ಮೈಸೂರು

ಫೆ.8 ರಂದು ಕನಕ ಸಮುದಾಯ ಭವನ ಉದ್ಘಾಟನೆ

ಮೈಸೂರು,ಫೆ.5-ಸಿದ್ದಾರ್ಥ ನಗರದ ಶ್ರೀ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರು ಪೀಠದ ಸಮೀಪದಲ್ಲಿ ನಿರ್ಮಿಸಲಾಗಿರುವ ಕನಕ ಸಮುದಾಯ ಭವನದ ಉದ್ಘಾಟನೆ ಸಮಾರಂಭ ಫೆ.8 ರಂದು ನಡೆಯಲಿದೆ ಎಂದು ಶ್ರೀ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರು ಪೀಠದ ವಿಭಾಗೀಯ ಶಾಖಾ ಮಠದ ಅಧ್ಯಕ್ಷ ಶ್ರೀ ಶಿವಾನಂದಪುರಿ ಸ್ವಾಮೀಜಿ ತಿಳಿಸಿದರು.

ಸಮುದಾಯ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮುದಾಯ ಭವನದ ಉದ್ಘಾಟನಾ ಸಮಾರಂಭದ ಅಂಗವಾಗಿ ಫೆ.7, 8 ರಂದು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಫೆ.7 ರಂದು ಸಂಜೆ 5 ಗಂಟೆಗೆ ಶಾಂತಲ ಟಾಕೀಸ್ ಹತ್ತಿರವಿರುವ ಕೊಲ್ಲಾಪುರದ ಅಮ್ಮ ದೇವಸ್ಥಾನದಲ್ಲಿ ಗಂಗೆಪೂಜೆ ಮಾಡಿ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ಅವರನ್ನು ಬೆಳ್ಳಿ ರಥದಲ್ಲಿ ಮಠಕ್ಕೆ ಕರೆತರಲಾಗುವುದು. ಸುಮಾರು 200 ಮಂದಿ ಮುತ್ತೈದೆಯರು ಪೂರ್ಣ ಕುಂಭದೊಂದಿಗೆ, 108 ಬೀರದೇವರುಗಳು, ಜಾನಪದ ವಿವಿಧ ಕಲಾತಂಡಗಳೊಂದಿಗೆ ಮೆರವಣಿಗೆ ಸಾಗಲಿದೆ. 9 ಗಂಟೆಗೆ ಮೆರವಣಿಗೆ ಶ್ರೀ ಮಠ ತಲುಪಲಿದೆ. ನಂತರ ಧಾರ್ಮಿಕ ಪೂಜಾ ಕಾರ್ಯಕ್ರಮಗಳು, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದರು.

ಫೆ.8 ರಂದು ಮುಂಜಾನೆಯಿಂದಲೇ ಧಾರ್ಮಿಕ ಪೂಜಾ ಕಾರ್ಯಕ್ರಮ ನಡೆಯಲಿದೆ. ಬೆಳಿಗ್ಗೆ 9.15 ರಿಂದ 10 ಗಂಟೆಯವರೆಗೆ ಸಲ್ಲುವ ಶುಭ ಮುಹೂರ್ತದಲ್ಲಿ 108 ಜೋಡಿಯ ಉಚಿತ ಸಾಮೂಹಿಕ ವಿವಾಹ ನಡೆಯಲಿದೆ. ನೋಂದಣಿಗಾಗಿ ಮೊ.ಸಂ. 7349778686 ಸಂಪರ್ಕಿಸುವಂತೆ ತಿಳಿಸಿದರು.

ಸಂಜೆ 5ಕ್ಕೆ ನಿರಂಜನಾನಂದಪುರಿ ಸ್ವಾಮೀಜಿ ಅವರ ಸಾನ್ನಿಧ್ಯದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕನಕ ಭವನ ಉದ್ಘಾಟಿಸಲಿದ್ದಾರೆ. ಶಾಸಕ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್, ಸಚಿವರಾದ ರೇವಣ್ಣ, ಶಿವಳ್ಳಿ, ಮೇಯರ್ ಪುಷ್ಪಲತಾ ಜಗನ್ನಾಥ್, ಜಿಪಂ ಪ್ರಭಾರ ಅಧ್ಯಕ್ಷ ಸಾ.ರಾ.ನಂದೀಶ್, ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ, ಮಾಜಿ ಸಚಿವ ಸಿ.ಎಚ್.ವಿಜಯ್ ಶಂಕರ್ ಸೇರಿದಂತೆ ಮುಂತಾದವರು ಭಾಗವಹಿಸಲಿದ್ದಾರೆ ಎಂದರು.

ಮೂರು ಕೋಟಿ ರೂ. ವೆಚ್ಚದಲ್ಲಿ ಕನಕ ಸಮುದಾಯ ಭವನ ನಿರ್ಮಿಸಲಾಗಿದೆ. ಯಾವುದೇ ಜಾತಿ-ಧರ್ಮ ಬೇಧವಿಲ್ಲದೆ ಇಲ್ಲಿ ಮದುವೆ-ಮುಂಜಿ ಮತ್ತು ಶುಭ ಸಮಾರಂಭಗಳನ್ನು ನಡೆಸಬಹುದಾಗಿದೆ. ನಗರದಲ್ಲಿರುವ ಕಲ್ಯಾಣ ಮಂಟಪಗಳಿಗಿಂತ ಇಲ್ಲಿ ಕಡಿಮೆ ಬಾಡಿಗೆ ನಿಗಧಿ ಪಡಿಸಲಾಗುತ್ತದೆ. ಶೀಘ್ರದಲ್ಲೇ ಬಾಡಿಗೆ ದರವನ್ನು ಟ್ರಸ್ಟ್ ನಿರ್ಧರಿಸಲಿದೆ ಎಂದು ತಿಳಿಸಿದರು.

ನಂತರ ಮಠದ ಜಾಗದಲ್ಲಿ ಸುಮಾರು 70 ಚದರ ವಿಸ್ತೀರ್ಣದಲ್ಲಿ 5 ಕೋಟಿ ರೂ. ಅಂದಾಜು ವೆಚ್ಚದಲ್ಲಿ ದೇವಸ್ಥಾನ, ಪ್ರಾರ್ಥನ ಸಭಾಂಗಣ, ಭಕ್ತಾಧಿಗಳಿಗೆ 10 ಅತಿಥಿ ಕೋಣೆ, 100 ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವಂತೆ ವಿದ್ಯಾರ್ಥಿನಿಲಯ, ಬಂದ ಭಕ್ತಾದಿಗಳಿಗೆ ಪ್ರಸಾದ ನಿಲಯ ಹಾಗೂ ಅಡುಗೆ ಕೋಣೆಯನ್ನೊಳಗೊಂಡ 5 ಅಂತಸ್ತಿನ ಕಟ್ಟಡಕ್ಕೆ ಗುದ್ದಲಿ ಪೂಜೆ ನೆರವೇರಿಸಲಾಗುವುದು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಭಾಗವಹಿಸುವ ಎಲ್ಲಾ ಭಕ್ತರಿಗೆ ಪ್ರಸಾದ ಮತ್ತು  ವಸತಿ ವ್ಯವಸ್ಥೆ ಮಾಡಲಾಗಿದೆ.

ಪತ್ರಿಕಾಗೋಷ್ಠಿಯಲ್ಲಿ ವಿಶ್ವನಾಥ್, ಎಂ.ಮಹದೇವೇಗೌಡ, ಎಪಿಎಂಸಿ ಅಧ್ಯಕ್ಷ ಪ್ರಭುಸ್ವಾಮಿ, ಸದಸ್ಯ ಶಿವಣ್ಣ, ಸುಬ್ರಹ್ಮಣ್ಯ, ರವಿ ನಾಡನಹಳ್ಳಿ, ಬಸವರಾಜು, ಸಿದ್ದು ಹಾಜರಿದ್ದರು. (ಎಚ್.ಎನ್, ಎಂ.ಎನ್)

Leave a Reply

comments

Related Articles

error: