
ಪ್ರಮುಖ ಸುದ್ದಿ
ಸಿಸಿಬಿ ಪೊಲೀಸರ ಸೋಗಿನಲ್ಲಿ ಹಾಸ್ಟೆಲ್ ಗೆ ಬಂದು ಅಡುಗೆ ಸಹಾಯಕನ ಅಪಹರಿಸಿ ಹಲ್ಲೆ
ರಾಜ್ಯ(ಬೆಂಗಳೂರು)ಫೆ.5:- ಸಿಸಿಬಿ ಪೊಲೀಸರ ಸೋಗಿನಲ್ಲಿ ಸರ್ಕಾರಿ ವಸತಿ ನಿಲಯಕ್ಕೆ ಬಂದ ಕಿಡಿಗೇಡಿಗಳು, ಹಾಸ್ಟೆಲ್ನ ಆಡುಗೆ ಸಹಾಯಕನನ್ನು ಅಪಹರಿಸಿ ಹಲ್ಲೆ ನಡೆಸಿ ಚಿತ್ರಹಿಂಸೆ ನೀಡಿರುವ ಘಟನೆ ಚಿಕ್ಕಬಳ್ಳಾಪುರದ ನಂದಿಗಿರಿಧಾಮದ ಬಳಿ ನಡೆದಿದೆ.
ನಂದಿಬೆಟ್ಟದ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯಕ್ಕೆ ಕಳೆದ ಜ,31 ರ ಮುಂಜಾನೆ 5 ಗಂಟೆ ಸುಮಾರಿಗೆ ನುಗ್ಗಿರುವ 12ಮಂದಿಯ ತಂಡ ಆಡುಗೆ ಸಹಾಯಕ ವೇಣುಗೋಪಾಲ ಸ್ವಾಮಿಗೆ ತಾವು ಸಿಸಿಬಿ ಪೊಲೀಸರು, ಕಳ್ಳತನ ಕೃತ್ಯದಲ್ಲಿ ನೀನು ಭಾಗಿಯಾಗಿದ್ದೀಯಾ ಎಂದು ಕರೆದುಕೊಂಡು ಹೋಗಿದ್ದಾರೆ.
ದೊಡ್ಡಬಳ್ಳಾಪುರ ತಾಲೂಕಿನ ತಪಸೀಪುರ ಅರಣ್ಯಪ್ರದೇಶಕ್ಕೆ ಕರೆದ್ಯೊಯ್ದ ಕಿಡಿಗೇಡಿಗಳು ವೇಣುಗೋಪಾಲಸ್ವಾಮಿ ಮೇಲೆ ಹಲ್ಲೆ ಮಾಡಿ, ನಿನ್ನ ಸ್ನೇಹಿತ ಹರೀಶ್ ಎಲ್ಲಿ ಎಂದು ಚಿತ್ರಹಿಂಸೆ ನೀಡಿ ಹಲ್ಲೆ ನಡೆಸಿದ್ದಾರೆ.
ಬಳಿಕ ವೇಣುಗೋಪಾಲಸ್ವಾಮಿಯನ್ನ ಮತ್ತೆ ಹಾಸ್ಟೆಲ್ ನಲ್ಲಿ ಬಿಟ್ಟು ಹೋಗಿದ್ದು, ಈ ಬಗ್ಗೆ ಯಾರಿಗಾದರೂ ಹೇಳಿ ಪೊಲೀಸರಿಗೆ ದೂರು ನೀಡಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ
ಮೂಲತಃ ಮಾಗಡಿ ತಾಲೂಕಿನ ವೇಣುಗೋಪಾಲಸ್ವಾಮಿ ಅದೇ ತಾಲೂಕಿನ ಸೀಗೆಕುಪ್ಪೆ ಗ್ರಾಮದ ಹರೀಶ್ ಎಂಬಾತ ಪರಿಚಯವಿದ್ದು ಇಬ್ಬರು ಸ್ನೇಹಿತರಾಗಿದ್ದರು. ಆದರೆ ಹರೀಶ್ ತಾವರೆಕೆರೆ ಮೂಲದ ಯುವತಿಯೊಂದಿಗೆ ಪರಾರಿಯಾಗಿದ್ದು, ವೇಣುಗೋಪಾಲಸ್ವಾಮಿಗೆ ಹರೀಶ್ ಬಗ್ಗೆ ಎಂಬ ಅನುಮಾನದ ಹಿನ್ನೆಲೆಯಲ್ಲಿ ಆತನನ್ನು ಅಪಹರಿಸಿದ್ದಾರೆ. ಇದಕ್ಕೆ ಸಿಸಿಬಿ ಪೊಲೀಸರ ಹೆಸರಿನಲ್ಲಿ ಹಾಸ್ಟೆಲ್ಗೆ ನುಗ್ಗಿ ವೇಣುಗೋಪಾಲಸ್ವಾಮಿಯನ್ನು ಅಪಹರಿಸಿದ್ದಾರೆ.ಈ ಕುರಿತು ವೇಣುಗೋಪಾಲಸ್ವಾಮಿ ನಂದಿಗಿರಿಧಾಮ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. (ಕೆ.ಎಸ್,ಎಸ್.ಎಚ್)