
ಪ್ರಮುಖ ಸುದ್ದಿ
ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪನವರು ರಾಜಕೀಯ ನಿವೃತ್ತಿ ಹೊಂದಲಿ : ಡಿ. ಬಸವರಾಜ್ ಆಗ್ರಹ
ರಾಜ್ಯ(ದಾವಣಗೆರೆ)ಫೆ.11:- ಆಪರೇಷನ್ ಕಮಲದ ಸಲುವಾಗಿ ಗುರುಮಿಟಿಕಲ್ ಶಾಸಕ ನಾಗನಗೌಡ ಅವರ ಪುತ್ರ ಶರಣ್ಗೌಡ ಜೊತೆಗೆ ಸಂಭಾಷಣೆ ಮಾಡಿರುವುದು ನಾನೇ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪನವರು ನಿನ್ನೆಯ ದಿನ ತಪ್ಪೊಪ್ಪಿಕೊಂಡಿದ್ದಾರೆ. ಅವರು ಈ ಹಿಂದೆ ಮಾತನಾಡಿ ಆಡಿಯೋದಲ್ಲಿ ಇರುವ ಧ್ವನಿ ನನ್ನದಲ್ಲ ನನ್ನ ಧ್ವನಿ ಎಂದು ಸಾಬೀತಾದರೆ ನಾನು ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ಮಾತ್ರವಲ್ಲ ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡಿ ರಾಜಕೀಯ ನಿವೃತ್ತಿ ಪಡೆಯುತ್ತೇನೆಂದು ಪ್ರಜಾಪ್ರಭುತ್ವದ ಪ್ರವಿತ್ರ ದೇಗುಲ ವಿಧಾನ ಸಭೆಯಲ್ಲಿ ಘೋಷಿಸಿದ್ದರು. ಇದೀಗ ಬಿ.ಎಸ್. ಯಡಿಯೂರಪ್ಪನವರು ತಪ್ಪು ಒಪ್ಪಿಕೊಂಡಿರುವುದರಿಂದ ನುಡಿದಂತೆ ನಡೆದು ತಮ್ಮೆಲ್ಲ ಹುದ್ದೆಗಳಿಗೆ ರಾಜೀನಾಮೆ ನೀಡಿ ರಾಜಕೀಯ ನಿವೃತ್ತಿ ಹೊಂದಲಿ ಎಂದು ಕೆ.ಪಿ.ಸಿ.ಸಿ. ಕಾರ್ಯದರ್ಶಿ ಡಿ. ಬಸವರಾಜ್ ಆಗ್ರಹಿಸಿದ್ದಾರೆ.
ಆಪರೇಷನ್ ಕಮಲದ ಸೂತ್ರದಾರರು ಹಾಗೂ ಇಂತಹ ದುಷ್ಕೃತ್ಯಕ್ಕೆ ಪ್ರೇರಕ ಶಕ್ತಿಯಾಗಿ ತೆರೆಮರೆಯಲ್ಲಿ ನಿಂತಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಅಮಿತ್ ಶಾರವರ ವಿರುದ್ಧವು ಸುಪ್ರೀಂ ಕೋರ್ಟ್ ನ್ಯಾಯಧೀಶರಿಂದ ಸಮಗ್ರ ತನಿಖೆ ನಡೆಸಿ ಕಾನೂನು ಕ್ರಮ ಜರುಗಿಸಲಿ ಎಂದು ಡಿ. ಬಸವರಾಜ್ ಸರ್ಕಾರವನ್ನು ಆಗ್ರಹಿಸಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಭ್ರಷ್ಟಾಚಾರ ನಿಯಂತ್ರಣ ಮಾಡಿದ್ದೇನೆಂದು ಹೇಳುತ್ತಾರೆ. ಮೋದಿ ಪರಿಶುದ್ಧ ರಾಜಕಾರಣದ ಬಗ್ಗೆ ಮಾತನಾಡುತ್ತಲೇ ನೂರಾರು ಕೋಟಿ ಅಪರೇಷನ್ ಕಮಲಕ್ಕೆ ಹಣ ಒದಗಿಸುತ್ತಾರೆ. ನೂರಾರು ಕೋಟಿ ಹಣ ಎಲ್ಲಿಂದ ಬಂತು ಎಂದು ಪ್ರಶ್ನಿಸಿದ ಅವರು ಪ್ರಾಯಶ: ಈ ಹಣ ರಫೇಲ್ ಯುದ್ಧ ವಿಮಾನ ಖರೀದಿ ಹಗರಣದಲ್ಲಿ ಪಡೆದ ಲಂಚದ ಹಣ ಇರಬಹುದೆಂದು ಶಂಕೆ ವ್ಯಕ್ತಪಡಿಸಿದರು. ಬಿ.ಎಸ್. ಯಡಿಯೂರಪ್ಪನವರು ಈಗಾಗಲೇ ತಮ್ಮದೇ ಧ್ವನಿ ಎಂದು ಒಪ್ಪಿಕೊಂಡಿರುವ ಕಾರಣ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಂತೆ ಮೊಕದ್ದಮೆ ದಾಖಲು ಮಾಡಿ ಸರ್ಕಾರ ಸಮಗ್ರ ತನಿಖೆ ನಡೆಸಬೇಕೆಂದು ಅವರು ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ದಾವಣಗೆರೆ ಜಿಲ್ಲಾ ಕಾಂಗ್ರೆಸ್ ಕಾರ್ಮಿಕ ವಿಭಾಗದ ಅಧ್ಯಕ್ಷರಾದ ಅಲ್ಲಾವಲ್ಲಿ ಘಜಿಖಾನ್, ಕೆ.ಪಿ.ಸಿ.ಸಿ. ಕಾರ್ಮಿಕ ವಿಭಾಗದ ಕಾರ್ಯದರ್ಶಿಗಳಾದ ಆಶ್ರಫ್ ಅಲಿ, ಉತ್ತರವಲಯ ಕಾರ್ಮಿಕ ಅಧ್ಯಕ್ಷರಾದ ಲಿಯಾಖತ್ ಅಲಿ, ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಪ್ರಧಾನ ಕಾರ್ಯದರ್ಶಿ ಎ.ಅಬ್ದುಲ್ ಜಬ್ಬಾರ್ ಜಿಲ್ಲಾ ಕಾಂಗ್ರೆಸ್ ಅಸಂಘಟಿಕ ಕಾರ್ಮಿಕ ವಿಭಾಗದ ಪ್ರಧಾನ ಕಾರ್ಯದರ್ಶಿ ಹೆಚ್. ಹರೀಶ್, ಜಿಲ್ಲಾ ಕಾಂಗ್ರೆಸ್ ಮುಖಂಡರುಗಳಾದ ಡಿ. ಶಿವಕುಮಾರ್, ಅರಸಿಕೆರೆ ಸಿ. ರಮೇಶ್, ಮಹ್ಮದ್ ರಿಯಾಜ್, ರಹಮ್ಮತ್ವುಲ್ಲಾ ಸೇರಿದಂತೆ ಇತರರು ಭಾಗವಹಿಸಿದ್ದರು. (ಎಸ್.ಎಚ್)