ಮೈಸೂರು

ಪತ್ರಕರ್ತರ 34ನೇ ರಾಜ್ಯ ಸಮ್ಮೇಳನ ಪ್ರಯುಕ್ತ ಇತಿಹಾಸದ ಕ್ಷಣಗಳನ್ನು ಮೆಲುಕು ಹಾಕುವ ಛಾಯಾಚಿತ್ರ ಪ್ರದರ್ಶನ

ಮೈಸೂರು,ಫೆ.11:- ಮೈಸೂರು ಜಿಲ್ಲೆ ಸುತ್ತೂರು ಶ್ರೀ ಕ್ಷೇತ್ರದಲ್ಲಿ ಮಾರ್ಚ್ 1, 2ರಂದು ಪತ್ರಕರ್ತರ 34ನೇ ರಾಜ್ಯ ಸಮ್ಮೇಳನ ಆಯೋಜನೆಗೊಂಡಿರುವ ಹಿನ್ನೆಲೆಯಲ್ಲಿ  ಸಮ್ಮೇಳನ ಕಾರ್ಯಾಧ್ಯಕ್ಷರು ಹಾಗೂ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷರಾದ ಸಿ.ಕೆ. ಮಹೇಂದ್ರ ಅವರ ಅಧ್ಯಕ್ಷತೆಯಲ್ಲಿ  ಇತ್ತೀಚೆಗೆ  ಸಂಘದ ಕಟ್ಟಡದ ಎರಡನೇ ಮಹಡಿಯಲ್ಲಿರುವ ಸಮ್ಮೇಳನ ಕಚೇರಿಯಲ್ಲಿ ಮೈಸೂರಿನ ಎಲ್ಲ ಫೋಟೋ ಹಾಗೂ ವಿಡಿಯೋ ಜರ್ನಲಿಸ್ಟ್ಸ್ ಗಳ ಸಭೆ ನಡೆಸಲಾಯಿತು.

ರಾಜ್ಯ ಸಮ್ಮೇಳನದಲ್ಲಿ ಫೋಟೋ ಹಾಗೂ ವಿಡಿಯೋ  ಜರ್ನಲಿಸ್ಟ್ಸ್ ಗಳ ಸಕ್ರಿಯ ಪಾಲ್ಗೊಳ್ಳುವಿಕೆ ಬಗ್ಗೆ  ಚರ್ಚಿಸಲಾಯಿತು. ಸಮ್ಮೇಳನ ಸ್ಥಳವಾದ ಸುತ್ತೂರು ಶ್ರಿಕ್ಷೇತ್ರದಲ್ಲಿ ಸಮಾನಾಂತರ ಪರ್ಯಾಯ ವೇದಿಕೆಯಲ್ಲಿ ಫೋಟೋ ಜರ್ನಲಿಸಂ ಹಾಗೂ ವಿಡಿಯೋ ಜರ್ನಲಿಸಂನ ಸವಾಲುಗಳ ಬಗ್ಗೆ ಆಯಾ ಕ್ಷೇತ್ರಗಳ ಪರಿಣಿತರೊಂದಿಗೆ ವಿಷಯಾಧಾರಿತ ಗೋಷ್ಠಿ, ಚರ್ಚೆ ಹಾಗೂ ಸಂವಾದ ನಡೆಸಲು ಸಭೆ ತೀರ್ಮಾನಿಸಿತು.

ಇದೇ ವೇಳೆ ಮೈಸೂರು ಛಾಯಾಚಿತ್ರ ಪತ್ರಿಕೋದ್ಯಮದ ಗತಕಾಲದ ವೈಭವವನ್ನು ಸಾರುವ, ಇತಿಹಾಸದ ಕ್ಷಣಗಳನ್ನು ಮೆಲುಕು ಹಾಕುವ ಛಾಯಾಚಿತ್ರ ಪ್ರದರ್ಶನ ಏರ್ಪಡಿಸಲು ಸಭೆ ನಿರ್ಣಯಿಸಿ, ಜಿಲ್ಲೆಯ ಪ್ರತಿಯೊಬ್ಬ ಫೋಟೋ ಜರ್ನಲಿಸ್ಟ್ ಗೆ ಪ್ರದರ್ಶನದಲ್ಲಿ ಸ್ಥಳಾವಕಾಶ  ಕಲ್ಪಿಸಲು ತೀರ್ಮಾನಿಸಲಾಯಿತು.

ಇದೇ ವೇಳೆ ವಿಡಿಯೋ ಜರ್ನಲಿಸಂಗೆ ಸಂಬಂಧಿಸಿದಂತೆ ಸ್ಥಳೀಯ ವಿಡಿಯೋ ಜರ್ನಲಿಸ್ಟ್ ಗಳು ಚಿತ್ರೀಕರಿಸಿರುವ ಸವಾಲಿನಿಂದ ಕೂಡಿದ ಪ್ಯಾಕೇಜ್ ಸ್ಟೋರಿಯ ವಿಡಿಯೋ ತುಣುಕುಗಳನ್ನು ಎಲ್ಇಡಿ ಪರದೆ ಮೂಲಕ ಬಿತ್ತರಿಸಲು ಯೋಜಿಸಲಾಯಿತು.

ಪತ್ರಕರ್ತರ ರಾಜ್ಯ ಸಮ್ಮೇಳನವೊಂದರಲ್ಲಿ ಫೋಟೋ ಹಾಗೂ ವಿಡಿಯೋ ಜರ್ನಲಿಸ್ಟ್ಸ್ ಗೆ ಪ್ರಾತಿನಿಧ್ಯ ನೀಡುವ ಸಂಬಂಧ ಮೈಸೂರು ಜಿಲ್ಲಾ ಪತ್ರಕರ್ತರ ಸಂಘ ತಳೆದ ಈ ವಿನೂತನ ನಿಲುವನ್ನು ಸಭೆಯಲ್ಲಿ ಪಾಲ್ಗೊಂಡವರೆಲ್ಲರೂ ಸ್ವಾಗತಿಸಿ, ಸಂತಸ ವ್ಯಕ್ತಪಡಿಸಿದರು. ಅಲ್ಲದೆ ಸಮ್ಮೇಳನದ ಯಶಸ್ಸಿಗೆ ಕಟಿಬದ್ಧವಾಗಿ ದುಡಿಯುವುದಾಗಿ ಹೇಳಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: