ಮೈಸೂರು

ಲಾನ್ಸ್ಡೌನ್ ಬಿಲ್ಡಿಂಗ್,ಕೆ ಆರ್ ಮಾರುಕಟ್ಟೆ ನೆಲಸಮ ವಿಚಾರ : ಸದ್ಯದಲ್ಲೇ ಯದುವೀರ್ ಒಡೆಯರ್ ಭೇಟಿಯಾಗಿ ಚರ್ಚಿಸುತ್ತೇನೆ; ಮೇಯರ್ ಪುಷ್ಪಲತಾ ಜಗನ್ನಾಥ್

ಮೈಸೂರು,ಫೆ.9:- ಲಾನ್ಸ್  ಡೌನ್ ಬಿಲ್ಡಿಂಗ್ ಹಾಗೂ ಕೆ ಆರ್ ಮಾರುಕಟ್ಟೆ ನೆಲಸಮ ವಿಚಾರಕ್ಕೆ ಸಂಬಂಧಿಸಿದಂತೆ  ಸದ್ಯದಲ್ಲೇ  ರಾಜವಂಶಸ್ಥ ಯದುವೀರ್ ಅವರನ್ನು ಭೇಟಿಯಾಗಿ ಚರ್ಚಿಸುತ್ತೇನೆ ಎಂದು ಮೈಸೂರು ಮಹಾನಗರ ಪಾಲಿಕೆ ಮೇಯರ್ ಪುಷ್ಪಲತಾ ಜಗನ್ನಾಥ್ ತಿಳಿಸಿದರು.

ಈ ಹಿಂದೆ ಲಾನ್ಸ್  ಡೌನ್ ಬಿಲ್ಡಿಂಗ್ ಹಾಗೂ ಕೆ ಆರ್ ಮಾರುಕಟ್ಟೆ ನೆಲಸಮ ವಿಚಾರಕ್ಕೆ ಸಾಮಾಜಿಕ ಜಾಲತಾಣದಲ್ಲಿ ರಾಜವಂಶಸ್ಥ ಯದುವೀರ್ ಅವರು ಅಸಮಾಧಾನ ವ್ಯಕ್ತ ಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಈ ಬಗ್ಗೆ ಮೈಸೂರಿನಲ್ಲಿ ಇಂದು ಮಾತನಾಡಿದ ಮೇಯರ್ ಪುಷ್ಪಲತಾ ಜಗನ್ನಾಥ್,   ಖುದ್ದಾಗಿ ಯದುವೀರ್ ಅವರನ್ನು ಭೇಟಿ ಮಾಡಿ ಸಲಹೆ ಪಡೆದು ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ. ನಮಗೂ ಪಾರಂಪರಿಕ ಕಟ್ಟಡಗಳ ಉಳಿಸುವ ಆಸಕ್ತಿಯಿದೆ ಹಾಗೂ  ಗೌರವವೂ ಕೂಡಾ ಇದೆ. ಈ ಹಿನ್ನೆಲೆಯಲ್ಲಿ ಮುಂದಿನ ವಾರ ಯದುವೀರ್ ಅವರನ್ನು ಭೇಟಿ ಮಾಡುತ್ತೇವೆ ಎಂದು ಸ್ಪಷ್ಟನೆ ನೀಡಿದರು.

ಲಾನ್ಸ್ ಡೌನ್ ಕಟ್ಟಡವನ್ನ ಸ್ಮಾರಕವಾಗಿಡಬಹುದು. ಆದರೆ ಮತ್ತೆ ವಾಣಿಜ್ಯ ಕೆಲಸಗಳಿಗೆ ಬಳಸಲು ಸಾಧ್ಯವಾಗೋದಿಲ್ಲ. ಸರ್ಕಾರಕ್ಕೂ ಈ ಬಗ್ಗೆ ಪತ್ರ ಬರೆದಿದ್ದೇವೆ ಎಂದು ಮೇಯರ್ ಪುಷ್ಪಲತಾ ಜಗನ್ನಾಥ್  ತಿಳಿಸಿದರು.

ಮೈತ್ರಿ ಸರ್ಕಾರದ ಬಜೆಟ್ ನಲ್ಲಿ ಮೈಸೂರು ಮಹಾನಗರ ಪಾಲಿಕೆಗೆ 150 ಕೋಟಿ ಅನುದಾನ ನೀಡಿದ ಹಿನ್ನೆಲೆ ಶ್ಲಾಘನೆ ವ್ಯಕ್ತಪಡಿಸಿದ ಮೇಯರ್ ಪುಷ್ಪಲತಾ ಜಗನ್ನಾಥ್  ನಾವು ಬಜೆಟ್ ಮುನ್ನ 300 ಕೋಟಿ ಅನುದಾನ ಬೇಡಿಕೆ ಇಟ್ಟಿದ್ದೆವು. ಆದರೆ 150 ಕೋಟಿ ದೊರೆತಿದೆ. ನೀಡಿರುವ 150 ಕೋಟಿ ಹಣವನ್ನು ಮೈಸೂರು ನಗರಾಭಿವೃದ್ಧಿಗೆ ಬಳಸಬೇಕಿದೆ. ಕೆಲವೆಡೆ ಸಾಕಷ್ಟು ಸಮಸ್ಯೆಗಳಿವೆ  ಈ ಹಿನ್ನೆಲೆ ಬಜೆಟ್ ನಲ್ಲಿ ಘೋಷಣೆಯಾಗಿರುವ ಹಣವನ್ನು ವಿವಿಧ ಕೆಲಸಗಳಿಗೆ ಬಳಸುತ್ತೇವೆ ಎಂದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: