ಕ್ರೀಡೆ

ದ್ವಿತೀಯ ಟಿ-20: ಭಾರತಕ್ಕೆ 7 ವಿಕೆಟ್ ಗಳ ಗೆಲುವು

ಆಕ್ಲೆಂಡ್,ಫೆ.8-ನ್ಯೂಜಿಲೆಂಡ್ ವಿರುದ್ಧದ ದ್ವಿತೀಯ ಟಿ-20 ಪಂದ್ಯದಲ್ಲಿ ಟೀಂ ಇಂಡಿಯಾ ಏಳು ವಿಕೆಟ್ ಗಳ ಗೆಲುವು ದಾಖಲಿಸಿದೆ.

ನಾಯಕ ರೋಹಿತ್ ಶರ್ಮಾ ಅವರ ಬಿರುಸಿನ ಅರ್ಧಶತಕದ ನೆರವಿನಿಂದ ಟೀಂ ಇಂಡಿಯಾ ಗೆಲುವು ಸಾಧಿಸಿದ್ದು, ಮೂರು ಪಂದ್ಯಗಳ ಟಿ-20 ಸರಣಿಯಲ್ಲಿ 1-1 ಅಂತರದ ಸಮಬಲ ಸಾಧಿಸಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಕಿವೀಸ್ ತಂಡವನ್ನು 158ಕ್ಕೆ ಕಟ್ಟಿಹಾಕಿತು. ಈ ಮೊತ್ತವನ್ನು ಬೆನ್ನತ್ತಿದ್ದ ಟೀಂ ಇಂಡಿಯಾ ರೋಹಿತ್ ಶರ್ಮಾ ಅವರ ಅರ್ಧಶತಕದ ನೆರವಿನಿಂದ ಇನ್ನು ಏಳು ಎಸೆತಗಳು ಬಾಕಿ ಉಳಿದಿರುವಂತೆಯೇ ಮೂರು ವಿಕೆಟ್ ನಷ್ಟಕ್ಕೆ ಗುರಿ ತಲುಪಿತು. ರೋಹಿತ್ ಶರ್ಮಾ ಕೇವಲ 28 ಎಸೆತಗಳಲ್ಲಿ ಅರ್ಧಶತಕ ಬಾರಿಸಿದರು.

ಆಕ್ಲೆಂಡ್ ಮೈದಾನದಲ್ಲಿ ರೋಹಿತ್ ಅನೇಕ ದಾಖಲೆಗಳನ್ನು ಬಾರಿಸಿರುವುದು ಪಂದ್ಯದ ಪ್ರಮುಖ ಹೈಲೈಟ್ ಆಗಿತ್ತು. ಟಿ-20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್ (2288), ಅತಿ ಹೆಚ್ಚು ಸಿಕ್ಸರ್ (102) ಹಾಗೂ ಅತಿ ಹೆಚ್ಚು ಅರ್ಧಶತಕಗಳ (ಶತಕವೂ ಸೇರಿದಂತೆ 20) ದಾಖಲೆಯನ್ನು ಬರೆದಿದ್ದಾರೆ.

ಸವಾಲಿನ ಮೊತ್ತ ಬೆನ್ನತ್ತಿದ್ದ ಭಾರತಕ್ಕೆ ನಾಯಕ ರೋಹಿತ್ ಶರ್ಮಾ ಹಾಗೂ ಶಿಖರ್ ಧವನ್ ಎಚ್ಚರಿಕೆಯ ಆರಂಭವೂದಗಿಸಿದರು. ಈ ನಡುವೆ ಎರಡು ಸಿಕ್ಸರ್‌ಗಳನ್ನು ಬಾರಿಸಿದ ರೋಹಿತ್ ಟ್ವೆಂಟಿ-20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 100 ಸಿಕ್ಸರ್‌ಗಳನ್ನು ಸಿಡಿಸಿದ ಮೊತ್ತ ಮೊದಲ ಭಾರತೀಯ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರವಾದರು.

ಆರು ಓವರ್‌ಗಳ ಮೊದಲ ಪವರ್ ಪ್ಲೇನಲ್ಲೇ ಭಾರತ ಯಾವುದೇ ವಿಕೆಟ್ ನಷ್ಟವಿಲ್ಲದೆ 50 ರನ್ ತಲುಪಿತು. ಈ ಮೂಲಕ ರೋಹಿತ್-ಧವನ್ ಭದ್ರ ಅಡಿಪಾಯ ಹಾಕಿಕೊಟ್ಟರು. 33 ರನ್ ಗಳಿಸಿದ್ದಾಗ ಮಗೆದೊಂದು ಸಿಕ್ಸರ್ ಸಿಡಿಸಿದ ರೋಹಿತ್, ಟ್ವೆಂಟಿ-20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್ ಎಂಬ ದಾಖಲೆಗೂ ಪಾತ್ರವಾದರು.  ಇಲ್ಲಿಗೆ ರೋಹಿತ್ ಆರ್ಭಟ ನಿಲ್ಲಲಿಲ್ಲ. ಕೇವಲ 28 ಎಸೆತಗಳಲ್ಲೇ ಫಿಫ್ಟಿ ಬಾರಿಸುವ ಮೂಲಕ ತಮ್ಮ ಟೀಕಾಕಾರರಿಗೆ ತಕ್ಕ ಉತ್ತರವನ್ನೇ ನೀಡಿದರು.

ಆದರೆ ಫಿಫ್ಟಿ ಬೆನ್ನಲ್ಲೇ ವಿಕೆಟ್ ಒಪ್ಪಿಸಿದ ರೋಹಿತ್ ನಿರಾಸೆ ಅನುಭವಿಸಿದರು. 29 ಎಸೆತಗಳನ್ನು ಎದುರಿಸಿದ ಹಿಟ್‌ಮ್ಯಾನ್ ಮೂರು ಬೌಂಡರಿ ಹಾಗೂ ನಾಲ್ಕು ಸಿಕ್ಸರ್‌ಗಳ ನೆರವಿನಿಂದ 50 ರನ್ ಗಳಿಸಿದರು. ಅಲ್ಲದೆ ಧವನ್ ಜತೆಗೆ ಮೊದಲ ವಿಕೆಟ್‌ಗೆ 9.2 ಓವರ್‌ಗಳಲ್ಲಿ 79 ರನ್‌ಗಳ ಜತೆಯಾಟ ನೀಡಿದರು.

ರೋಹಿತ್ ಪತನದ ಬೆನ್ನಲ್ಲೇ ಶಿಖರ್ ಧವನ್ (30) ಸಹ ಔಟಾದರು. ಇದರಿಂದಾಗಿ ಭಾರತ ಅಲ್ಪ ಹಿನ್ನಡೆಯನ್ನು ಅನುಭವಿಸಿತು. ಶಿಖರ್ ಪತನದ ವೇಳೆ ಭಾರತದ ಸ್ಕೋರ್ 10.5 ಓವರ್‌ಗಳಲ್ಲಿ 88/2 ಆಗಿತ್ತು. ವಿಜಯ್ ಶಂಕರ್ (14) ಬೌಂಡರಿ ಹಾಗೂ ಸಿಕ್ಸರ್ ಬಾರಿಸಿದರೂ ಹೆಚ್ಚು ಹೊತ್ತು ನಿಲ್ಲಲಿಲ್ಲ. ಅತ್ತ ಅನುಭವಿ ಮಹೇಂದ್ರ ಸಿಂಗ್ ಧೋನಿ ಜತೆ ಸೇರಿದ ಯಂಗ್ ರಿಷಬ್ ಪಂತ್ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು.

15 ಓವರ್‌ಗಳಿಗೆ ಭಾರತದ ಸ್ಕೋರ್ 129/3. ಅಂದರೆ ಅಂತಿಮ 30 ಎಸೆತಗಳಲ್ಲಿ ಎಸೆತಕ್ಕೊಂದರಂತೆ ಗೆಲುವಿಗೆ 30 ರನ್‌ಗಳ ಅವಶ್ಯಕತೆಯಿತ್ತು. ಬಳಿಕ ತಂಡಕ್ಕೆ ಹೆಚ್ಚಿನ ಆಘಾತವಾಗದಂತೆ ಪಂತ್-ಧೋನಿ ಜೋಡಿಯು ತಂಡವನ್ನು ಗೆಲುವಿನ ಗೆರೆ ದಾಟಿಸಿದರು.

ಅಂತಿಮವಾಗಿ 18.5 ಓವರ್‌ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ ಗೆಲುವು ದಾಖಲಿಸಿತು. 28 ಎಸೆತಗಳನ್ನು ಎದುರಿಸಿದ ಪಂತ್ ನಾಲ್ಕು ಬೌಂಡರಿ ಹಾಗೂ ಸಿಕ್ಸರ್ ನೆರವಿನಿಂದ ಅಜೇಯ 40 ರನ್ ಗಳಿಸಿದರು. ಅಂತೆಯೇ ಧೋನಿ 17 ಎಸೆತಗಳಲ್ಲಿ ಬೌಂಡರಿ ನೆರವಿನಿಂದ 20 ರನ್ ಗಳಿಸಿ ಔಟಾಗದೆ ಉಳಿದರು.

ನ್ಯೂಜಿಲೆಂಡ್ ಪರ ಕಾಲಿನ್ ಡಿ ಗ್ರಾಂಡ್‌ಹೋಮ್ ಬಿರುಸಿನ ಅರ್ಧಶತಕದ (50) ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ ಎಂಟು ವಿಕೆಟ್ ನಷ್ಟಕ್ಕೆ 158 ರನ್‌ಗಳ ಸವಾಲಿನ ಮೊತ್ತ ಪೇರಿಸಿದೆ. ಭಾರತ ಪರ ಮೂರು ವಿಕೆಟುಗಳನ್ನು ಕಬಳಿಸಿದ (28/3) ಕೃಣಾಲ್ ಪಾಂಡ್ಯ ಮಿಂಚಿದರು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಕಿವೀಸ್‌ಗೆ ಕಳೆದ ಪಂದ್ಯದ ಹೀರೊ ಟಿಮ್ ಸೀಫರ್ಟ್‌ಗೆ (12) ಹೆಚ್ಚು ಹೊತ್ತು ನಿಲ್ಲಲಾಗಲಿಲ್ಲ.

ಈ ಹಂತದಲ್ಲಿ ದಾಳಿಗಿಳಿದ ಕೃಣಾಲ್ ಪಾಂಡ್ಯ ಒಂದೇ ಓವರ್‌ನಲ್ಲಿ ಕಾಲಿನ್ ಮನ್ರೊ (12) ಹಾಗೂ ಡ್ಯಾರೆಲ್ ಮಿಚೆಲ್ (1) ಹೊರದಬ್ಬುವ ಮೂಲಕ ಡಬಲ್ ಆಘಾತ ನೀಡಿದರು. ಇದರೊಂದಿಗೆ 6 ಓವರ್‌ಗಳ ಮೊದಲ ಪವರ್‌ಪ್ಲೇನಲ್ಲಿ 43 ರನ್‌ಗಳಿಗೆ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಇಲ್ಲಿಗೆ ಕೃಣಾಲ್ ಆಕ್ರಮಣ ನಿಲ್ಲಲಿಲ್ಲ. ಇದಾದ ಬೆನ್ನಲ್ಲೇ ಅಪಾಯಕಾರಿ ನಾಯಕ ಕೇನ್ ವಿಲಿಯಮ್ಸನ್ (20) ಎಲ್‌ಬಿಡಬ್ಲ್ಯು ಬಲೆಗೆ ಸಿಲುಕಿಸುವ ಮೂಲಕ ಪಂದ್ಯದಲ್ಲಿ ಭಾರತ ಹಿಡಿತ ಸಾಧಿಸುವಂತೆ ಮಾಡಿದರು.

ಈ ಹಂತದಲ್ಲಿ ಕ್ರೀಸಿಗಿಳಿದ ಕಾಲಿನ್ ಡಿ ಗ್ರಾಂಡ್‌ಹೋಮ್ ಬಿರುಸಿನ ಆಟವಾಡುವ ಮೂಲಕ ಪಂದ್ಯದ ಚಿತ್ರಣವನ್ನೇ ಬದಲಾಯಿಸಿದರು. ಭಾರತೀಯ ಬೌಲರ್‌ಗಳನ್ನು ನಿರ್ದಯವಾಗಿ ದಂಡಿಸಿದ ಕಾಲಿನ್, ಕಿವೀಸ್ ತಂಡವನ್ನು ಬೃಹತ್ ಮೊತ್ತದತ್ತ ಮುನ್ನಡೆಸಿದರು. ಇದರೊಂದಿಗೆ ಕಿವೀಸ್ ಹಳಿಗೆ ಮರಳಿತು.

10 ಓವರ್‌ಗಳಲ್ಲಿ ಕಿವೀಸ್ ನಾಲ್ಕು ವಿಕೆಟ್ ನಷ್ಟಕ್ಕೆ 60 ರನ್ ಗಳಿಸಿ ಸಂಕಷ್ಟದಲ್ಲಿತ್ತು. ಆದರೆ ಗ್ರಾಂಡ್‌ಹೋಮ್ ಹಾಗೂ ರಾಸ್ ಟೇಲರ್ ಜತೆಯಾಟದಿಂದ ಮುಂದಿನ 30 ಎಸೆತಗಳಲ್ಲಿ 61 ರನ್‌ಗಳು ಹರಿದು ಬಂದವು. ಪರಿಣಾಮ 15 ಓವರ್‌ಗಳ ವೇಳೆಗೆ ಕಿವೀಸ್ 121 ರನ್ ಗಳಿಸಿ ಬೃಹತ್ ಮೊತ್ತದತ್ತ ಮುನ್ನಡೆಯಿತು.

ಅತ್ತ ಬಿರುಸಿನ ಇನ್ನಿಂಗ್ಸ್ ಕಟ್ಟಿದ ಗ್ರಾಂಡ್‌ಹೋಮ್ 27 ಎಸೆತಗಳಲ್ಲಿ ಅರ್ಧಶತಕ ಬಾರಿಸಿದರು. ಆದರೆ ಚೊಚ್ಚಲ ಫಿಫ್ಟಿ ಸಾಧನೆ ಬೆನ್ನಲ್ಲೇ ವಿಕೆಟ್ ಒಪ್ಪಿಸಿದರು. 28 ಎಸೆತಗಳನ್ನು ಎದುರಿಸಿದ ಗ್ರಾಂಡ್‌ಹೋಮ್ ಇನ್ನಿಂಗ್ಸ್‌ನಲ್ಲಿ ಬೌಂಡರಿ ಹಾಗೂ ನಾಲ್ಕು ಭರ್ಜರಿ ಸಿಕ್ಸರ್‌ಗಳು ಸೇರಿದ್ದವು. ಅಲ್ಲದೆ ಟೇಲರ್ ಜತೆ ಐಧನೇ ವಿಕೆಟ್‌ಗೆ 77 ರನ್‌ಗಳ ಅಮೂಲ್ಯ ಜತೆಯಾಟದಲ್ಲಿ ಭಾಗಿಯಾದರು.

ಅಂತಿಮ ಹಂತದಲ್ಲಿ ಉಪಯುಕ್ತ ಇನ್ನಿಂಗ್ಸ್ ಕಟ್ಟಿದ ರಾಸ್ ಟೇಲರ್ ಸ್ಪರ್ಧಾತ್ಮಕ ಮೊತ್ತ ಪೇರಿಸಲು ನೆರವಾದರು. ಅಂತಿಮವಾಗಿ ಕಿವೀಸ್ ಎಂಟು ವಿಕೆಟ್ ನಷ್ಟಕ್ಕೆ 158 ರನ್ ಗಳಿಸಿತು. ವಿಜಯ್ ಶಂಕರ್ ನೇರ ಥ್ರೋದಿಂದಾಗಿ ರನೌಟ್‌ಗೆ ಬಲಿಯಾದ ಟೇಲರ್, 36 ಎಸೆತಗಳಲ್ಲಿ ಮೂರು ಬೌಂಡರಿಗಳಿಂದ 42 ರನ್ ಗಳಿಸಿದರು.

ಇನ್ನುಳಿದಂತೆ ಮಿಚೆಲ್ ಸ್ಯಾಂಟ್ನರ್ (7), ಟಿಮ್ ಸೌಥಿ (3) ಹಾಗೂ ಸ್ಕಾಟ್ ಕುಗ್ಗೆಲೆಜೆನ್ (2*) ರನ್ ಗಳಿಸಿದರು. ಭಾರತದ ಕೃಣಾಲ್ ಮೂರು, ಖಲೀಲ್ ಎರಡು ಮತ್ತು ಭುವಿ ಹಾಗೂ ಪಾಂಡ್ಯ ತಲಾ ಒಂದು ವಿಕೆಟ್ ಕಿತ್ತು ಮಿಂಚಿದರು.

ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ 80 ರನ್‌ಗಳ ಹೀನಾಯ ಸೋಲನು ಅನುಭವಿಸಿತ್ತು. ಎರಡನೇ ಪಂದ್ಯದಲ್ಲಿ ಗೆಲ್ಲುವ ಮೂಲಕ ಸಮಬಲ ಸಾಧಿಸಿದೆ. ಇದೀಗ ಸತತ 11ನೇ ಟ್ವೆಂಟಿ-20 ಸರಣಿಯಲ್ಲೂ ಸೋಲಿಲ್ಲದ ಸರದಾರ ಎನಿಸಿಕೊಳ್ಳಲು ಭಾನುವಾರ ನಡೆಯಲಿರುವ ಕೊನೆಯ ಪಂದ್ಯದಲ್ಲೂ ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ. (ಎಂ.ಎನ್)

 

Leave a Reply

comments

Related Articles

error: