ಮೈಸೂರು

ಎಲ್ಲೆಂದರಲ್ಲಿ ಕಸ ಸುರಿಯದಿರಿ, ಇಲ್ಲದಿದ್ದಲ್ಲಿ ಪಾಲಿಕೆಯ ಸದಸ್ಯರೇ ಬಂದು ಕುಳಿತಾರು..!

ಇಲ್ಲಿ‌ ಕಸ ಹಾಕಬೇಡಿ’ ಇಲ್ಲಿ ಮೂತ್ರ ವಿಸರ್ಜನೆ ಮಾಡಬೇಡಿ ಅಂತ ಪಾಲಿಕೆಯವರು ಗೋಡೆಗಳ ಮೇಲೆ ಬರೆಸಿದ್ದರೂ, ಏನೇ ನಿಯಮಗಳನ್ನು ಜಾರಿಗೆ ತಂದರೂ,  ಅವುಗಳನ್ನೆಲ್ಲ ಗಾಳಿಗೆ ತೂರಿ ಜನರು ಮಾತ್ರ ಅವರು ಮಾಡೋದನ್ನೇ ಮಾಡುತ್ತಿರುತ್ತಾರೆ. ಎಲ್ಲೆಂದರಲ್ಲಿ ಕಸ ಸುರಿಯದಿರಿ,  ನಾಮಫಲಕ ಇದ್ದಾಗಲಾದರೂ ಅದನ್ನು ಅನುಸರಿಸಿ. ಇಲ್ಲದಿದ್ದಲ್ಲಿ ಪಾಲಿಕೆ ಸದಸ್ಯರೇ ಸ್ಥಳಕ್ಕೆ ಬಂದು ಕುಳಿತಾರು..!

ಜನರನ್ನು ಬದಲಾಯಿಸಲು ಪಾಲಿಕೆ ಸದಸ್ಯರೋರ್ವರು ಪಣ ತೊಟ್ಟಿದ್ದಾರೆ. ಮೈಸೂರು ನಗರ ಪಾಲಿಕೆ ವಾರ್ಡ್ ನಂಬರ್ 10ರ ಸದಸ್ಯ ಸುನಿಲ್ ಈಗಾಗಲೇ ಸ್ವಚ್ಛತೆಯ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ. ಮತ್ತೆ ಇದೇ ಸುನೀಲ್, ಗಾಂಧೀ ತತ್ವದ ಮೂಲಕ ಗಾಂಧೀಗಿರಿ ಆರಂಭಿಸಿದ್ದಾರೆ. ಅದು ಮೈಸೂರಿನ ವಿದ್ಯಾರಣ್ಯಪುರಂನ 9ನೇ ಮುಖ್ಯರಸ್ತೆಯ ಸಾರ್ವಜನಿಕ ಹಾಸ್ಟೆಲ್ ರಸ್ತೆಯಲ್ಲಿ.

ಕಸ ಹಾಕುವ ಸ್ಥಳದಲ್ಲೇ ನಾಮಫಲಕ ಹಿಡಿದು ಕುಳಿತ ಸುನೀಲ್

ಕಸ ಹಾಕಬೇಡಿ ಎಂದು ಗೋಡೆ ಬರಹವಿದ್ದರೂ ಜನರು ಅದೇ ಸ್ಥಳದಲ್ಲಿ ಜನರು ಕಸವನ್ನು ತಂದು ಸುರಿಯುತ್ತಿದ್ದರು. ಆದರೆ ಪಾಲಿಕೆ ಸದಸ್ಯ ಸುನೀಲ್ ಆ ಸ್ಥಳದಲ್ಲಿರುವ ಕಸವನ್ನು ತೆಗೆಸಿ, ಆ ಸ್ಥಳವನ್ನು ಶುಚಿಗೊಳಿಸಿ ಅದೇ ಸ್ಥಳದಲ್ಲಿ ಕಸ ಹಾಕಬೇಡಿ ಎಂದು ನಾಮಫಲಕ ಹಿಡಿದು ಕುಳಿತಿದ್ದರು. ಅದು ಕೇವಲ ಅರ್ಧ ಗಂಟೆಗೆ ಮಾತ್ರ ಸೀಮಿತವಾಗಿ ಅಲ್ಲ. ದಿನವಿಡೀ ಅಲ್ಲಿಯೇ ನಾಮಫಲಕವನ್ನು ಹಿಡಿದು ಕುಳಿತಿದ್ದರು.

ಇಷ್ಟೆಲ್ಲ ಕಟ್ಟುನಿಟ್ಟಾಗಿ ಸುನಿಲ್ ಕಾರ್ಯ ನಿರ್ವಹಿಸುತ್ತಿದ್ದರೂ ಕೆಲ ಅವಿವೇಕಿಗಳು ಸುನಿಲ್ ಇಲ್ಲದ ವೇಳೆ ಕಸ ಸುರಿದು ಪರಾರಿಯಾಗಿದ್ದಾರೆ.  ಕೊನೆಗೆ ಇದನ್ನು ಕಂಡ ಸುನಿಲ್ ಕಸವನ್ನು ಮತ್ತೆ ತೆಗಿಸಿದ್ದಾರೆ. ನಾನೂ ಮಧ್ಯರಾತ್ರಿ 12 ಗಂಟೆಯವರೆಗೂ ಇಲ್ಲಿಯೇ ಇರುತ್ತೇನೆ. ಪುನಹ ಬೆಳಗ್ಗೆ 6 ಗಂಟೆಗೆ ಬಂದು ಅದೇ ಜಾಗದಲ್ಲಿ ಕೂರುತ್ತೇನೆ. ಕಂಡಕಂಡಲ್ಲಿ ಕಸ ಸುರಿಯುವ ಜನರಿಗೆ ಬುದ್ದಿ ಬರುವವರೆಗೂ ಈ ಗಾಂಧಿಗಿರಿ ಮುಂದುವರೆಯಲಿದೆ ಎನ್ನುತ್ತಾರೆ ಸುನಿಲ್.

ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಕಸ ಸುರಿಯುವ ವ್ಯಕ್ತಿ

ಸುನಿಲ್ ಅವರು ಇತ್ತ ನಾಮಫಲಕ ಹಿಡಿದು ಜಾಗೃತಿ ಮೂಡಿಸುತ್ತಿದ್ದರೆ, ಹಿಂಬದಿಯಿಂದ ಬಂದ ವ್ಯಕ್ತಿಯೋರ್ವರು ಕಸ ಸುರಿದು ಪರಾರಿಯಾಗಲು ಯತ್ನಿಸಿದ್ದರು. ಈ ವೇಳೆ ಆ ‌ಕಸವನ್ನು ಎತ್ತಿ ಸುನೀಲ್ ಆ ವ್ಯಕ್ತಿಗೆ ಹೀಗೆಲ್ಲ‌ ಮಾಡದಂತೆ‌ ಮನವರಿಕೆ ಮಾಡಿಕೊಟ್ಟರು.

ಒಟ್ಟಾರೆ ದಾದಾಗಿರಿ, ಗೂಂಡಾಗಿರಿಯ ನಡುವೆಯೂ ಗಾಂಧೀಗಿರಿ ಕೆಲಸ ಮಾಡುತ್ತೆ  ಅನ್ನೋದು ಸ್ವಾತಂತ್ರ್ಯ ಬರುವ ಮುನ್ನವೇ ಗೊತ್ತಾಗಿದೆ. ಆದರೆ 21 ಶತಮಾನದಲ್ಲಿ ಈ ಗಾಂಧೀಗಿರಿ ಕೆಲಸ ಮಾಡತ್ತಾ ಎಂಬ ಪ್ರಶ್ನೆ ಮೂಡಿದರೂ, ಮೈಸೂರನ್ನು ಸ್ವಚ್ಛ ನಗರಿಯಾಗಿಯೇ ನಿರಂತರ ಉಳಿಸಿಕೊಳ್ಳಬೇಕು ಎನ್ನುವ ಸುನಿಲ್ ನಿಲುವು ಶ್ಲಾಘನೀಯ.

ಸುರೇಶ್.ಎನ್.

Leave a Reply

comments

Related Articles

error: