ಕರ್ನಾಟಕಪ್ರಮುಖ ಸುದ್ದಿ

ಮಂಡ್ಯ ಕಣಕ್ಕೆ ಸುಮಲತಾ ಎಂಟ್ರಿ: ದೇವೇಗೌಡರ ನಡೆ ಏನು?

ಮಂಡ್ಯ (ಫೆ.4): ಮಂಡ್ಯ ಕ್ಷೇತ್ರದಿಂದ ಸುಮಲತಾ ಅಂಬರೀಶ್ ಅವರನ್ನು ಕಣಕ್ಕಿಳಿಸಲು ಕಾಂಗ್ರೆಸ್ ತಯಾರಿ ನಡೆಸಿದೆ ಎನ್ನಲಾಗಿದ್ದು, ಸುಮಲತಾ ಅವರು ಕೂಡ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿರುವ ಕಾರಣ ಮಾಜಿ ಪ್ರಧಾನಿ ದೇವೇಗೌಡರ ನಡೆ ಕುತೂಹಲ ಕೆರಳಿಸಿದೆ.

ಮುಂದಿನ ಲೋಕಸಭಾ ಚುನಾವಣೆಗೆ ಮಂಡ್ಯ ಕ್ಷೇತ್ರದಿಂದ ಮಾಜಿ ಪ್ರಧಾನಿ ದೇವೇಗೌಡರು ತಮ್ಮ ಮೊಮ್ಮಗ ನಿಖಿಲ್ ಕುಮಾರಸ್ವಾಮಿ ಅವರನ್ನು ಕಣಕ್ಕಿಳಿಸುವ ಚಿಂತನೆಯಲ್ಲಿರುವಾಗಲೇ ಇದೀಗ ಕಾಂಗ್ರೆಸ್‌ನಿಂದ ಮುಂಬರುವ ಲೋಕಸಭಾ ಚುನಾವಣೆಗೆ ಸುಮಲತಾ ಅಂಬರೀಶ್ ಅವರನ್ನು ಅಭ್ಯರ್ಥಿಯನ್ನಾಗಿಸುವ ತಂತ್ರ ರೂಪಿಸಿದೆ ಎನ್ನಲಾಗಿದೆ. ಇದಕ್ಕೆ ಸುಮಲತಾ ಅವರು ಕೂಡ ಒಲವು ತೋರಿಸಿರುವುದು ಭಾರೀ ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ.

ಮಂಡ್ಯ ಕ್ಷೇತ್ರ ಜೆಡಿಎಸ್‍ನ ಭದ್ರಕೋಟೆಯಾಗಿದ್ದು, ಇಲ್ಲಿಂದ ನಿಖಿಲ್ ಕುಮಾರಸ್ವಾಮಿ ಅವರನ್ನು ಕಣಕ್ಕಿಳಿಸಿದರೆ ಸುಲಭವಾಗಿ ಗೆಲುವು ಪಡೆಯಬಹುದೆಂಬ ಲೆಕ್ಕಾಚಾರ ಜೆಡಿಎಸ್ ವರಿಷ್ಠರದ್ದಾಗಿತ್ತು. ಆದರೆ ಸುಮಲತಾ ಅವರ ರಾಜಕೀಯ ಪ್ರವೇಶದೊಂದಿಗೆ ಪರಿಸ್ಥಿತಿಯೇ ಬದಲಾಗಿದೆ. ಈ ಎಲ್ಲ ಬೆಲವಣಿಗೆಗಳ ಜತೆಗೆ ಹಾಲಿ ಸಂಸದರಾಗಿರುವ ಎಲ್.ಆರ್.ಶಿವರಾಮೇಗೌಡರು ಕೂಡ ತಾನೇ ಮುಂದಿನ ಲೋಕಸಭಾ ಚುನಾವಣೆಗೆ ಜೆಡಿಎಸ್ ನಿಂದ ಅಭ್ಯರ್ಥಿ ಎಂಬ ಮಾತನ್ನಾಡಿದ್ದಾರೆ.

ಈಗಾಗಲೇ ಜೆಡಿಎಸ್ 12 ಲೋಕಸಭಾ ಕ್ಷೇತ್ರಗಳನ್ನು ತಮಗೆ ಬಿಟ್ಟುಕೊಡುವಂತೆ ಕಾಂಗ್ರೆಸ್ ವರಿಷ್ಠರಲ್ಲಿ ಒತ್ತಡ ಹಾಕುತ್ತಿದೆ. ಇದರಲ್ಲಿ ಜೆಡಿಎಸ್ ಶಕ್ತಿ ಕೇಂದ್ರ ಮಂಡ್ಯವೇ ಪ್ರಮುಖವಾಗಿದ್ದು, ಈ ಕ್ಷೇತ್ರದಿಂದ ಜೆಡಿಎಸ್ ವರಿಷ್ಠರ ಕುಟುಂಬದ ಸದಸ್ಯರನ್ನು ಕಣಕ್ಕಿಳಿಸುವ ಪೂರ್ವ ಸಿದ್ಧತೆಗಳು ನಡೆದಿವೆ.

ಇತ್ತೀಚಿನ ರಾಜಕೀಯ ಬೆಳವಣಿಗೆಯಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಅವರನ್ನು ಕಣಕ್ಕಿಳಿಸುವಂತೆ ಜೆಡಿಎಸ್‍ನ ಒಂದು ಗುಂಪು ಪ್ರಬಲವಾಗಿ ಲಾಬಿ ನಡೆಸುತ್ತಿದ್ದು, ಇದಕ್ಕೆ ಟಾಂಗ್ ನೀಡುವ ನಿಟ್ಟಿನಲ್ಲಿ ಕಾಂಗ್ರೆಸ್ ಸುಮಲತಾ ಅವರ ಸ್ಪರ್ಧಾಕಾಂಕ್ಷಿಯನ್ನು ಮುನ್ನಲೆಗೆ ತಂದಿದೆ. ಅಂಬರೀಶ್ ಸಾವಿನ ಸಂದರ್ಭ ಮಾನವೀಯತೆ ಮೆರೆದು ಅಂಬರೀಶ್ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತು ಜೆಡಿಎಸ್‍ನ ಸಮಸ್ತ ನಾಯಕರು ಈಗ ಅಂಬರೀಶ್ ಕುಟುಂಬವನ್ನು ರಾಜಕೀಯವಾಗಿ ಕೈ ಹಿಡಿಯಲು ಏನು ಮಾಡುತ್ತಾರೆ ಎನ್ನುವುದು ಪ್ರಶ್ನೆಯಾಗಿದೆ.

ಅಂಬರೀಶ್ ಅವರು ತಮ್ಮ ರಾಜಕೀಯ ಬಹುಪಾಲು ದಿನಗಳನ್ನು ಕಾಂಗ್ರೆಸ್‌ನಲ್ಲಿ ಕಳೆದಿದ್ದರು ಜೆಡಿಎಸ್ ಜೊತೆ ಅದರಲ್ಲೂ ವಿಶೇಷವಾಗಿ ದೇವೇಗೌಡರ ಕುಟುಂಬದೊಡನೆ ಉತ್ತಮ ಒಡನಾಟ ಹೊಂದಿದ್ದರು. ಜಿಲ್ಲೆಯ ಕಾಂಗ್ರೆಸ್ ನಾಯಕರು ನೇರವಾಗಿ ಸುಮಲತಾ ಅವರನ್ನು ಚುನಾವಣೆಗೆ ಇಳಿಯುವಂತೆ ಒತ್ತಾಯ ಮಾಡಿದರೆ ಅದಕ್ಕೆ ಹೈಕಮಾಂಡ್ ನಿಂದ ಕಡಿವಾಣ ಬೀಳುತ್ತದೆ ಎಂಬ ಕಾರಣಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಅಭಿಮಾನಿಗಳ ಮೂಲಕ ಸುಮಲತಾ ಅವರನ್ನು ಚುನಾವಣಾ ರಾಜಕಾರಣಕ್ಕೆ ಆಹ್ವಾನಿಸುತ್ತಿದೆ. ಇದು ಜೆಡಿಎಸ್ ವಿರುದ್ಧ ಕಾಂಗ್ರೆಸ್ ಮಾಡುತ್ತಿರುವ ಪ್ರಮುಖ ರಾಜಕೀಯ ತಂತ್ರವಾಗಿದೆ. ಈಗ ಎಲ್ಲರ ಚಿತ್ತ ದೇವೇಗೌಡರ ನಡೆಯ ಕಡೆ ಕೇಂದ್ರೀಕರಿಸಿದೆ. (ಎನ್.ಬಿ)

Leave a Reply

comments

Related Articles

error: