ಕರ್ನಾಟಕಪ್ರಮುಖ ಸುದ್ದಿ

ಕಾಂಗ್ರೆಸ್ ಅತೃಪ್ತ ಶಾಸಕರಿಗೆ ಪುನಃ ಕಡೆಯ ಅವಕಾಶ!

ಬೆಂಗಳೂರು (ಫೆ.11): ಕಾಂಗ್ರೆಸ್ ನಿಂದ ದೂರವಾಗಿ ಮುಂಬೈನಲ್ಲಿ ತಂಗಿರುವ ಅತೃಪ್ತ ಶಾಸಕರ ವಿರುದ್ಧ ಕ್ರಮ ಕೈಗೊಳ್ಳಲು ಕಾಂಗ್ರೆಸ್ ಮುಂದಾಗಿದೆ. ಇಂದೇ ಅತೃಪ್ತ ಶಾಸಕರ ವಿರುದ್ಧ ಸ್ಪೀಕರ್ ಗೆ ದೂರು ನೀಡಲು ತೀರ್ಮಾನಿಸಲಾಗಿತ್ತಾದರೂ, ಕೊನೆ ಕ್ಷಣದವರೆಗೆ ಕಾದು ನೋಡುವ ತಂತ್ರಕ್ಕೆ ಪಕ್ಷದ ನಾಯಕರು ಮುಂದಾಗಿದ್ದಾರೆ ಎನ್ನಲಾಗಿದೆ.

ಬಜೆಟ್ ಅಧಿವೇಶನಕ್ಕೆ ಮತ್ತು ಕಾಂಗ್ರೆಸ್ ಶಾಸಕಾಂಗ ಸಭೆಗೆ ನಾಲ್ವರು ಅತೃಪ್ತ ಶಾಸಕರು ಗೈರು ಹಾಜರಾಗಿದ್ದು. ಅವರಿಗೆ ವಿಪ್ ಜಾರಿ ಮಾಡಲಾಗಿದೆ. ಆದರೂ ಕೂಡ ಅತೃಪ್ತ ಶಾಸಕರು ಪಕ್ಷದ ನಾಯಕರ ಸಂಪರ್ಕಕ್ಕೆ ಸಿಗುತ್ತಿಲ್ಲ. ಇದರಿಂದ ಶಾಸಕರ ವಿರುದ್ಧ ಪಕ್ಷಾಂತರ ನಿಷೇಧ ಕಾಯ್ದೆಯಡಿ ಕ್ರಮ ಕೈಗೊಳ್ಳಲು ವಿಧಾನಸಭೆಯ ಅಧ್ಯಕ್ಷರಿಗೆ ದೂರು ನೀಡಲು ತೀರ್ಮಾನಿಸಲಾಗಿತ್ತು.

ಆದರೆ ರಾಜಕೀಯ ಬೆಳವಣಿಗೆಗಳ ಬಗ್ಗೆ ಕಾದು ನೋಡುವ ತಂತ್ರ ಅನುಸರಿಸುತ್ತಿರುವ ಕಾಂಗ್ರೆಸ್ ನಾಯಕರು, ಅತೃಪ್ತ ಶಾಸಕರಿಗೆ ಲಾಸ್ಟ್ ಚಾನ್ಸ್ ನೀಡಲು ಮುಂದಾಗಿದ್ದಾರೆ ಎಂದು ಹೇಳಲಾಗಿದೆ. ಇಷ್ಟೇ ಅಲ್ಲದೆ ಬಿಜೆಪಿ ಅವಿಶ್ವಾಸ ನಿರ್ಣಯ ಮಂಡಿಸದಿದ್ದರೆ ಸರ್ಕಾರಕ್ಕೆ ಸದ್ಯಕ್ಕೆ ಯಾವುದೇ ತೊಂದರೆ ಇಲ್ಲ.

ಮಾತ್ರವಲ್ಲ, ಸರ್ಕಾರದ ಸಂಖ್ಯಾಬಲ ಸರಳ ಬಹುಮತಕ್ಕಿಂತ ತುಸುವೇ ಹೆಚ್ಚಿದೆಯಷ್ಟೆ. ಶಾಸಕರನ್ನು ಅನರ್ಹಗೊಳಿಸಿದರೆ ಮೈತ್ರಿ ಸರ್ಕಾರದ ಶಾಸಕರ ಸಂಖ್ಯೆಯೇ ಕಡಿಮೆಯಾಗುವ ಕಾರಣದಿಂದ ಸದ್ಯಕ್ಕೆ ಶಾಸಕರಾದ ರಮೇಶ್ ಜಾರಕಿಹೊಳಿ, ಬಿ. ನಾಗೇಂದ್ರ, ಮಹೇಶ್ ಕುಮಠಳ್ಳಿ, ಉಮೇಶ್ ಜಾಧವ್ ಅವರ ಮುಂದಿನ ನಡೆ ಆಧರಿಸಿ ಕಾಂಗ್ರೆಸ್ ನಾಯಕರು ತೀರ್ಮಾನ ಕೈಗೊಳ್ಳಲಿದ್ದಾರೆ ಎನ್ನಲಾಗಿದೆ. (ಎನ್.ಬಿ)

Leave a Reply

comments

Related Articles

error: