ಮೈಸೂರು

ತಿರುಮಕೂಡಲು ಶ್ರೀಕ್ಷೇತ್ರದಲ್ಲಿ ಕುಂಭಮೇಳ : ಭಕ್ತರ ಪಾಲಿಗೆ ಪುಣ್ಯಪ್ರದ

ಮೈಸೂರು,ಫೆ.9:- ಭಾರತ ದೇಶದ ಪವಿತ್ರ ನದಿಗಳ ತ್ರೀವೇಣಿ ಸಂಗಮ ಕ್ಷೇತ್ರಗಳಲ್ಲಿ ಕುಂಭಮೇಳದಂತಹ ಉತ್ಸವಗಳನ್ನಾಚರಿಸುವುದು ಹಾಗೂ ಪೂರ್ವಕಾಲದಲ್ಲಿ ಪುಣ್ಯಸ್ನಾನ ಮಾಡುವ ಪದ್ಧತಿ ಪ್ರಾಚೀನ ಕಾಲದಿಂದಲೂ ಜಾರಿಯಲ್ಲಿದೆ. ಉತ್ತರ ಭಾರತದ ಪ್ರಯಾಗ, ಹರಿದ್ವಾರ, ನಾಸಿಕ, ಉಜ್ಜಯಿನಿಗಳಂತಹ ನದಿ ಸಂಗಮ ಕ್ಷೇತ್ರಗಳಲ್ಲಿ ಆಚರಣೆಯಲ್ಲಿರುವ ಮಹಾ ಕುಂಭಮೇಳಗಳಲ್ಲಿ ಕೋಟ್ಯಾಂತರ ಮಂದಿ ಶ್ರದ್ಧಾಭಕ್ತಿಗಳಿಂದ ಭಾಗವಹಿಸಿ ಪುಣ್ಯಸ್ನಾನ ಮಾಡಿ ಧನ್ಯರಾಗುತ್ತಿದ್ದರು.

ಈ ಸೌಭಾಗ್ಯದಿಂದ ದಕ್ಷಿಣ ಭಾರತದ ಭಕ್ತರು ವಂಚಿತರಾಗುತ್ತಿದ್ದುದನ್ನು ಮನಗಂಡ ನಮ್ಮ ಕನ್ನಡ ನಾಡಿನ  ಪರಮಪೂಜ್ಯ ಜಗದ್ಗುರುಗಳು ಪವಿತ್ರ ನದಿಗಳಾದ ಕಾವೇರಿ, ಕಪಿಲ ಮತ್ತು ಸ್ಪಟಿಕ ಸರೋವರ(ಗುಪ್ತಗಾಮಿನಿ)ಗಳ ಸಂಗಮವಾದ ಮೈಸೂರು ಜಿಲ್ಲೆಯ ತಿ.ನರಸೀಪುರ ತಾಲೂಕು ತಿರುಮಕೂಡಲು ಶ್ರೀಕ್ಷೇತ್ರದಲ್ಲಿ ಕುಂಭಮೇಳ ಆಯೋಜಿಸಲು ತೀರ್ಮಾನಿಸಿದರು.
ಈ ಕುಂಭಮೇಳದ ಸಂಸ್ಥಾಪಕ ಧರ್ಮಾಚಾರ್ಯರುಗಳು   ಶ್ರೀಕೈಲಾಸಾಶ್ರಮದ ಶ್ರೀ ತಿರುಚ್ಚಿ ಮಹಾಸ್ವಾಮಿಗಳು,
ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪರಮಪೂಜ್ಯ ಜಗದ್ಗುರು ಪದ್ಮಭೂಷಣ ಡಾ.ಶ್ರೀ ಬಾಲ ಗಂಗಾಧರನಾಥ ಮಹಾಸ್ವಾಮಿಗಳು, ಶ್ರೀ ಸುತ್ತೂರು ವೀರಸಿಂಹಾಸನ ಮಹಾಸಂಸ್ಥಾನ ಮಠದ ಪರಮಪೂಜ್ಯ ಜಗದ್ಗುರು ಶ್ರೀ ಶಿವರಾತ್ರಿ ದೇಶೀಕೇಂದ್ರ ಮಹಾಸ್ವಾಮಿಗಳು, ಮೈಸೂರಿನ ಶ್ರೀ ಅವಧೂತದತ್ತ ಪೀಠದ ಶ್ರೀ ಗಣಪತಿ ಸಚ್ಚಿದಾನಂದ ಮಹಾಸ್ವಾಮಿಗಳು, ಶ್ರೀ ಓಂಕಾರಾಶ್ರಮ ಮಹಾಸಂಸ್ಥಾನದ ಶ್ರೀ ಶಿವಪುರಿಮಹಾಸ್ವಾಮಿಗಳು
ಈ ಪರಮಪೂಜ್ಯರ ನಿರ್ಧಾರದ ಫಲಶೃತಿಯಾಗಿ 1989 ರಲ್ಲಿ ಪ್ರಪ್ರಥಮ ಬಾರಿಗೆ ಕುಂಭಮೇಳವನ್ನು ಪ್ರಾರಂಭಿಸಲಾಯಿತು. ನಂತರ 1992ರಲ್ಲಿ, 1995ರಲ್ಲಿ ,1998ರಲ್ಲಿ ,2001ರಲ್ಲಿ, 2004ರಲ್ಲಿ, 2007ರಲ್ಲಿ, 2010ರಲ್ಲಿ, 2013ರಲ್ಲಿ ಮತ್ತು 2016ರಲ್ಲಿ ಹತ್ತು ಕುಂಭಮೇಳಗಳು ವಿಜೃಂಭಣೆಯಿಂದ ಯಶಸ್ವಿಯಾಗಿ ಜರುಗಿವೆ.
ಶ್ರೀವಿಳಂಬಿ ನಾಮ ಸಂವತ್ಸರದಲ್ಲಿ  ತಿರುಮಕೂಡಲು ಶ್ರೀಕ್ಷೇತ್ರ ತ್ರಿವೇಣಿ ಸಂಗಮದಲ್ಲಿ 11ನೇ ಕುಂಭಮೇಳವು 2019ರ ಫೆಬ್ರವರಿ 17, 18, ಹಾಗೂ 19 ರಂದು ನಡೆಯುತ್ತಿದ್ದು  ಭಕ್ತರ ಪಾಲಿಗೆ ಪುಣ್ಯಪ್ರದವೇ ಆಗಿದೆ.

ಇಲ್ಲಿ ಅತ್ಯಂತ ಪ್ರಾಚೀನಕಾಲದ ಶ್ರೀ ಗುಂಜನರಸಿಂಹಸ್ವಾಮಿ, ಅಗಸ್ತ್ಯಮುನಿಗಳು ತಾವೇ ಮರಳಿನ ಲಿಂಗವನ್ನು ಪ್ರತಿಷ್ಠಾಪಿಸಿ ಪೂಜಿಸಿದ ಶ್ರೀ ಅಗಸ್ತೇಶ್ವರಸ್ವಾಮಿ, ಶ್ರೀ ಹನುಮಂತೇಶ್ವರ ಸನ್ನಿಧಿಗಳು ವಿರಾಜಮಾನವಾಗಿವೆ.
ಕ್ಷೇತ್ರದ ಮಹಿಮೆ

ಈ ಕ್ಷೇತ್ರವು ಗಂಗಾತೀರ್ಥಕ್ಕಿಂತಲೂ ಒಂದು ಗುಲಗಂಜಿ ಪ್ರಮಾಣದಷ್ಟು ಹೆಚ್ಚಾದ ಪುಣ್ಯನೆಲೆಯೆಂದು ಶ್ರೀ ಗುಂಜನರಸಿಂಹಸ್ವಾಮಿ ಹಸ್ತದಲ್ಲಿರುವ ತಕ್ಕಡಿಯು ಉದ್ಘೋಷಿಸುತ್ತಿದೆ. ಅತ್ಯಂತ ಪ್ರಾಚೀನವಾದ ಇಲ್ಲಿನ ಶ್ರೀ ಭಾರದ್ವಾಜ ಋಷ್ಯಾಶ್ರಮ ಶ್ರೀ ಚೌಡೇಶ್ವರಿ ದೇವಸ್ಥಾನ ರುದ್ರಪಾದ, ಅಕ್ಷಯವಟವೃಕ್ಷ, ಅಶ್ವತ್ಥವೃಕ್ಷ, ಗುಡಿ-ಮಂಟಪಗಳು ಶ್ರೀ ವ್ಯಾಸರಾಜಮಠ ಮುಂತಾದವುಗಳು ಈ ಕ್ಷೇತ್ರದ ಪ್ರಾಚೀನ ಪಾವಿತ್ರ್ಯತೆಯನ್ನು ನೂರ್ಮಡಿಗೊಳಿಸಿವೆ. ಅನೇಕ ಮತ ಪಂಥ ಧರ್ಮಗಳು ಇಲ್ಲಿ ಸಮ್ಮಿಲನಗೊಂಡು ಸರ್ವಧರ್ಮಗಳ ಸಂಗಮ ಕ್ಷೇತ್ರವೂ ಆಗಿ ಕಂಗೊಳಿಸುತ್ತಿದೆ.

ಬಾರಿ ಪುಣ್ಯಸ್ನಾನಕ್ಕೆ ಅಮೃತ ಗಳಿಗೆ

ಈ ಸಾಲಿನ ಕುಂಭಮೇಳಕ್ಕೆ ಲಭಿಸಿರುವ ಅಮೃತ ಮುಹೂರ್ತವು ಮಹೋದಯ ಪುಣ್ಯಸ್ನಾನಕ್ಕೆ ಅತ್ಯಂತ ಪ್ರಶಸ್ತವಾಗಿದೆ. ಪ್ರತಿ ಮೂರು ವರ್ಷಗಳಿಗೊಮ್ಮೆ 3 ದಿನ ನಡೆಯುವ ಈ ಪವಿತ್ರ ಉತ್ಸವವು ಯಾವುದೇ ಜಾತಿ – ಮತ – ಪಂಥಗಳ, ವರ್ಣ-ವರ್ಗಗಳ, ಭೇದ-ಭಾವರಹಿತವಾಗಿ ಸಡಗರ-ಸಂಭ್ರಮಗಳಿಂದ ಸರ್ವಜನಾಂಗದ ಶಾಂತಿ-ಸೌಹಾರ್ದಗಳ ಸಂತೋಷ-ಸಾಮರಸ್ಯಗಳ ಸಂಗಮವಾಗಿದೆ. (ಕೆ.ಎಸ್,ಎಸ್.ಎಚ್)

 

Leave a Reply

comments

Related Articles

error: