ಕರ್ನಾಟಕಪ್ರಮುಖ ಸುದ್ದಿ

ಅತೃಪ್ತ ಶಾಸಕರನ್ನು ಅನರ್ಹಗೊಳಿಸಲು ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಿರ್ಧಾರ

ಬೆಂಗಳೂರು (ಫೆ.8): ಇಂದು ಶುಕ್ರವಾರ ಬೆಳಗ್ಗೆ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಗೆ ವಿಪ್ ಮಧ್ಯೆಯೂ ನಾಲ್ವರು ಅತೃಪ್ತ ಶಾಸಕರ ಜೊತೆ ಒಟ್ಟು 7 ಮಂದಿ ಶಾಸಕರು ಗೈರು ಹಾಜರಾಗಿದ್ದಾರೆಂದು ಹೇಳಲಾಗಿದೆ.

ನಿರೀಕ್ಷೆಯಂತೆ ಅತೃಪ್ತ ಶಾಸಕರೆಂದು ಗುರುತಿಸಿಕೊಂಡಿರುವ ಗೋಕಾಕ್ ಕ್ಷೇತ್ರದ ಶಾಸಕ ರಮೇಶ್ ಜಾರಕಿಹೊಳಿ, ಅಥಣಿ ಕ್ಷೇತ್ರದ ಶಾಸಕ ಮಹೇಶ್ ಕುಮಟಳ್ಳಿ, ಬಳ್ಳಾರಿ ಗ್ರಾಮಾಂತರ ಕ್ಷೇತ್ರದ ಶಾಸಕ ಬಿ. ನಾಗೇಂದ್ರ, ಚಿಂಚೋಳಿ ಕ್ಷೇತ್ರದ ಶಾಸಕ ಉಮೇಶ್ ಜಾಧವ್ ಜೊತೆಗೆ ಆನಂದ್ ಸಿಂಗ್ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನ ಭೀತಿಯಲ್ಲಿರುವ ಕಂಪ್ಲಿ ಕ್ಷೇತ್ರದ ಶಾಸಕ ಜೆ.ಎನ್. ಗಣೇಶ್ ಗೈರು ಹಾಜರಾಗಿದ್ದು, ಉಳಿದಂತೆ ರೋಷನ್ ಬೇಗ್ ಹಾಗೂ ಬಿ.ಸಿ.ಪಾಟೀಲ್ ಗೈರು ಹಾಜರಾಗಿದ್ದರೂ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯನವರಿಗೆ ಕರೆ ಮಾಡಿ ಅದಕ್ಕೆ ಸೂಕ್ತ ಕಾರಣ ನೀಡಿದ್ದಾರೆನ್ನಲಾಗಿದೆ.

ಅತೃಪ್ತ ಶಾಸಕರು ಮತ್ತೆ ಕಾಂಗ್ರೆಸ್ ಪಕ್ಷದೊಂದಿಗೆ ಸಾಧ್ಯತೆ ಕ್ಷೀಣಿಸಿರುವ ಹಿನ್ನಲೆಯಲ್ಲಿ ಜೆ.ಎನ್. ಗಣೇಶ್ ಅವರನ್ನು ಹೊರತುಪಡಿಸಿ ಉಳಿದ ನಾಲ್ವರನ್ನು ವಿಪ್ ಉಲ್ಲಂಘಿಸಿದ ಕಾರಣಕ್ಕೆ ಅನರ್ಹಗೊಳಿಸುವಂತೆ ವಿಧಾನಸಭಾ ಸ್ಪೀಕರ್ ರಮೇಶ್ ಕುಮಾರ್ ಅವರಿಗೆ ಮನವಿ ಸಲ್ಲಿಸಲು ಶಾಸಕಾಂಗ ಪಕ್ಷದ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ. ಆದರೆ ಇದಕ್ಕೆ ಮಾನಸಿಕವಾಗಿ ಸಿದ್ಧರಾಗಿರುವ ಅತೃಪ್ತ ಶಾಸಕರು ಒಂದೊಮ್ಮೆ ಅನರ್ಹಗೊಂಡರೆ ಕಾನೂನು ಹೋರಾಟ ನಡೆಸಲು ತೀರ್ಮಾನಿಸಿದ್ದಾರೆಂದು ಹೇಳಲಾಗಿದೆ. (ಎನ್.ಬಿ)

Leave a Reply

comments

Related Articles

error: