ಕರ್ನಾಟಕಪ್ರಮುಖ ಸುದ್ದಿ

ಸುಪ್ರೀಮ್ ಕೋರ್ಟ್‌ ಆದೇಶ ಪ್ರಜಾಸತ್ತೆಯ ವಿಜಯ: ಸಿಎಂ ಮಮತಾ ಸ್ವಾಗತ

ಕೋಲ್ಕತ (ಫೆ.5): ಸಿಬಿಐ ಮುಂದೆ ಕೋಲ್ಕತ ಪೊಲೀಸ್‌ ಕಮಿಷನರ್‌ ಹಾಜರಾಗಿ ತನಿಖೆಗೆ ಸಹಕರಿಸಬೇಕು ಎನ್ನುವ ಸುಪ್ರಿಮ್ ಕೋರ್ಟ್ ಆದೇಶವನ್ನು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸ್ವಾಗತಿಸಿದ್ದಾರೆ. ತನಿಖೆ ಸಂಬಂಧ ಅವರ ಮೇಲೆ ಯಾವುದೇ ಬಲ ಪ್ರಯೋಗ ನಡೆಸಬಾರದು, ಅರೆಸ್ಟ್‌ ಮಾಡಬಾರದು ಎಂದು ಸುಪ್ರೀಂ ಕೋರ್ಟ್‌ ತಿಳಿಸಿದೆ.

ಸುಪ್ರೀಂ ಕೋರ್ಟಿನ ಈ ತೀರ್ಪು ದೇಶದ ಜನರ ವಿಜಯವಾಗಿದೆ. ಈ ಹೋರಾಟದಲ್ಲಿ ನನ್ನನ್ನು ಬೆಂಬಲಿಸಿದ ಎಲ್ಲರ ಗೆಲುವಾಗಿದೆ ಎಂದಿದ್ದಾರೆ. ನಾವು ಈ ತೀರ್ಪು ನೀಡಿದ ಸುಪ್ರೀಂ ಕೋರ್ಟಿಗೆ ಆಭಾರಿಗಳಾಗಿದ್ದೇವೆ ಎಂದು ಸಿಎಂ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ಕೋಲ್ಕತ ಪೊಲೀಸ್‌ ಕಮಿಷನರ್‌ ರಾಜೀವ್‌ ಕುಮಾರ್‍ಗೆ ತಮ್ಮ ಬೆಂಬಲವನ್ನು ಮುಂದುವರಿಸಿ ಮಾತನಾಡಿದ ಟಿಎಂಸಿ ಮುಖ್ಯಸ್ಥೆ ಮಮತಾ, “ಸಿಬಿಐ ತನಿಖೆಗೆ ತಾನು ಸಹಕರಿಸುವುದಿಲ್ಲ ಎಂದು ಪೊಲೀಸ್‌ ಕಮಿಷನರ್‌ ಎಂದೂ ಹೇಳಿರಲಿಲ್ಲ” ಎಂದು ರಾಗ ಬದಲಾಯಿಸಿದ್ದಾರೆ.

ಮುಂದುವರಿದು ಮಮತಾ, ಕೇಂದ್ರದ ವಿರುದ್ಧದ ತನ್ನ ವಾಕ್‌ ದಾಳಿಯನ್ನು ತೀವ್ರಗೊಳಿಸಿ, ‘ಪ್ರಧಾನಿ ನರೇಂದ್ರ ಮೋದಿ ಅವರು ಪ್ರಜಾಸತ್ತೆಯ ಎಲ್ಲ ಸಂಸ್ಥೆಗಳನ್ನು ನಾಶ ಮಾಡುತ್ತಿದ್ದಾರೆ; ದ್ವೇಷದ ರಾಜಕಾರಣ ಅನುಸರಿಸುತ್ತಿದ್ದಾರೆ; ವಿಪಕ್ಷ ನಾಯಕರನ್ನು ರಾಜಕೀಯವಾಗಿ ಬೇಟೆಯಾಡುತ್ತಿದ್ದಾರೆ ‘ ಎಂದು ಆರೋಪಿಸಿದರು.

“ಸಿಬಿಐ ನವರು ಏನು ಮಾಡಲು ಹೊರಟಿದ್ದರು? ಕೋಲ್ಕತ ಪೊಲೀಸ್‌ ಕಮಿಷನರ್‌ ರನ್ನು ಅರೆಸ್ಟ್‌ ಮಾಡಲು ಮುಂದಾಗಿದ್ದರು. ರಹಸ್ಯ ಕಾರ್ಯಾಚರಣೆಯಲ್ಲಿ ಅವರು ಕಮಿಷನರ್‌ ಮನೆಗೆ ಹೋಗಿದ್ದರು; ಯಾವುದೇ ನೊಟೀಸ್‌ ಕೊಡಲಿಲ್ಲ. ಈಗ ಸುಪ್ರೀಂ ಕೋರ್ಟ್‌ “ಕೋಲ್ಕತ ಪೊಲೀಸ್‌ ಕಮಿಷನರ್‌ ರನ್ನು ಬಂಧಿಸಕೂಡದು ಎಂದು ಹೇಳಿದೆ. ಅಂತೆಯೇ ನಾವು ಕೋರ್ಟಿಗೆ ಕೃತಜ್ಞರಾಗಿದ್ದೇವೆ. ಇದು ನಮ್ಮ ಅಧಿಕಾರಿಗಳ ನೈತಿಕ ಬಲವನ್ನು ಹೆಚ್ಚಿಸುತ್ತದೆ” ಎಂದು ಮಮತಾ ಹೇಳಿದರು. (ಎನ್.ಬಿ)

Leave a Reply

comments

Related Articles

error: