ಪ್ರಮುಖ ಸುದ್ದಿಮೈಸೂರು

ಸುಳ್ಳಿನ ಕಂತೆಯ ಲೆಕ್ಕಾಚಾರದ ಬಜೆಟ್ : ಶಾಸಕ ರಾಮದಾಸ್ ಲೇವಡಿ

ಮೈಸೂರಿಗೆ ನೀಡಿದ್ದು ಶೂನ್ಯ

ಮೈಸೂರು,ಫೆ.9 : ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರು ಮಂಡಿಸಿದ ಬಜೆಟ್ ದೂರದೃಷ್ಟಿಯಿಲ್ಲದ ಕೇವಲ ಸಂಖ್ಯೆ ಆಟದ ಸುಳ್ಳಿನ ಕಂತೆಯಾಗಿದ್ದು, ಬೇಕಾದವರಿಗೆ ಎಷ್ಟು ಬೇಕೋ ಅಷ್ಟು ಹಂಚಿಕೆ ಮಾಡುವ ಲೆಕ್ಕಾಚಾರದ ಪುಸ್ತಕವಾಗಿದ್ದು, ಇದರಲ್ಲಿ ಮೈಸೂರಿಗೆ ನೀಡಿದ್ದು ಶೂನ್ಯ ಎಂದು ಶಾಸಕ ರಾಮದಾಸ್ ಲೇವಡಿ ಮಾಡಿದರು.

ನಗರದ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರೋತ್ಥಾನ ಯೋಜನೆಯನ್ನು ಮುಖ್ಯಮಂತ್ರಿಯಾಗಿದ್ದಾಗ ಬಿ.ಎಸ್.ಯಡಿಯೂರಪ್ಪನವರು ಘೋಷಣೆ ಮಾಡಿದ್ದರು ಆ ಯೋಜನೆಗಾಗಿ ಮೈಸೂರಿಗೆ 150 ಕೋಟಿ ರೂ ಘೋಷಣೆ ಮಾಡಿದ್ದರೆ ಹೊರತು ಯಾವ ಹೊಸ ಯೋಜನೆಗಳನ್ನು ಅನುಷ್ಠಾನಗೊಳಿಸಿಲ್ಲ ಎಂದರು.

ನಗರದಲ್ಲಿ ಕಸ ವಿಲೇವಾರಿ ಘಟಕ ಸ್ಥಾಪನೆ, ಶಿಥಿಲವಾಗಿರುವ ದೇವರಾಜ, ಅಗ್ರಹಾರದ ವಾಣಿವಿಲಾಸ, ಮಂಡಿ ಮಾರುಕಟ್ಟೆಗಳ ಅಭಿವೃದ್ಧಿ, ಪುನರ್ ನಿರ್ಮಾಣಕ್ಕೆ ಸಂಬಂಧಿಸಿದ ಮನವಿಗೆ ಸ್ಪಂಧಿಸಿಲ್ಲ, ಹಳೆಯ ಯುಜಿಡಿ, ಒಳಚರಂಡಿ, ಪೈಪ್ ಲೈನ್ ಬದಲಾವಣೆ ಬಗ್ಗೆ ಚಕಾರವಿಲ್ಲ, ಹಿರಿಯ ನಾಗರೀಕರ ಸಾಮಾಜಿಕ ಭದ್ರತೆಗಾಗಿ ನಗರಕ್ಕೆ 10 ಡೇ ಕೇರ್ ಸೆಂಟರ್ ಕೋರಿದ್ದೇವು ಆದನ್ನು ಪ್ರಸ್ತಾಪಿಸಿಲ್ಲ ಎಂದು ಆರೋಪಿಸಿದರು.

ಶಿಕ್ಷಣದ ಗುಣಮಟ್ಟ ಕುಸಿತದಿಂದ ಶೇ.82ರಷ್ಟು ಇಂಜಿನಿಯರಿಂಗ್ ವಿದ್ಯಾರ್ಥಿಗಳು ನಿರುದ್ಯೋಗಿಗಳಾಗಿದ್ದು, ವಿದ್ಯಾರ್ಥಿಗಳ ಕೊರತೆಯಿಂದ ಸುಮಾರು 16 ಇಂಜಿನಿಯರಿಂಗ್ ಕಾಲೇಜುಗಳು ಮುಚ್ಚಲಾಗುತ್ತಿದೆ ಈ ಸಮಯದಲ್ಲಿ ಹಾಸನಕ್ಕೆ ಹೊಸ ವಿವಿ ತರುವ ಅಗತ್ಯವೇನಿತ್ತು ಎಂದು ಪ್ರಶ್ನಿಸಿದರು.

ಆಯುಷ್ ಮಾನ್ ಯೋಜನೆಯಲ್ಲಿ ಅಕ್ರಮ ಜರುಗುತ್ತಿದೆ, ಯೋಜನೆಗೆ ಶೇ.60ರಷ್ಟು ಅನುದಾನ ಕೇಂದ್ರ ಸರ್ಕಾರ ನೀಡುತ್ತಿದೆ ಇದನ್ನು ರಾಜ್ಯ ಸರ್ಕಾರ ಮುಚ್ಚಿಡುತ್ತಿದೆ ಎಂದು ಹೇಳಿದ ಅವರು. ಕಿಚ್ಚುಗುತ್ತು ಮಾರಮ್ಮ ದೇವಸ್ಥಾನದ ವಿಷ ಪ್ರಾಶನ ರೋಗಿಗಳ ಚಿಕಿತ್ಸೆ ನೀಡಿದ ಆಸ್ಪತ್ರೆಗಳಿಗೆ ತಾಂತ್ರಿಕ ಕಾರಣದಿಂದ ಇಂದಿಗೂ ನಯಪೈಸೆ ಸಂದಾಯ ಮಾಡಿಲ್ಲ, ವಿಷ ಪ್ರಾಶನ ಚಿಕಿತ್ಸೆಗೆ ಸರ್ಕಾರದಿಂದ ಅವಕಾಶವಿಲ್ಲ, ಈ ಪ್ರಕರಣವನ್ನು ಯಾವ ಕಾನೂನುನಡಿಯಲ್ಲಿ ಅನುದಾನ ಬಿಡುಗಡೆಗೊಳಿಸುತ್ತಾರೆಂದು ಸ್ಪಷ್ಟಪಡಿಸಬೇಕು. ಮಂಗನ ಕಾಯಿಲೆ ಉಲ್ಬಣವಾಗಿದ್ದು ಅದನ್ನು ನಿರ್ವಹಿಸಲು ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿದರು.

ಬಜೆಟ್ ಮಂಡನೆ ನಂತರ ಆಯವಯ್ಯ ಪುಸ್ತಕ ವಿತರಣೆಯಾಗಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿ, ಪ್ರಸಕ್ತ ಸಾಲಿನ ರಾಜ್ಯ ಬಜೆಟ್ ಜಿಲ್ಲೆಗೆ ಮಾರಕವಾಗಿದ್ದು ಅದು ಅನುಮೋದನೆಯೊಳಗೆ ಜಿಲ್ಲೆಯ ಅಭಿವೃದ್ಧಿಗೆ ಕ್ರಮಕೈಗೊಳ್ಳಬೇಕೆಂದು ಕೋರಿದರು.

ಆಡಿಯೋ ಮುಜುಗರವಿಲ್ಲ :

ಅಪರೇಷನ್ ಕಮಲ ಹಿನ್ನಲೆಯಲ್ಲಿ ಬಿಡುಗಡೆಯಾದ ಆಡಿಯೋ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೆ ಮಾತ್ರ ಆಡಿಯೋ ಬಗ್ಗೆ ತಿಳಿದಿದ್ದು ಅವರೇ ಹೇಳಬೇಕು, ಆಡಿಯೋ ವಿಷಯದಲ್ಲಿ ತಮಗೇನು ಮುಜುಗರವಿಲ್ಲ ಎಂದರು.

ದ ವಾಕ್ : ಆರೋಗ್ಯ ಮೈಸೂರು ಯೋಜನೆಯಡಿ ನಡೆಸುತ್ತಿರುವ ಆರೋಗ್ಯ ಉಚಿತ ತಪಾಸಣಾ ಶಿಬಿರವನ್ನು ಫೆ.10ರ ಬೆಳಗ್ಗೆ 7 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಕುವೆಂಪು ನಗರದ ವಿಜಯ ವಿಠಲ ಕಾಲೇಜಿನಲ್ಲಿ ಆಯೋಜಿಸಿದ್ದು, ಶಾರದಾದೇವಿನಗರ, ಟಿ.ಕೆ.ಬಡಾವಣೆ, ಸರಸ್ವತಿಪುರಂ ಸಾರ್ವಜನಿಕರು ಇದರ ಸದುಪಯೋಗಪಡೆದುಕೊಳ್ಳಬೇಕೆಂದು ಕೋರಿದರು.

ಮಹಾನಗರ ಪಾಲಿಕೆ ವಿರೋಧ ಪಕ್ಷದ ನಾಯಕ ಬಿ.ವಿ.ಮಂಜುನಾಥ್, ಪಾಲಿಕೆ ಸದಸ್ಯರಾದ ಶಿವಕುಮಾರ್, ಎಚ್.ಸಿ.ರಮೇಶ್ ಗೋಷ್ಠಿಯಲ್ಲಿ ಹಾಜರಿದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: