ದೇಶ

ಸುಪ್ರೀಂ ತೀರ್ಪಿಗೆ ಬದ್ಧ ಎಂದು ಯೂಟರ್ನ್ ಹೊಡೆದ ಶಬರಿಮಲೆ ದೇವಸ್ವಂ ಮಂಡಳಿ

ನವದೆಹಲಿ,ಫೆ.6-ಶಬರಿಮಲೆ ಅಯ್ಯಪ್ಪ ದೇಗುಲಕ್ಕೆ ಎಲ್ಲ ವಯೋಮಾನದವರು ಪ್ರವೇಶಿಸಬಹುದೆಂಬ ಸುಪ್ರೀಂ ಕೋರ್ಟ್ ನ ತೀರ್ಪಿಗೆ ವಿರೋಧ ವ್ಯಕ್ತಪಡಿಸುತ್ತಿದ್ದ ಶಬರಿಮಲೆ ಅಯ್ಯಪ್ಪ ದೇಗುಲ ಆಡಳಿತ ಮಂಡಳಿ ಇದೀಗ ಯೂಟರ್ನ್ ಹೊಡೆದಿದೆ.

ಶಬರಿಮಲೆ ಎಲ್ಲಾ ವಯಸ್ಸಿನ ಮಹಿಳೆಯರಿಗೂ ಪ್ರವೇಶಕ್ಕೆ ಅವಕಾಶ ಕಲ್ಪಿಸುವಂತೆ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿಗೆ ತಾನು ಬದ್ಧ, ಮರುಪರಿಶೀಲನೆಯ ಅಗತ್ಯವಿಲ್ಲ ಎಂದು ಶಬರಿಮಲೆ ಅಯ್ಯಪ್ಪ ದೇಗುಲ ಆಡಳಿತ ಮಂಡಳಿ ತಿಳಿಸಿದೆ.

ಕೆಲವು ನಿರ್ದಿಷ್ಟ ವಯೋಮಾನದ ಮಹಿಳೆಯರಿಗೆ ಪ್ರವೇಶಕ್ಕೆ ಅನುಮತಿ ನೀಡದಿರುವುದು ಒಂದು ಅತ್ಯಗತ್ಯ ಧಾರ್ಮಿಕ ಆಚರಣೆಗೆ ಅಗತ್ಯ ಎಂದು ಅನ್ನಿಸುವುದಿಲ್ಲ ಎಂದಿದೆ ಸುಪ್ರೀಂ ಕೋರ್ಟ್.

ಶಬರಿಮಲೆ ದೇವಾಲಯಕ್ಕೆ ಎಲ್ಲ ವಯೋಮಾನದ ಮಹಿಳೆಯರು ಪ್ರವೇಶಿಸಬಹುದು ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದ ಬಳಿಕ ಕೇರಳದಾದ್ಯಂತ ಹಲವೆಡೆ ಹಿಂಸಾಚಾರಗಳು ನಡೆದಿತ್ತು. ಈ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಇಂದು ಕೈಗೆತ್ತಿಕೊಂಡಿತ್ತು.

ಅಯ್ಯಪ್ಪ ದೇಗುಲ ಪ್ರವೇಶಕ್ಕೆ ಎಲ್ಲ ವಯೋಮಾನದ ಮಹಿಳೆಯರಿಗೆ ಅನುಮತಿ ನೀಡಿದ ತೀರ್ಪಿನ ಮರುಪರಿಶೀಲನೆ ಅರ್ಜಿಗಳ ಕುರಿತ ನಿರ್ಧಾರವನ್ನು ಕೋರ್ಟ್ ಕಾಯ್ದಿರಿಸಿದೆ.

ಶಬರಿಮಲೆ ದೇಗುಲಕ್ಕೆ ಮಹಿಳೆಯರ ಪ್ರವೇಶಕ್ಕೆ ಸೆಪ್ಟೆಂಬರ್‌ನಲ್ಲಿ ನೀಡಿದ ಅನುಮತಿಯನ್ನು ಪರಾಮರ್ಶಿಸಬೇಕು ಎಂದು ಕೋರಿ ಸಲ್ಲಿಸಲಾದ ಹಲವು ಅರ್ಜಿಗಳನ್ನು ಐವರು ನ್ಯಾಯಾಧೀಶರ ಸಂವಿಧಾನ ಪೀಠ ವಿಚಾರಣೆ ನಡೆಸಿತು.

ನಾಯರ್ ಸರ್ವಿಸ್ ಸೊಸೈಟಿ (ಎನ್‌ಎಸ್‌ಎಸ್‌) ಮತ್ತು ದೇವಾಲಯದ ತಂತ್ರಿಗಳು ಸೇರಿದಂತೆ ಹಲವು ಸಂಘಟನೆಗಳು ತೀರ್ಪು ಪರಾಮರ್ಶಿಸುವಂತೆ ಕೋರಿ ಅರ್ಜಿಗಳನ್ನು ಸಲ್ಲಿಸಿದ್ದರು.

ದೇವಸ್ಥಾನದ ಆಡಳಿತ ಮಂಡಳಿಯ ನಿಯಮಾವಳಿ ಪ್ರಕಾರ 10ರಿಂದ 50 ವರ್ಷ ವಯಸ್ಸಿನ ಮಹಿಳೆಯರು ದೇವಸ್ಥಾನದ ಆವರಣಕ್ಕೆ ಭೇಟಿ ನೀಡಲು ಅವಕಾಶವಿರಲಿಲ್ಲ. ಋತುಮತಿಯಾಗುವ ವಯಸ್ಸಿನ ಹೆಣ್ಣುಮಕ್ಕಳು ದೇವಾಲಯದ ಆವರಣಕ್ಕೆ ಪ್ರವೇಶಿಸಿದರೆ ಮಂದಿರದ ಪಾವಿತ್ರ್ಯಕ್ಕೆ ಧಕ್ಕೆಯಾಗುತ್ತದೆ ಎಂಬುದು ದೇವಾಲಯದ ಆಡಳಿತ ಮಂಡಳಿಯ ವಾದವಾಗಿತ್ತು.

ಆದರೆ ಇದೀಗ ತನ್ನ ವಾದವನ್ನು ಬದಲಿಸಿರುವ ದೇವಾಲಯ ಆಡಳಿತ ಮಂಡಳಿ ಸುಪ್ರೀಂ ತೀರ್ಪಿಗೆ ತಾನು ಬದ್ಧ ಎಂದಿದೆ. (ಎಂ.ಎನ್)

Leave a Reply

comments

Related Articles

error: