ಕರ್ನಾಟಕಪ್ರಮುಖ ಸುದ್ದಿ

ಹಾಸನ: ಫೆ.19ರಂದು ಬೃಹತ್ ಕಂದಾಯ ಮತ್ತು ಪಿಂಚಣಿ ಅದಾಲತ್

ಹಾಸನ (ಫೆ.5): ಹಾಸನ ತಾಲ್ಲೂಕಿನ ಶಾಂತಿಗ್ರಾಮ ಮತ್ತು ಕಟ್ಟಾಯ ಹೋಬಳಿಯ ರೈತರಿಗೆ ಅನುಕೂಲವಾಗುವಂತೆ ಮೊಸಳೆಹೊಸಹಳ್ಳಿಯಲ್ಲಿ ಶ್ರೀ ಅನಿಕೇತನ ನಿತ್ಯಾನಂದ ಆಶ್ರಮದಲ್ಲಿ ಫೆ.19 ರಂದು ಮಧ್ಯಾಹ್ನ 2 ಗಂಟೆಗೆ ಬೃಹತ್ ಕಂದಾಯ ಅದಾಲತ್ ಹಾಗೂ ಪಿಂಚಣಿ ಅದಾಲತ್ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಉಪವಿಭಾಗಾಧಿಕಾರಿ ಡಾ. ಹೆಚ್.ಎಲ್. ನಾಗರಾಜ್ ಅವರು ತಿಳಿಸಿದ್ದಾರೆ.

ಸರ್ಕಾರವು ಹಾಸನ ತಾಲ್ಲೂಕನ್ನು ಭೂ ನಾಮಾಂಕನ ಯೋಜನೆಗೆ ಆಯ್ಕೆ ಮಾಡಿದ್ದು ಖಾತೆದಾರರ ಪಹಣಿಗಳು ದೋಷಪೂರಿತವಾಗಿದ್ದು ಅವುಗಳನ್ನು ತಿದ್ದುಪಡಿ ಮಾಡಿ ಸರಿಪಡಿಸಲು ಫೆ.19 ಮಧ್ಯಾಹ್ನ 2 ಗಂಟೆಗೆ ಶ್ರೀ ಅನಿಕೇತನ ನಿತ್ಯನಂದ ಆಶ್ರಮ ಮೊಸಳೆಹೊಸಹಳ್ಳಿಯಲ್ಲಿ ನಡೆಯುವ ಕಂದಾಯ ಅದಾಲತ್ ಕಾರ್ಯಕ್ರಮದಲ್ಲಿ ಹಾಜರಿದ್ದು ದಾಖಲಾತಿಗಳನ್ನು ಸರಿಪಡಿಸಿಕೊಳ್ಳುವಂತೆ ತಿಳಿಸಿದೆ. ಪಹಣಿ ತಿದ್ದುಪಡಿಗೆ ಚಾಲ್ತಿ ವರ್ಷದ ಆರ್.ಟಿ.ಸಿ, ಆಕಾರ್ ಬಂದ್, ಆರ್.ಆರ್ ಇಂಡೆಕ್ಸ್, ಕೈ ಬರಹದ ಪಹಣಿಗಳು ಹಾಗೂ ಎಂ.ಆರ್ ಪ್ರತಿಗಳನ್ನು ನೀಡಬೇಕಾಗಿದೆ.

ಪೌತಿ ಖಾತೆ ಆಂದೋಲನ :
ಮರಣ ಹೊಂದಿದವರ ಹೆಸರಿನಲ್ಲೇ ಖಾತೆಗಳು ಇದ್ದು, ಇದರಿಂದ ಪೌತಿಯಾಗಿರುವ ಕಾನೂನು ಬದ್ದ ವಾರಸುದಾರರು ಇಲ್ಲಿಯವರೆವಿಗೂ ಖಾತೆ ಮಾಡಿಸಿಕೊಂಡಿಲ್ಲದಿರುವುದು ಕಂಡು ಬಂದಿರುತ್ತದೆ. ಈ ಆಂದೋಲನದಲ್ಲಿ ನಿಮ್ಮ ಅರ್ಜಿಗಳನ್ನು ನಿಗದಿತ ಶುಲ್ಕ ಪಾವತಿಸಿ, ತಾಲ್ಲೂಕು ಕಚೇರಿ ಭೂಮಿ ಕೇಂದ್ರಕ್ಕೆ ನಮೂನೆ 19 ರಲ್ಲಿ ಅರ್ಜಿ, ಮರಣ ಸಮರ್ಥನಾ ಪತ್ರ, ಗಣಕೀಕೃತ ಆರ್.ಟಿ.ಸಿ, ವಂಶವೃಕ್ಷ ಇವುಗಳನ್ನು ಪೌತಿ ಖಾತೆಗೆ ನೀಡಬೇಕಾಗಿರುತ್ತದೆ.

ಪಿಂಚಣಿ ಅದಾಲತ್ :
ವಯೋವೃದ್ದರಿಗೆ, ವಿಧವೆಯರಿಗೆ ಮತ್ತು ಅಂಗವಿಕಲರಿಗೆ ವೃದ್ಧಾಪ್ಯ ವೇತನ, ಸಂಧ್ಯಾ ಸುರಕ್ಷ, ಅಂಗವಿಕಲರ ವೇತನ ಹಾಗೂ ವಿಧವಾ ವೇತನ ನೀಡಲು ಅರ್ಜಿಗಳನ್ನು ಸ್ವೀಕರಿಸಲಾಗುವುದು ಅಗತ್ಯ ದಾಖಲೆಗಳಾದ ಪಡಿತರ ಚೀಟಿ/ಎಪಿಕ್ ಕಾರ್ಡ್, ಆದಾಯ ಪ್ರಮಾಣ ಪತ್ರ, ಆಧಾರ್ ಕಾರ್ಡ್, ಮರಣ ಪ್ರಮಾಣ ಪತ್ರ (ವಿಧವೆಯರಿಗೆ), ಅಂಗವೈಫಲ್ಯ ಪ್ರಮಾಣ ಪತ್ರ ಆಗೂ ಬ್ಯಾಂಕ್ ಪಾಸ್ ಪುಸ್ತಕದ ಜೆರಾಕ್ಸ್ ಪ್ರತಿಯನ್ನು ನೀಡಬೇಕು ಎಂದು ತಿಳಿಸಿದ್ದಾರೆ. (ಎನ್.ಬಿ)

Leave a Reply

comments

Related Articles

error: