ಮೈಸೂರು

ಕಾರನ್ನೇ ಗುರಿಯಾಗಿಸಿಕೊಂಡ ಕಳ್ಳರಿಂದ ನಗರದ ಮೂರು ಕಡೆ ನಗ-ನಗದು ಕಳುವು

ಮೈಸೂರು,ಫೆ.7:- ದೇವರಾಜ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ  ಕಾರಿನಲ್ಲಿದ್ದ ನಗದು ಮತ್ತು ಚಿನ್ನಾಭರಣವನ್ನು ದುಷ್ಕರ್ಮಿಗಳು ಕದ್ದೊಯ್ದ ಪ್ರಕರಣಗಳು ನಡೆದಿದ್ದು, ದೇವರಾಜ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ನಗರದ ದೇವರಾಜ ಅರಸು ರಸ್ತೆ, ಸಯ್ಯಾಜಿ ರಾವ್ ರಸ್ತೆ, ಕೋಟೆ ಆಂಜನೇಯ ಸ್ವಾಮಿ ದೇಗುಲದ ಆವರಣದಲ್ಲಿ ನಿಲ್ಲಿಸಿದ್ದ ಕಾರಿನಿಂದ ಕಳ್ಳರು ನಗದು ಮತ್ತು ಚಿನ್ನಾಭರಣ ದೋಚಿದ್ದಾರೆ. ಎಲ್ಲಾ ಕಾರುಗಳ ಹಿಂಭಾಗದ ಗಾಜು ಒಡೆದು ಕಳ್ಳರು ಕಳ್ಳತನ ನಡೆಸಿದ್ದಾರೆ. ಶ್ರೀಧರ್ ಎಂಬವರು ಸಂಜೆ 7.30ರ ಸಮಯದಲ್ಲಿ ದೇವರಾಜ ಅರಸು ರಸ್ತೆಯ ಬಾಟಾ ಶೋರೂಂ ಬಳಿ ಕಾರನ್ನು ನಿಲ್ಲಿಸಿದ್ದರು. ಈ ಸಮಯದಲ್ಲಿ ಕಾರಿನ ಹಿಂಬಾಗಿಲಿನ ಗಾಜು ಒಡೆದ ಕಳ್ಳರು ಐದು ಸಾವಿರ ರೂ.ನಗದು, 8ಗ್ರಾಂ ಚಿನ್ನದ ಉಂಗುರವನ್ನು ಕಳುವು ಮಾಡಿದ್ದಾರೆ.

ಮಾಧು ಎಂಬವರು ರಾತ್ರಿ 8ಗಂಟೆಯ ವೇಳೆ ಸಯ್ಯಾಜಿರಾವ್ ರಸ್ತೆಯಲ್ಲಿ ಕೆ.ಆರ್.ಆಸ್ಪತ್ರೆಯ ಮುಂಭಾಗದ ವಾಹನ ನಿಲುಗಡೆ ಪ್ರದೇಶದಲ್ಲಿ ಕಾರನ್ನು ನಿಲ್ಲಿಸಿದ್ದರು. ಈ ಸಮಯದಲ್ಲಿ ಕಾರಿನ ಗಾಜು ಒಡೆದು ಐದು ಸಾವಿರ ರೂ.ನಗದು ಇದ್ದ ಬ್ಯಾಗನ್ನು ಕಳ್ಳರು ಕಳುವು ಮಾಡಿದ್ದಾರೆ.

ವರುಣ್ ಕುಮಾರ್ ಎಂಬವರು ತಮ್ಮ ಕಾರನ್ನು ಕೋಟೆ ಆಂಜನೇಯ ಸ್ವಾಮಿ ದೇಗುಲದ ಮುಂಭಾಗ ನಿಲ್ಲಿಸಿದ್ದು, ರಾತ್ರಿ 8.30ಕ್ಕೆ ವಾಪಸ್ ಬಂದು ನೋಡಿದಾಗ ಕಾರಿನ ಗಾಜು ಒಡೆದು ಕಾರಿನಲ್ಲಿದ್ದ 1,500ರೂ.ಹಣವನ್ನು ಕಳ್ಳರು ಕಳುವು ಮಾಡಿದ್ದಾರೆ. ಒಂದೇ ಕಳ್ಳರ ತಂಡ ಈ ಕೃತ್ಯವನ್ನು ನಡೆಸಿರಬಹುದೆಂದು ಪೊಲೀಸರು ಶಂಕಿಸಿದ್ದು, ಎಲ್ಲ ಪ್ರಕರಣಗಳು ದೇವರಾಜ ಪೊಲೀಸ್ ಠಾಣೆಯಲ್ಲಿ ದಾಖಲಾಗಿವೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: