
ಪ್ರಮುಖ ಸುದ್ದಿ
ಸಂಪಾಜೆಯಲ್ಲಿ ಜನಮನ ರಂಜಿಸಿದ ಮಹಿಳಾ ಉತ್ಸವ
ರಾಜ್ಯ(ಮಡಿಕೇರಿ) ಫೆ.7 :-ಪ್ರಕೃತಿ ಸೊಬಗಿನ ಹಸಿರಿನ ಮದ್ಯೆ ಹೊದ್ದು ಮಲಗಿರುವ ವನಸಿರಿಯ ನಡುವೆ ಶೃಂಗಾರವಾಗಿ ಕಂಗೊಳಿಸುವ ಸಂಪಾಜೆಯಲ್ಲಿ ಕಳಸ ಹೊತ್ತ ಮಹಿಳೆಯರ ಕಲರವ, ಶಿವಮೊಗ್ಗ ಸಾಗರ ತಂಡದಿಂದ ಬಂದಿದ್ದ ಮಹಿಳೆಯರ ಡೊಳ್ಳುಕುಣಿತ, ಚಿಕ್ಕಮಗಳೂರಿನ ಮಹಿಳೆಯರ ವೀರಗಾಸೆ, ಮಂಡ್ಯದ ಸವಿತಾ ರವರ ತಂಡದಿಂದ ಪೂಜಾಕುಣಿತ, ಶಿವಮೊಗ್ಗ ಶೃತಿ ತಂಡದ ಲಂಬಾಣಿ ನೃತ್ಯ, ತರಿಕೆರೆ ತಾರಾದೇವಿ ತಂಡದ ನಂದಿಧ್ವಜ, ಕಂಸಾಳೆ, ಮಂಗಳೂರಿನ ನವೀನ ತಂಡದ ಗೊಂಬೆಕುಣಿತ, ಬಿ.ಸಿ.ರಸ್ತೆಯ ಮಹಿಳೆಯರಿಂದ ಕೀಲುಕುದುರೆ, ನಾಗರಹೊಳೆ ನಾಣಚ್ಚಿ ಹಾಡಿಯವರಿಂದ ಗಿರಿಜನ ನೃತ್ಯ, ಕೊಡಗಿನ ವಾಲಗ, ಕೋಲಾಟ, ರಾಮನಗರ ಜಿಲ್ಲೆಯ ಮೌನಶ್ರೀರವರ ಪಠದ ಕುಣಿತ ಹೀಗೆ ಹತ್ತು ಹಲವಾರು ತಂಡಗಳು ಇವರೆಲ್ಲರಿಗೂ ಕಡಿಮೆ ಇಲ್ಲವೆಂಬಂತೆ ನೂರಾರು ಮಂದಿ ಸ್ವಸಹಾಯ, ಸ್ತ್ರೀಶಕ್ತಿ ಮಹಿಳೆಯರು ಸೇರಿ ಬಣ್ಣ ಬಣ್ಣದ ಚಿತ್ತಾರ ಬಿಡಿಸುವ ಚಾಮರಕೊಡೆಗಳನ್ನು ಹಿಡಿದು ಸಾಗುವ ಅದ್ದೂರಿ ಮೆರವಣಿಗೆ ನೋಡುವುದೇ ಒಂದು ಚಂದ.
ಇಂತಹ ಅಪರೂಪದ ದೃಶ್ಯ ಕೊಡಗಿನ ಗಡಿಭಾಗ ಸಂಪಾಜೆ ಗ್ರಾಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರು ಸಂಪಾಜೆ ಗ್ರಾಮ ಪಂಚಾಯ್ತಿಯ ಸಹಕಾರದೊಂದಿಗೆ ಹಮ್ಮಿಕೊಂಡ ಮಹಿಳಾ ಸಾಂಸ್ಕೃತಿಕ ಉತ್ಸವ ಕಾರ್ಯಕ್ರಮವು ಜನಮೆಚ್ಚುಗೆಗೆ ಪಾತ್ರವಾಗಿತ್ತು.
ಇವುಗಳಲ್ಲದೆ ಹೊರಾಂಗಣದಲ್ಲಿ ಮಹಿಳೆಯರಿಂದ ಬಣ್ಣ ಬಣ್ಣದ ಚಿತ್ತಾರದ ರಂಗೋಲಿ ಭವ್ಯ ವೇದಿಕೆಯ ಮೇಲೆ ಕುಣಿದು ಕುಪ್ಪಳಿಸಿದ ಮೈಸೂರಿನ ದುರ್ಗಾ ಅಕಾಡೆಮಿ ಯುವತಿಯರು ಜಾನಪದ ನೃತ್ಯಕ್ಕೆ ನರ್ತನ ಮಾಡಿದರೆ ವಿದೂಷಿ ಮಾಲಿನಿಯವರ ಹರಿಕಥೆ ಪ್ರೇಕ್ಷಕರು ತಲೆದೂಗುವಂತಿತ್ತು. ಜಯಲಕ್ಷ್ಮಿ ಸಹೋದರಿಯರ ಸ್ಯಾಕ್ಸೋವಾದನ ಕಂಡು ಕೇಳರಿಯದ ಸಂಗೀತ ಕಿವಿಗೆ ಇಂಪು ಕೊಡುತ್ತಿದ್ದರೆ ಮೈಸೂರಿನ ಆನಂದ್ರವರ ನಗೆಹನಿ ಯಾವುದೋ ಲೋಕಕ್ಕೆ ಕೊಂಡೊಯ್ದು ಹೊಟ್ಟೆ ಹುಣ್ಣಾಗುವ ಹಾಗೆ ನಗೆಗಡದಲ್ಲಿ ತೇಲಿಬಂತು.
ಮೈಸೂರಿನ ಮಲ್ಲಿಗೆಯವರು ನಡೆಸಿಕೊಟ್ಟ ಸುಗಮ ಸಂಗೀತದ ಝೇಂಕಾರ, ಜನಪದ ಗೀತೆ, ಲಾವಣಿ, ಮೀನಾಕುಮಾರಿಯವರ ಗೀಗೀಪದ, ಲೀಲಾವತಿ ಕಲಾಯಿಯವರ ಜನಪದ ಗೀತೆ, ಸಂಗೀತ, ನೃತ್ಯ, ಭರತನಾಟ್ಯ ಒಂದಲ್ಲ ಎರಡಲ್ಲ ಹತ್ತು ಹಲವಾರು ಸಂಗೀತ ಕಾರ್ಯಕ್ರಮಗಳು ಜನಮನ ರಂಜಿಸಿದವು. ಸೇರಿದ ಸಾವಿರಾರು ಗ್ರಾಮಸ್ಥರು ಕಾರ್ಯಕ್ರಮದ ಸವಿಯನ್ನುಂಡು ಬಂದವರಿಗೆಲ್ಲಾ ರುಚಿಯಾದ ಊಟದೊಂದಿಗೆ ಸಂಪಾಜೆಯ ಇತಿಹಾಸವು ಮರುಕಳಿಸಿತ್ತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಕೆ.ಜಿ.ಬೋಪಯ್ಯ ಅವರು ಮಾತನಾಡಿ ನಮ್ಮ ದೇಶದ ಆಚಾರ ವಿಚಾರ ಬೇರೆ ಬೇರೆ ಆದರೂ ಅನೇಕತೆಯಲ್ಲಿ ಏಕತೆ ಇದೆ. ಹಾಗೂ ಸದೃಡ ಸಮಾಜದ ನಿರ್ಮಾಣ ಮಹಿಳೆಯಾಗಿದ್ದು, ಸದೃಡ ಕುಟುಂಬ ಇರಬೇಕಾದರೆ ತಾಯಿಯ ಹಾಗೂ ಪುರುಷರ ಯಶಸ್ವಿನ ಹಿಂದೆ ಮಹಿಳೆ ಪಾತ್ರ ಮುಖ್ಯ ಎಂದರು.
ಇಂದಿನ ಯುಗದಲ್ಲಿ ಜಾನಪದ ಸಂಸ್ಕೃತಿ ಉಳಿಸಿ ಬೆಳೆಸುವ ವ್ಯವಸ್ಥೆಯಾಗಬೇಕು. ಇವತ್ತಿನ ಭವ್ಯ ಮೆರವಣಿಗೆ ನೋಡಿದಾಗ ಸಂಪಾಜೆ ಒಂದು ಹೊಸತನ ಕಂಡಿದೆ. ಇದಕ್ಕೆ ಕಾರಣಕರ್ತರಾದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ದರ್ಶನ ಹಾಗೂ ಸಿಬ್ಬಂದಿಯವರು ಮೂಲ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಇಂದಿನ ಯುವ ಜನಾಂಗ ಪಾಶ್ಚಿಮಾತ್ಯ ಸಂಸ್ಕೃತಿ ಗೆ ಮಾರುಹೋಗದೆ ನಮ್ಮ ನಾಡಿನ ಸಂಸ್ಕೃತಿ ಯನ್ನು ಉಳಿಸಿ ಬೆಳೆಸಲು ಮುಂದಾಗಬೇಕು ಎಂದರು. ವಿಶ್ವಕ್ಕೆ ಯೋಗವನ್ನು ಪರಿಚಯಿಸಿದ ಕೀರ್ತಿ ನಮ್ಮ ದೇಶಕ್ಕೆ ಸಲ್ಲುತ್ತದೆ. ಇದಕ್ಕೆ ಕಾರಣ ನಮ್ಮ ದೇಶದ ಮೂಲ ಸಂಸ್ಕೃತಿ ಇದನ್ನು ಪ್ರತಿಬಿಂಬಿಸುವ ಕೆಲಸ ನಮ್ಮ ಯುವ ಜನಾಂಗದಿಂದ ಸಾಧ್ಯ ಎಂದರು.
ಸಮಾಜದಲ್ಲಿ ಮಹಿಳೆ ಎಂಬ ವಿಷಯದ ಮೇಲೆ ವಿಚಾರ ಮಂಡನೆ ಮಾಡಿದ ಸುಳ್ಯ ಕೆವಿಜಿ ಅಮರಜ್ಯೋತಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ಡಾ. ಯಶೋಧ ರಾಮಚಂದ್ರ ಮಾತನಾಡಿ ಇವತ್ತು ಎಲ್ಲಾ ರಂಗಗಳಲ್ಲೂ ಮಹಿಳೆಯರು ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ರಾಜಕೀಯವಾಗಿ ಸಾಮಾಜಿಕ ಕ್ಷೇತ್ರಗಳಲ್ಲಿ ಅಲ್ಲದೆ ಮನೆ ಮನೆಯಲ್ಲಿ ದೀಪ ಉರಿಸುವ ಕ್ರಿಯಾಶೀಲತೆ ಮಹಿಳೆಯಿಂದ ಆಗುತ್ತಿದ್ದು, ಕ್ರಿಯಾಶೀಲ ಮಹಿಳೆ ಇದ್ದಲ್ಲಿ ಆಯೋಗ್ಯ ಪುರುಷರು ಇರಲು ಸಾಧ್ಯವಿಲ್ಲ ಎಂದರು.
ಅಭಿವೃದ್ಧಿ ಎಂದರೆ ಅದು ಮಹಿಳೆಯ ಅಭಿವೃದ್ಧಿ. ಅವಕಾಶಗಳಿಗೆ ತಕ್ಕಂತೆ ಸವಾಲುಗಳನ್ನು ಎದುರಿಸುವ ಛಲ ಮಹಿಳೆಯಲ್ಲಿದೆ ಎಂದರು. ಗ್ರಾಮ ವಿಕಾಶವಾಗಬೇಕಾದರೆ ಮಹಿಳೆಯರ ಪಾತ್ರ ಮುಖ್ಯ. ಸಜ್ಜನರ ನಿಷ್ಕ್ರೀಯತೆಯಿಂದ ಮಹಿಳೆಯರಿಗೆ ಅಧಿಕಾರ ಬಂದಿದೆ ಸ್ವಸ್ಥ ಸಮಾಜದ ನಿರ್ಮಾಣಕ್ಕೆ ಮಹಿಳೆ ಪಾತ್ರ ಅವಶ್ಯಕ ಎಂದು ಯಶೋಧ ರಾಮಚಂದ್ರ ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ತಾಲ್ಲೂಕು ಪಂಚಾಯ್ತಿ ಸದಸ್ಯ ನಾಗೇಶ ಕುಂದಲ್ಪಾಡಿ ಮಾತನಾಡಿ ಮಹಿಳೆಯರಿಗೆ ವಿಶೇಷ ಸ್ಥಾನಮಾನವಿದೆ. ಕುಟುಂಬದಲ್ಲಿ ಮಹಿಳೆ ತಾತ್ಸಾರ ಮಾಡಬಾರದು ಎಂದು ತಿಳಿಸಿದರು.
ಇನ್ನೋರ್ವ ಮುಖ್ಯ ಅತಿಥಿ ಸಂಪಾಜೆ ವಿ.ಎಸ್.ಎಸ್.ಎನ್. ಅಧ್ಯಕ್ಷ ಬಾಲಚಂದ್ರ ಕಳಗಿ ಮಾತನಾಡಿ ಇಂತಹ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ನಡೆದಾಗ ಮಹಿಳೆಯರಲ್ಲಿ ಜಾಗೃತಿ ಭಾವನೆ ಮೂಡುತ್ತದೆ. ಮಹಿಳೆ ಕುಟುಂಬದ ಆಧಾರಸ್ತಂಭ ಎಂದು ಹೇಳಿದರು.
ಸಭಾ ಅಧ್ಯಕ್ಷತೆ ವಹಿಸಿದ್ದ ಸಂಪಾಜೆ ಗ್ರಾಮ ಪಂಚಾಯ್ತಿ ಅಧ್ಯಕ್ಷ ಕುಮಾರ್ ಚಿದ್ಕಾರ್ ಮಾತನಾಡಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇಂತಹ ಕಾರ್ಯಕ್ರಮವನ್ನು ನಮ್ಮ ಗ್ರಾಮದಲ್ಲಿ ಆಯೋಜಿಸಿರುವುದು ಹೆಮ್ಮೆ ಎಂದರು.
ವೇದಿಕೆಯಲ್ಲಿ ಕರ್ನಾಟಕ ಅರೆಭಾಷೆ ಅಕಾಡೆಮಿಯ ಮಾಜಿ ಅಧ್ಯಕ್ಷ ಎನ್.ಎಸ್.ದೇವಿಪ್ರಸಾದ್, ಶ್ರೀ ಪಂಚಲಿಂಗೇಶ್ವರ ದೇವಾಲಯ ಸಮಿತಿ ಅಧ್ಯಕ್ಷ ರಾಜರಾಮ ಕಳಗಿ, ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಪಿ.ಎಂ. ಶೋಭಾರಾಣಿ, ಧರ್ಮಸ್ಥಳ ಒಕ್ಕೂಟದ ಭಾರತಿ ಚಂದ್ರಶೇಖರ, ವಾಣಿಜಗದೀಶ್, ಹಿರಿಯ ಕಲಾವಿದ ಕೆ.ಕೆ.ದೇವಪ್ಪ, ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ ಬಿ.ಆರ್.ಸುಂದರ ಮತ್ತಿತರರು ಇದ್ದರು.
ಕಾರ್ಯಕ್ರಮ ಸಂಯೋಜನೆ ಮಾಡಿದ ಸಂಪಾಜೆ ಹೋಬಳಿ ಘಟಕದ ಕ.ಸಾ.ಪ.ಅಧ್ಯಕ್ಷ ಹಾಗೂ ಸಂಪಾಜೆ ಪದವಿ ಪೂರ್ವ ಕಾಲೇಜಿನ ಶಿಕ್ಷಕ ಎಚ್.ಜಿ.ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಕನ್ನಡ ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಕೆ.ಟಿ.ದರ್ಶನ ಸ್ವಾಗತಿಸಿದರು. ಮಣಜೂರು ಮಂಜುನಾಥ್ ವಂದಿಸಿದರು. (ಕೆಸಿಐ,ಎಸ್.ಎಚ್)