ಮೈಸೂರು

ಬಹುರೂಪಿಯಲ್ಲಿನ ಅನುಭವ ಅನನ್ಯ : ಬದುಕುವ ರೀತಿ ಕಲಿತ ನಾವೇ ಧನ್ಯ; ಪತ್ರಿಕೋದ್ಯಮ ವಿದ್ಯಾರ್ಥಿಗಳ ಮನದಾಳದ ಮಾತು

ನಮ್ಮ ಜೀವನದ ಅತ್ಯಂತ ಸುಂದರ, ಅವಿಸ್ಮರಣೀಯ ಹಾಗೂ ಚಿರಸ್ಥಾಯಿಯಾಗಿ ಉಳಿಯಬಲ್ಲ ಕ್ಷಣಗಳಿವು. ಬಹುರೂಪಿ ನಮ್ಮನ್ನು ಬಹುವಾಗಿ ಕಾಡುತ್ತಿದೆ. ಕಳೆದೈದು ದಿನಗಳಿಂದ ಜೀವನದ ಪಾಠ, ಬದುಕುವ ರೀತಿ ಎಲ್ಲವನ್ನೂ ಕಲಿಸಿಕೊಟ್ಟಿದೆ. ಇಲ್ಲಿನ ಅನುಭವ ಕೋಟಿ ಕೊಟ್ಟರೂ ಬೇರೆಲ್ಲೂ ಸಿಗುವುದಿಲ್ಲ. ಅನನ್ಯ, ಅಮೋಘ, ಅದ್ಭುತ…. ಥ್ಯಾಂಕ್ಸ್ ಟು ಅವರ್ ಕಾಲೇಜ್ ಆ್ಯಂಡ್ ಬಹುರೂಪಿ.

ಹೀಗಂತ ಹೇಳಿದ್ದು ಬೇರಾರೂ ಅಲ್ಲ. ಸಾಂಸ್ಕೃತಿಕ ನಗರಿ ಮೈಸೂರಿನ ರಂಗಾಯಣದ ಆವರಣದಲ್ಲಿ ಕಳೆದೈದು ದಿನಗಳಿಂದ ನಡೆಯುತ್ತಿರುವ ಬಹುರೂಪಿ ಬಹುಭಾಷಾ ಅಂತಾರಾಷ್ಟ್ರೀಯ ನಾಟಕೋತ್ಸವದಲ್ಲಿ ಬಹುರೂಪಿ ವಾರ್ತಾಪತ್ರವನ್ನು ಹೊರತರುತ್ತಿರುವ ವಿದ್ಯಾರ್ಥಿಗಳು. ಅವರ ಮನದಾಳದ ಮಾತುಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟರು.  ನಿಜ ಜೀವನದಲ್ಲಿ ಘಟಿಸುವ ಒಂದೊಂದು ಅನುಭವಗಳೂ ಬದುಕುವ ರೀತಿಯನ್ನು, ಸಹಬಾಳ್ವೆಯನ್ನು, ಅವಿಸ್ಮರಣೀಯ ಕ್ಷಣಗಳನ್ನು ಕಟ್ಟಿ ಕೊಡುತ್ತವೆ. ಆದರೆ ಈ ಬಾರಿಯ ಬಹುರೂಪಿ ಬೇರೆಯದೇ ಆದ ವಿಭಿನ್ನ ಅನುಭವಗಳನ್ನು ಪತ್ರಿಕೋದ್ಯಮದ ವಿದ್ಯಾರ್ಥಿಗಳಿಗೆ ನೀಡಿದೆ.

ಪ್ರತಿ ಬಾರಿಯೂ ಮಾನಸಗಂಗೋತ್ರಿಯ ಸ್ನಾತಕೋತ್ತರ ಪದವಿಯ ವಿದ್ಯಾರ್ಥಿಗಳು ಬಹುರೂಪಿ ವಾರ್ತಾಪತ್ರವನ್ನು ಹೊರ ತರುತ್ತಿದ್ದರು. ಆದರೆ ಮೊದಲ ಬಾರಿಗೆ ಮಹಾಜನ ಹಾಗೂ ಮಹಾರಾಜ ಕಾಲೇಜಿನ 15 ಮಂದಿ ಪತ್ರಿಕೋದ್ಯಮದ ವಿದ್ಯಾರ್ಥಿಗಳು ವಾರ್ತಾ ಪತ್ರವನ್ನು ಸಿದ್ಧಪಡಿಸುತ್ತಿದ್ದಾರೆ. ಪ್ರತಿದಿನ ಬಹುರೂಪಿಯಲ್ಲಿ ನಡೆಯುವ ಕಾರ್ಯಕ್ರಮಗಳ ವಿವರ, ನಾಟಕಗಳ ಪ್ರದರ್ಶನ ಹಾಗೂ ವಿಮರ್ಶೆ, ತಂಡಗಳ ಮಾಹಿತಿ ಸೇರಿದಂತೆ ಎಲ್ಲವನ್ನೂ ಒಳಗೊಂಡ 4 ಪುಟಗಳ ವಾರ್ತಾ ಪತ್ರವನ್ನು ಹೊರತರುತ್ತಿದ್ದಾರೆ. ಜೀವನಾನುಭವ  ಎಲ್ಲಕ್ಕಿಂತ ದೊಡ್ಡದು ಎಂಬುದನ್ನು ಈ ಬಾರಿಯ ಬಹುರೂಪಿ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿ ಕೊಟ್ಟಿದೆ.

ನಿಜವಾದ ಪತ್ರಿಕೋದ್ಯಮ ಯಾವ ರೀತಿ ಇರುತ್ತದೆ, ಪತ್ರಕರ್ತರಾದವರು ಯಾವ ರೀತಿ ಕಾರ್ಯನಿರ್ವಹಿಸಬೇಕು, ಯಾವೆಲ್ಲಾ ಅಂಶಗಳನ್ನು ವೃತ್ತಿಯಲ್ಲಿ ಅಳವಡಿಸಿಕೊಳ್ಳಬೇಕು ಎಂಬುದನ್ನು ತಿಳಿಸಿಕೊಟ್ಟಿದೆ. ಕಾರ್ಯಕ್ರಮಗಳ ವರದಿ, ನಾಟಕಗಳ ವಿಮರ್ಶೆ, ಛಾಯಾಚಿತ್ರ ತೆಗೆಯುವುದು, ಸನ್ನಿವೇಶಕ್ಕೆ ತಕ್ಕಂತೆ ಕಥೆ ಹೆಣೆಯುವುದು ಎಲ್ಲವನ್ನೂ ಬಹುರೂಪಿ ಕಲಿಸಿದೆ. ಬೆಳಗ್ಗೆ 9.30ಕ್ಕೆ ರಂಗಾಯಣ ಆವರಣಕ್ಕೆ ಕಾಲಿಡುವ ವಿದ್ಯಾರ್ಥಿಗಳು ರಾತ್ರಿ 10.30ರವರೆಗೂ ಕಾರ್ಯನಿರ್ವಹಿಸಿ ಬೆಳಗ್ಗೆಯಿಂದ ರಾತ್ರಿಯವರೆಗೆ ನಡೆದ ಕಾರ್ಯಕ್ರಮಗಳ ವಾರ್ತಾಪತ್ರವನ್ನು ಅಚ್ಚುಕಟ್ಟಾಗಿ ಮಾಡಿ ಬಳಿಕ ಮನೆಗೆ ತೆರಳುತ್ತಾರೆ.

ಸಿಟಿಟುಡೆಯೊಂದಿಗೆ ಮಾತನಾಡಿದ ಮಹಾಜನ ಕಾಲೇಜು ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆ  ಡಾ.ಭಾರ್ಗವಿ ಡಿ.ಹೆಮ್ಮಿಗೆ ಈ ಬಾರಿಯ ಬಹುರೂಪಿ ಸುಂದರ ಅನುಭವಗಳನ್ನು ನೀಡಿದೆ. ಪ್ರತಿಬಾರಿಯೂ ಮಾನಸಗಂಗೋತ್ರಿಯ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ವಾರ್ತಾಪತ್ರ ಹೊರ ತರುತ್ತಿದ್ದರು. ಆದರೆ ಮೊದಲ ಬಾರಿಗೆ ಪದವಿ ವಿದ್ಯಾರ್ಥಿಗಳು ಹೊರ ತರುತ್ತಿದ್ದಾರೆ. ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಬಹುರೂಪಿ ಉತ್ತಮ ವೇದಿಕೆಯಾಗಿದ್ದು ಯಾವ ರೀತಿ ಫೀಲ್ಡ್ ವರ್ಕ್ ಮಾಡಬೇಕು ಎಂಬುದನ್ನು ಕಲಿಸಿದೆ. ಕಳೆದ 14ವರ್ಷಗಳಿಂದ ಹರಿಪ್ರಸಾದ್ ಅವರು ವಾರ್ತಾಪತ್ರವನ್ನು ಹೊರತರುತ್ತಿದ್ದರು. ಆದರೆ ಈ ಬಾರಿ ಅವರ ಸಲಹೆ ಸೂಚನೆಗಳನ್ನು ಪಡೆದುಕೊಂಡು ನಾನು ಆ ಜವಾಬ್ದಾರಿ ನಿಭಾಯಿಸುತ್ತಿದ್ದೇನೆ. ಎಲ್ಲಾ ವಿದ್ಯಾರ್ಥಿಗಳು ಮಾಡುವ ಲೇಖನಗಳನ್ನು ವಾರ್ತಾಪತ್ರದಲ್ಲಿ ತರಲು ಸಾಧ್ಯವಿಲ್ಲದಿರುವುದರಿಂದ ಎಲ್ಲವನ್ನು ಒಟ್ಟುಗೂಡಿಸಿ ಮ್ಯಾಗಜಿನ್ ಮಾಡುತ್ತಿದ್ದು, ವಿದ್ಯಾರ್ಥಿಗಳ ಶ್ರಮ ವ್ಯರ್ಥಮಾಡಬಾರದೆನ್ನುವ ಉದ್ದೇಶವಿದೆ ಎಂದರು.

ಮಹಾಜನ ಕಾಲೇಜು ವಿದ್ಯಾರ್ಥಿ ಬಸವರಾಜು ಮಾತನಾಡಿ ಪತ್ರಿಕೋದ್ಯಮದ ನಿಜವಾದ ಅರ್ಥವನ್ನು ಬಹುರೂಪಿ ತಿಳಿಸಿಕೊಟ್ಟಿದೆ. ಈ ಬಾರಿ ಅಂತಾರಾಷ್ಟ್ರೀಯ ನಾಟಕೋತ್ಸವ ಆಯೋಜಿಸಿರುವುದರಿಂದ ನಮ್ಮ ದೇಶವಲ್ಲದೆ ಬೇರೆ ಬೇರೆ ದೇಶದ ನಾಟಕಗಳನ್ನು ನೋಡುವ ಅವಕಾಶ ದೊರೆತಿದೆ. ಅವುಗಳನ್ನು ವಿಮರ್ಶೆ ಮಾಡುವ ಅವಕಾಶವೂ ದೊರಕಿದೆ. ಸಾಹಿತಿಗಳು, ವಿದ್ವಾಂಸರು, ನಾಟಕಕಾರರ ಅನುಭವ, ಮಾರ್ಗದರ್ಶನ ತುಂಬಾ ಉಪಯುಕ್ತವಾದದ್ದು ಎಂದರು.

ಮನೀಷ್ ಮಾತನಾಡಿ ಈ ಬಾರಿಯ ಬಹುರೂಪಿಯಲ್ಲಿ ಅಂತಾರಾಷ್ಟ್ರೀಯ ನಾಟಕೋತ್ಸವ ಆಯೋಜಿಸಿರುವುದರಿಂದ ಬೇರೆ ಬೇರೆ ದೇಶಗಳ ಕಲೆ ಸಂಸ್ಕೃತಿ, ಪರಂಪರೆ ಸೇರಿದಂತೆ ನಾಟಕ ಪ್ರಕಾರಗಳನ್ನು ತಿಳಿದುಕೊಳ್ಳಲು ಸಹಕಾರಿಯಾಗಿದೆ. ಎಷ್ಟೇ ಪದವಿ ಪಡೆದರು ಫೀಲ್ಡ್ ವರ್ಕ್ ಮುಖ್ಯ. ನಾವೇ ನೇರವಾಗಿ ಫೀಲ್ಡ್ ವರ್ಕ್ ಮಾಡುವುದರಿಂದ ಸಿಗುವ ಅನುಭವ ಬೇರಾವುದರಿಂದಲೂ ಸಿಗುವುದಿಲ್ಲ. ಅಂತಹ ಅದ್ಭುತ ಅನುಭವವನ್ನು ಬಹುರೂಪಿ ಒದಗಿಸಿದೆ ಎಂದು ತಿಳಿಸಿದರು.

ಪ್ರಿಯಾಂಕ  ಮಾತನಾಡಿ ನಾಟಕವಾಗಲಿ, ಸಿನಿಮಾ ಆಗಲಿ ಎಲ್ಲರೂ ಮಿರ ಮಿರ ಮಿಂಚುವ ಕಲಾವಿದರನ್ನು, ದೃಶ್ಯಗಳನ್ನು ಮಾತ್ರ ನೋಡುತ್ತಾರೆ. ಅದರ ಹಿಂದಿರುವ ಕಾಣದ ಕೈಗಳ ಕೆಲಸವನ್ನು ಯಾರೂ ಗುರುತಿಸುವುದಿಲ್ಲ. ರಂಗಾಯಣ ಆವರಣ ಇಷ್ಟು ಸ್ವಚ್ಛವಾಗಲು, ವಿಭಿನ್ನ ಕಲಾಕೃತಿಗಳನ್ನು ತಯಾರಿಸಲು ಪ್ರತಿಯೊಬ್ಬರೂ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಬಹುರೂಪಿ ನನ್ನ ಜೀವನದ ಅತ್ಯದ್ಭುತ ಅನುಭವವಾಗಿದ್ದು, ಇಲ್ಲಿನ ಪ್ರತಿಯೊಂದು ಕ್ಷಣಗಳನ್ನು ನನ್ನ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದೇನೆ. ನನಗೆ ಕೊಟ್ಟ ಜವಾಬ್ದಾರಿಯನ್ನು ಉತ್ತಮವಾಗಿ ನಿಭಾಯಿಸಿದ್ದೇನೆ ಎಂದರು.

ಸಂಜಿತ ಮಾತನಾಡಿ ಬಹುರೂಪಿಯಲ್ಲಿ ಕಳೆದ ಪ್ರತಿಯೊಂದು ಕ್ಷಣಗಳೂ ನನ್ನ ಜೀವನದ ಅವಿಸ್ಮರಣೀಯ ಕ್ಷಣಗಳು. ಇಲ್ಲಿ ನಡೆಯುವ ಪ್ರತಿಯೊಂದು ಕಾರ್ಯಕ್ರಮಗಳು ಒಂದಲ್ಲಾ ಒಂದು ಮಾಹಿತಿ ನೀಡುತ್ತಿದ್ದು, ಶಿಕ್ಷಿತರನ್ನಾಗಿ ಮಾಡುತ್ತಿವೆ. ಜತೆಗೆ ನಮ್ಮ ಕಲೆ, ಸಂಸ್ಕೃತಿ ಬಗ್ಗೆ ಅರಿವು ಮೂಡಿಸುವ ಕಾರ್ಯ ಮಾಡುತ್ತಿವೆ. ಥ್ಯಾಂಕ್ಸ್ ಟು ಅವರ್ ಕಾಲೇಜ್ ಆ್ಯಂಡ್ ಬಹುರೂಪಿ ಎಂದು ಸಂತಸ ತುಂಬಿದ ಮಾತುಗಳಲ್ಲಿ ವರ್ಣಿಸಿದರು.  ಹಿರಿಯ ರಂಗಕಲಾವಿದ ಮೈಮ್ ರಮೇಶ್ ನಾಟಕಗಳ ಕುರಿತು ವಿವರಿಸಿದ್ದನ್ನು ತಿಳಿಸಲು ಮರೆಯಲಿಲ್ಲ.

ಜೀವನಾನುಭವಕ್ಕಿಂತ ಬೇರೆ ಅನುಭವ ಇನ್ನೇನಿದೆ. ನೋಡಿಕಲಿಯುವುದಕ್ಕಿಂತ ಮಾಡಿ ಕಲಿಯುವುದೇ ಹೆಚ್ಚಿನ ಮಹತ್ವದ್ದು ಎನ್ನುವುದನ್ನು ಬಹುರೂಪಿ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ತೋರಿಸಿಕೊಟ್ಟಿದೆ ಎನ್ನುವುದು ಅವರ ಸಂತೋಷಭರಿತ ಮಾತುಗಳಲ್ಲೇ ವ್ಯಕ್ತವಾಗುತ್ತಿತ್ತು.

ಬಿ.ಎಂ.

Leave a Reply

comments

Related Articles

error: