಂಗ ಬಂಧನದಲ್ಲಿಡುವಂತೆ ಆದೇಶಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: