ಮನರಂಜನೆ

ಚಿತ್ರೀಕರಣದ ವೇಳೆ ಬೆನ್ನಿಗೆ ಪೆಟ್ಟು: ಒಂದು ತಿಂಗಳು ಬೆಡ್ ರೆಸ್ಟ್ ನಲ್ಲಿ ರಾಧಿಕಾ ಕುಮಾರಸ್ವಾಮಿ

ಬೆಂಗಳೂರು,ಫೆ.11-ನಟಿ ರಾಧಿಕಾ ಕುಮಾರಸ್ವಾಮಿ `ಭೈರಾದೇವಿ’ ಚಿತ್ರೀಕರಣದ ಸಂದರ್ಭದಲ್ಲಿ ಬೆನ್ನಿಗೆ ಪೆಟ್ಟು ಮಾಡಿಕೊಂಡಿದ್ದು, ಒಂದು ತಿಂಗಳ ಕಾಲ ಬೆಡ್ ರೆಸ್ಟ್ ಮಾಡುವಂತೆ ವೈದ್ಯರು ಸೂಚಿಸಿದ್ದಾರೆ.

ಅಮಾವಾಸ್ಯೆಯಂದು (ಫೆ.4) ಸುಮಾರು 1 ಗಂಟೆಯ ವೇಳೆಗೆ ಶಾಂತಿನಗರದ ಸ್ಮಶಾನದಲ್ಲಿ ಚಿತ್ರದ ಕ್ಲೈಮ್ಯಾಕ್ಸ್ ಶೂಟಿಂಗ್ ನಡೆಯುತ್ತಿತ್ತು. ಇದಕ್ಕಾಗಿ ರಾಧಿಕಾ ಅವರು ಕಾಳಿ ಅವತಾರ ತಾಳಿದ್ದರು. ಕಾಳಿ ರೂಪದಲ್ಲಿದ್ದ ರಾಧಿಕಾ ಅವರು ಗೋರಿ ಮೇಲೆ ನಡೆದುಕೊಂಡು ಬರಬೇಕಿತ್ತು. ಹಾಗೆ ಕಾಳಿ ಮಂತ್ರ ಪಠಿಸುತ್ತಲೇ ಗೋರಿ ಮೇಲೆ ನಡೆದುಕೊಂಡು ಬರುವಾಗ ಆಯಾತಪ್ಪಿ ಗೋರಿಯಿಂದ ಕೆಳಗೆ ಬಿದ್ದರು. ಈ ವೇಳೆ ಅವರ ಬೆನ್ನಿಗೆ ಪೆಟ್ಟಾಗಿದೆ.

ಗೋರಿಯಿಂದ ಬಿದ್ದ ರಾಧಿಕಾ ಕುಮಾರಸ್ವಾಮಿ ಅವರಿಗೆ ಸ್ಪೈನಲ್ ಕಾರ್ಡ್ ಗೆ ಏಟು ಬಿದ್ದಿದೆ. ಖಾಸಗಿ ಆಸ್ಪತ್ರೆಯಲ್ಲಿ ನಟಿ ರಾಧಿಕಾ ಕುಮಾರಸ್ವಾಮಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಂದು ತಿಂಗಳ ಕಾಲ ಬೆಡ್ ರೆಸ್ಟ್ ನಲ್ಲಿ ಇರುವಂತೆ ವೈದ್ಯರು ರಾಧಿಕಾ ಕುಮಾರಸ್ವಾಮಿ ಅವರಿಗೆ ಸೂಚಿಸಿದ್ದಾರೆ.

ಗೋರಿ ಮೇಲಿಂದ ಕೆಳಗೆ ಬಿದ್ದಾಗ ರಾಧಿಕಾ ಅವರಿಗೆ ನೋವು ಕಾಣಿಸಿಕೊಂಡಿಲ್ಲ. ಹೀಗಾಗಿ ಅಂದು ಚಿತ್ರೀಕರಣ ಮುಂದುವರೆಸಿದ್ದಾರೆ. ಆದರೆ ಮಾರನೇ ದಿನ ಬೆನ್ನಿನಲ್ಲಿ ತೀವ್ರ ನೋವು ಕಾಣಿಸಿಕೊಂಡಿದೆ. ಹೀಗಾಗಿ ಆಸ್ಪತ್ರೆಗೆ ಭೇಟಿ ಕೊಟ್ಟಾಗ ಸ್ಪೈನಲ್ ಕಾರ್ಡ್ ಗೆ ಪೆಟ್ಟು ಬಿದ್ದಿರುವುದು ತಿಳಿದುಬಂದಿದೆ.

ಒಂದು ತಿಂಗಳು ಬೆಡ್ ರೆಸ್ಟ್ ನಲ್ಲಿರುವಂತೆ ವೈದ್ಯರು ಹೇಳಿರುವ ಕಾರಣ, ಯಾವುದೇ ಚಿತ್ರೀಕರಣದಲ್ಲಿ ರಾಧಿಕಾ ಕುಮಾರಸ್ವಾಮಿ ಭಾಗವಹಿಸುವಂತಿಲ್ಲ. ಹೀಗಾಗಿ, ‘ಭೈರಾದೇವಿ’ ಚಿತ್ರದ ಶೂಟಿಂಗ್ ಕೂಡ ಅನಿವಾರ್ಯವಾಗಿ ಮುಂದೂಡಬೇಕಾಗಿದೆ.

‘ಅಮಾವಾಸ್ಯೆ ದಿನ ಈ ಘಟನೆ ನಡೆಯಿತು. ಶಾಂತಿನಗರದ ಸ್ಮಶಾನದಲ್ಲಿ ರಾತ್ರಿ ಶೂಟಿಂಗ್ ಮಾಡ್ತಿದ್ವಿ. ಗೋರಿ ಮೇಲೆ ನಡೆದುಕೊಂಡು ಬರುವಾಗ ರಾಧಿಕಾ ಮೇಡಂ ಕೆಳಗೆ ಬಿದ್ದರು. ಬಿದ್ದಾಗ ಅವರಿಗೆ ಏನೂ ಅನಿಸಲಿಲ್ಲ. ಅವತ್ತು ಶೂಟಿಂಗ್ ಮಾಡಿದ್ವಿ. ಮಾರನೇ ದಿನ ರೆಸ್ಟ್ ಮಾಡಿ ಅಂತ ಹೇಳಿದ್ವಿ. ಮೈನರ್ ಪೆಟ್ಟಾಗಿದೆ. ಒಂದು ತಿಂಗಳು ರೆಸ್ಟ್ ನಲ್ಲಿ ಇರ್ತಾರೆ ಅಂತಾರೆ ‘ಭೈರಾದೇವಿ’ ಚಿತ್ರದ ನಿರ್ದೇಶಕ ಶ್ರೀಜೈ. (ಎಂ.ಎನ್)

 

Leave a Reply

comments

Related Articles

error: