ಪ್ರಮುಖ ಸುದ್ದಿ

ಫಲ ನೀಡದ ಮಡಿಕೇರಿ ಪೊಲೀಸರ ತನಿಖೆ : 50 ದಿನಗಳೇ ಕಳೆದರೂ ಬಾರದ ನಂಜುಂಡ : ಪತ್ನಿ ಜಾನಕಿ ಕಂಗಾಲು : ನಾಪತ್ತೆ ಪ್ರಕರಣ ಇನ್ನೂ ನಿಗೂಢ

ರಾಜ್ಯ(ಮಡಿಕೇರಿ) ಫೆ.6: – ಪೊಲೀಸ್ ಇಲಾಖೆಯಲ್ಲಿ ಸುದೀರ್ಘ ಸೇವೆ ಸಲ್ಲಿಸಿ, ನಿವೃತ್ತಿ ಬಳಿಕ ತನ್ನ ಪತ್ನಿಯೊಂದಿಗೆ ವಿಶ್ರಾಂತ ಜೀವನ ನಡೆಸುತ್ತಿದ್ದ ನಗರದ ಪತ್ರಿಕಾ ಭವನದ ಬಳಿಯ ನಿವಾಸಿ ಕೇಪಾಡಂಡ ಈ. ನಂಜುಂಡ(80) ನಾಪತ್ತೆಯಾಗಿ 50 ದಿನಗಳೇ ಕಳೆದಿದ್ದರೂ ಇಲ್ಲಿಯವರೆಗೆ ಸುಳಿವು ದೊರೆತ್ತಿಲ್ಲ.
ಸದಾ ದೇವಾಲಯಗಳನ್ನು ಸಂದರ್ಶಿಸುತ್ತ ಮನಶಾಂತಿ ಪಡೆಯುತ್ತಿದ್ದ, ದೈವಭಕ್ತ 80ರ ಇಳಿ ವಯಸ್ಸಿನ ಕೇಪಾಡಂಡ ಈ. ನಂಜುಂಡ (ಚೋಟು ಪೊಲೀಸ್) ಡಿಸೆಂಬರ್ 16ರಂದು ಬೆಳಿಗ್ಗೆ ತಮ್ಮ ಹುಟ್ಟೂರು ಚೇರಂಬಾಣೆ ಬಳಿಯ ಪಾಕತಮ್ಮೆ (ಭಗವತಿ) ದೇವರ ವಾರ್ಷಿಕೋತ್ಸವಕ್ಕೆ ತೆರಳಿದ್ದರು. ವಯೋ ಸಹಜ ಅನಾರೋಗ್ಯದಿಂದ ಬಳಲುತ್ತಿರುವ ಪತ್ನಿ ಜಾನಕಿಯ (ಕಿಟ್ಟಿ) ಆರೋಗ್ಯ ಸುಧಾರಣೆಗೆ ಪ್ರಾರ್ಥಿಸುತ್ತಾ, ಆಕೆಯ ಹೆಸರಿನಲ್ಲಿ ದೇವರಿಗೆ ಭಂಡಾರ ಹಾಗೂ ಬೆಳ್ಳಿಯ ರೂಪ (ಆಳುರೂಪ) ಸಹಿತ ಮನೆಯಿಂದ ಹೊರಟಿದ್ದಾರೆ. ಎಂದಿನಂತೆ ಮಡಿಕೇರಿಯ ಪತ್ರಿಕಾಭವನ ಪಕ್ಕದಲ್ಲಿರುವ ಮನೆಯಿಂದ ಗೇಟುದಾಟಿ ಹೊರಬಂದು, ರಸ್ತೆಯಲ್ಲಿ ಒಮ್ಮೆ ಹಿಂತಿರುಗಿ ಮಡದಿಯತ್ತ ಕೈಸನ್ನೆ ಮಾಡಿ ತೆರಳಿದವರು ಇಂದಿನವರೆಗೂ ಮನೆಗೆ ವಾಪಸಾಗಿಲ್ಲ.
ಪ್ರತ್ಯಕ್ಷದರ್ಶಿಗಳ ಪ್ರಕಾರ ಗ್ರಾಮ ದೇವಾಲಯದಲ್ಲಿ ಎಲ್ಲರೊಂದಿಗೆ ಬೆರೆತಿದ್ದ ನಂಜುಂಡ, ಬೇಂಗೂರು ದೇವಸ್ಥಾನದಲ್ಲಿ ಹರಕೆ ಕೂಡ ಸಲ್ಲಿಸಿ ಮಧ್ಯಾಹ್ನ ಬೋಜನವನ್ನೂ ಸ್ವೀಕರಿಸಿದ್ದಾರೆ. ತದ ನಂತರ ದೇಗುಲ ಬಳಿಯ ರಸ್ತೆಯಲ್ಲಿ ಊರಿನವರೊಂದಿಗೆ ಉಭಯ ಕುಶಲೋಪರಿಯಲ್ಲಿ ತೊಡಗಿದ್ದರು ಎನ್ನಲಾಗಿದೆ. ಆ ಬಳಿಕ ನಂಜುಂಡ ಅವರು ನಿಗೂಢ ರೀತಿಯಲ್ಲಿ ನಾಪತ್ತೆಯಾಗಿದ್ದಾರೆ.
ಇತ್ತ ದೇವಾಲಯದಿಂದ ತೆರಳಿರುವ ಪತಿ ನಂಜುಂಡ ಮನೆಗೂ ಮರಳದೆ, ಬೇಂಗೂರಿನಲ್ಲೇ ಇರುವ ತನ್ನ ತಮ್ಮ ಕುಶಾಲಪ್ಪ ಅವರ ಮನೆಗೂ ಹೋಗದೆ ತೆರಳಿರುವುದಾದರೂ ಎಲ್ಲಿಗೆ? ಇಂದಿಗೂ ಯಾವುದೇ ಮಾಹಿತಿ ಕೂಡ ದೊರೆಯದ ರೀತಿಯಲ್ಲಿ ಏನಾಗಿ ಹೋದರು ಎಂಬ ಚಿಂತೆಯಲ್ಲಿ ಅವರ ಪತ್ನಿ ಜಾನಕಿ, ಚಾತಕ ಪಕ್ಷಿಯಂತೆ ಪತಿಗಾಗಿ ಕಾಯುತ್ತಿದ್ದಾರೆ, ಬಂಧುವರ್ಗ ಕೂಡ ಆತಂಕದಿಂದ ದಿನ ಕಳೆಯುತ್ತಿದ್ದಾರೆ.
ಮಕ್ಕಳಿಲ್ಲದ ದಂಪತಿಗಳು ಸಂಧ್ಯಾ ಕಾಲದಲ್ಲಿ ಪರಸ್ಪರ ಒಬ್ಬರಿಗೊಬ್ಬರು ಊರುಗೋಲಂತೆ ಜೀವಿಸುತ್ತಿದ್ದರು. ಆದರೆ ಕಳೆದ 50 ದಿನಗಳಿಂದ ಪತಿಯ ಮುಖವನ್ನೇ ನೋಡದ ವೃದ್ಧೆ ಜಾನಕಿ ಅವರ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗಿದೆ.
ಮಡಿಕೇರಿ ಗ್ರಾಮಾಂತರ ಠಾಣಾ ಪೊಲೀಸರು ನಂಜುಂಡ ಅವರ ಪತ್ತೆ ಕಾರ್ಯದಲ್ಲಿ ತೊಡಗಿದ್ದಾರೆಯಾದರು ಯಾವುದೇ ಫಲ ದೊರೆತ್ತಿಲ್ಲ. ಈ ನಿಗೂಢ ಪ್ರಕರಣದ ಬಗ್ಗೆ ಸಾರ್ವಜನಿಕ ವಲಯದಲ್ಲಿ ಕುತೂಹಲ ಮೂಡಿದೆ. (ಕೆಸಿಐ,ಎಸ್.ಎಚ್)

Leave a Reply

comments

Related Articles

error: