ಮೈಸೂರು

ಜನರಲ್ಲಿ ಯಾತಕ್ಕೆ ಮತ ಹಾಕಬೇಕು ಎನ್ನುವ ಅಭಿಪ್ರಾಯ ಬಂದಲ್ಲಿ ಪ್ರಜಾಪ್ರಭುತ್ವ ಸತ್ತಂತೆ : ಡಾ.ಸಿ.ನಾಗಣ್ಣ

ಮೈಸೂರು,ಫೆ.5:- ಜನರಲ್ಲಿ ಯಾತಕ್ಕೆ ಮತ ಹಾಕಬೇಕು ಎನ್ನುವ ಅಭಿಪ್ರಾಯ ಬಂದಲ್ಲಿ ಪ್ರಜಾಪ್ರಭುತ್ವ ಸತ್ತಂತೆ.  ಪರಿಸ್ಥಿತಿ ಈ ಮಟ್ಟಕ್ಕೆ ಹೋಗಬಾರದು ಎಂದು ಖ್ಯಾತ ವಿಮರ್ಶಕ ಡಾ.ಸಿ.ನಾಗಣ್ಣ ಅಭಿಪ್ರಾಯಪಟ್ಟರು.

ಅವರಿಂದು ಮೈಸೂರು ವಿಶ್ವವಿದ್ಯಾನಿಲಯ ಸಾರ್ವಜನಿಕ ಆಡಳಿತ ಅಧ್ಯಯನ ವಿಭಾಗ ವತಿಯಿಂದ ಮಾನಸಗಂಗೋತ್ರಿ ಬಿ.ಎಂ.ಶ್ರೀ ಸಭಾಂಗಣದಲ್ಲಿ ನಡೆದ ಮಾಜಿ ಶಿಕ್ಷಣ ಸಚಿವ ಎಂ.ಮಲ್ಲಿಕಾರ್ಜುನ ಸ್ವಾಮಿ ದತ್ತಿ ಉಪನ್ಯಾಸದಲ್ಲಿ ಪಾಲ್ಗೊಂಡು ಉಪನ್ಯಾಸ ನೀಡಿದರು. ಆಧುನಿಕ ಕಾಲದಲ್ಲಿ ನೀತಿ ಮತ್ತು ದೃಢತೆ ಬಹಳ ಪ್ರಾಮುಖ್ಯ ಪಡೆದುಕೊಳ್ಳುತ್ತಿದೆ. ಇದು ಜನರ ಗಮನ ಸೆಳೆಯುವ ವಿಷಯವಾಗಿದ್ದು,ಶೈಕ್ಷಣಿಕ ವಲಯ, ರಾಜಕೀಯ ವಲಯ, ಸರ್ಕಾರದಲ್ಲಿ ಪ್ರಮುಖ ವಿಷಯವಾಗಿ ಚರ್ಚಿತವಾಗುತ್ತಿದೆ ಎಂದರು. ಪ್ರತಿಯೊಂದು ವೃತ್ತಿಯಲ್ಲಿಯೂ ನೀತಿ ಸೂತ್ರವಿರುತ್ತದೆ. ವೈದ್ಯಕೀಯ ವೃತ್ತಿಯವರು ರೋಗಿಯ ರೋಗವನ್ನು ಯಾವುದೇ ಅಪಾಯವಿಲ್ಲದೇ ಗುಣಪಡಿಸಲು ಪ್ರಯತ್ನಿಸುತ್ತೇನೆ ಎಂದು ಪ್ರತಿಜ್ಞೆ ಕೈಗೊಳ್ಳುತ್ತಾರೆ. ಸರ್ಕಾರಿ ಕೆಲಸದಲ್ಲಿರುವವರಿಗೂ ನೀತಿ ಸೂತ್ರಗಳಿವೆ. ಯಾರೂ ಇದರಿಂದ ಹೊರತಲ್ಲ. ಸಾರ್ವಜನಿಕ ಸೇವೆಯಲ್ಲಿರುವ ವ್ಯಕ್ತಿ ಸರ್ಕಾರಕ್ಕಾಗಿ ತನ್ನ ಕಂಪನಿ ಸೇವೆಯನ್ನು ಬಳಸಿಕೊಳ್ಳಬಹುದೇ? ಓರ್ವ ಚುನಾಯಿತ ಪ್ರತಿನಿಧಿ ಲಾಭಿ ಗ್ರೂಪ್ ಗಳಿಂದ  ಬೆಲೆಬಾಳುವ ಉಡುಗೊರೆ ಸ್ವೀಕರಿಸಬಹುದೇ? ಸರ್ಕಾರಿ ಅಧಿಕಾರಿ ವ್ಯಕ್ತಿಗಳ ವೈಯುಕ್ತಿಕ ಮಾಹಿತಿಯನ್ನು ಯಾವ ಸಂದರ್ಭದಲ್ಲಿ ಬಹಿರಂಗಗೊಳಿಸಬಹುದು ಇಂತಹ ಹತ್ತು ಹಲವು ಪ್ರಶ್ನೆಗಳು ನೀತಿ ಸೂತ್ರದಲ್ಲಿ ಎದುರಾಗುತ್ತವೆ ಎಂದು ತಿಳಿಸಿದರು.

ಜನರು ಯಾವಾಗ ಪ್ರಜಾಪ್ರಭುತ್ವ ವ್ಯವಸ್ಥೆಗೆ ವಿರುದ್ಧವಾಗಿ ತಿರಸ್ಕಾರ ಭಾವನೆ ಹೊಂದುತ್ತಾರೋ ಅಲ್ಲಿಗೆ ಆ ರಾಷ್ಟ್ರ ಪ್ರಜಾಪ್ರಭುತ್ವದಿಂದ ವಿಮುಖವಾಯಿತೆಂದೇ ಅರ್ಥ. ನಮ್ಮ ರಾಜಕಾರಣಿಗಳು & ಸರ್ಕಾರಗಳು ನೀತಿ ರಹಿತವಾಗಿವೆ, ಭ್ರಷ್ಟಾಚಾರದಲ್ಲಿ ತೊಡಗಿವೆ ಎಂದು ಜನತೆ ಅನ್ಯಮನಸ್ಕರಾದರೆ ಅಲ್ಲಿಗೆ ಪ್ರಜಾಪ್ರಭುತ್ವ ಸತ್ತು ಹೋಯಿತು ಅಂತಲೇ ಅರ್ಥ. ನಮ್ಮ ಪ್ರಜಾಪ್ರಭುತ್ವ ಸದೃಢವಾಗಿದೆ. ಕಾಲಕಾಲಕ್ಕೆ ಜನಪ್ರತಿನಿಧಿಗಳಿಂದ ನಮ್ಮ ಸಮಸ್ಯೆಗೆ ಪರಿಹಾರ ಸಿಗುತ್ತಿದೆ ಎಂಬ ವಿಶ್ವಾಸವಿದ್ದರೆ ಬದುಕಲಿದೆ. ಯಾತಕ್ಕೆ ಮತ ಹಾಕಬೇಕು? ಎಲ್ಲರೂ ಕಳ್ಳರೇ ಎಂಬ ಜನಾಭಿಪ್ರಾಯ ಬಂದಾಗ ಪ್ರಜಾಪ್ರಭುತ್ವ ಸತ್ತಂತೆ. ಪರಿಸ್ಥಿತಿ ಈ ಮಟ್ಟಕ್ಕೆ ಬರಬಾರದು ಎಂದು ತಿಳಿಸಿದರು. ಎಂ.ಮಲ್ಲಿಕಾರ್ಜುನಸ್ವಾಮಿಯವರೊಬ್ಬ ಮಹಾನ್ ವ್ಯಕ್ತಿ. ಅವರು ದೈವಾಧೀನರಾದಾಗ ಅವರ ಬ್ಯಾಂಕ್ ಬ್ಯಾಲೆನ್ಸ್ ನಲ್ಲಿ ಏನೂ ಇರಲಿಲ್ಲ. ಮಕ್ಕಳಿಗೆ ನಿಮಗೆ ನಾನು ವಿದ್ಯೇ ಕೊಟ್ಟಿದ್ದೇನೆ. ನಿಮ್ಮ ದಾರಿ ನೀವು ಮಾಡಿಕೊಂಡು ಹೋಗಿ ಎಂದಿದ್ದ ಮಹಾನುಭಾವರು. ಬೇಕು ಬೇಕು ಎಂದು ಬಾಚಿಕೊಳ್ಳುವವರಿಗಿಂತ ಬೇಡ, ಬೇಡ ಎನ್ನುವವರೇ ಆಗರ್ಭ ಶ್ರೀಮಂತರು. ವರ್ತಮಾನ ಪ್ರಪಂಚದಲ್ಲಿ ನವ ಶ್ರೀಮಂತರೇ ಇದ್ದಾರೆ. ಎಂ.ಮಲ್ಲಿಕಾರ್ಜುನಸ್ವಾಮಿಯವರ ಬಳಿ ಕೆಲಸ ಮಾಡಿ ಕೊಡಲು ಕೇಳಲು ಹೋದವರು ಪ್ರತಿಫಲವಾಗಿ ಕಾಣಿಕೆ ನೀಡಲು ಹೋದಾಗ ಬೈದು ಕಳುಹಿಸಿದ್ದರಂತೆ. ಇಂತಹವರನ್ನು ಕಂಡರೆ ಸಿಂಹ ದೃಷ್ಟಿಯಿಂದ ಸುಡುತ್ತಿದ್ದರಂತೆ ಎಂದು ಬಣ್ಣಿಸಿದರು.

ಕಾರ್ಯಕ್ರಮವನ್ನು ಕುಲಪತಿ ಪ್ರೊ.ಹೇಮಂತ್ ಕುಮಾರ್ ಉದ್ಘಾಟಿಸಿದರು. ಸಾರ್ವಜನಿಕ ಆಡಳಿತ ಅಧ್ಯಯನ ವಿಭಾಗದ ಡೀನ್ ಪ್ರೊ.ಮಹಾದೇವ್, ಪರೀಕ್ಷಾಂಗ ಕುಲಸಚಿವ ಪ್ರೊ.ಜೆ.ಸೋಮಶೇಖರ್, ಕುಲಸಚಿವ ಪ್ರೊ.ಆರ್.ರಾಜಣ್ಣ ಉಪಸ್ಥಿತರಿದ್ದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: