ಪ್ರಮುಖ ಸುದ್ದಿ

ನಗರದಲ್ಲಿ ಬೆಳಗದ ಬೀದಿ ದೀಪ : ಕಾರ್ಗತ್ತಲೆಯಲ್ಲಿ ಮಡಿಕೇರಿ ಬಡಾವಣೆಗಳು

ರಾಜ್ಯ(ಮಡಿಕೇರಿ) ಫೆ.12 : -ಮಡಿಕೇರಿ ನಗರಸಭೆ ವ್ಯಾಪ್ತಿಯ ವಿವಿಧ ಬಡಾವಣೆಗಳಲ್ಲಿ ರಾತ್ರಿ ವೇಳೆಯಲ್ಲಿ ಬೀದಿ ದೀಪಗಳು ಬೆಳಗದೆ ಇರುವುದರಿಂದ ಪಾದಾಚಾರಿಗಳು ಆತಂಕವನ್ನು ಎದುರಿಸುತ್ತಿದ್ದು, ನಗರಸಭೆ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ನಗರ ಮಾಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಹೊಟ್ಟೆಯಂಡ ಪಾರ್ವತಿ ಫ್ಯಾನ್ಸಿ ಬೆಳ್ಯಪ್ಪ ಒತ್ತಾಯಿಸಿದ್ದಾರೆ.
ನಗರದ ಮೈಸೂರು ರಸ್ತೆ, ಪೆನ್‍ಷನ್ ಲೈನ್, ರಾಣಿಪೇಟೆ, ಕಾನ್ವೆಂಟ್ ಜಂಕ್ಷನ್, ರೇಸ್‍ಕೋರ್ಸ್ ರಸ್ತೆ, ತಾಲ್ಲೂಕು ಕಛೇರಿ ಎದುರು ಭಾಗ, ದೇಚೂರು, ಚೈನ್ ಗೇಟ್ ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ಮತ್ತು ನಿರ್ಜನ ಪ್ರದೇಶಗಳಲ್ಲಿ ಕಾರ್ಗತ್ತಲು ಕಾಡುತ್ತಿದ್ದು, ಮಹಿಳೆಯರು, ಮಕ್ಕಳು ಭಯದಿಂದ ಮನೆ ಸೇರಬೇಕಾದ ಪರಿಸ್ಥಿತಿ ಇದೆ. ತಿರುವು ಪ್ರದೇಶಗಳಲ್ಲೂ ಬೀದಿದೀಪವಿಲ್ಲದೆ ಅಪಾಯ ಎದುರಾಗಬಹುದೆನ್ನುವ ಆತಂಕ ಪಾದಾಚಾರಿಗಳನ್ನು ಕಾಡುತ್ತಿದೆ. ಕತ್ತಲೆಯಲ್ಲಿ ಹದಗೆಟ್ಟ ರಸ್ತೆಯಲ್ಲಿ ವಯೋವೃದ್ದರು ಬಿದ್ದು ಗಾಯ ಮಾಡಿಕೊಂಡ ಘಟನೆಯೂ ನಡೆದಿದೆ.
ನಗರದ ಚೈನ್‍ಗೇಟ್ ಬಳಿಯಿಂದ ಫೀ.ಮಾ.ಕಾರ್ಯಪ್ಪ ವೃತ್ತದ ವರೆಗೆ ಬೀದಿ ದೀಪಗಳು ಅಮವಾಸ್ಯೆಗೊಮ್ಮೆ, ಹುಣ್ಣಿಮೆಗೊಮ್ಮೆ ಉರಿಯುತ್ತಿರುತ್ತವೆ. ನಗರವನ್ನು ಪ್ರವೇಶಿಸುವ ಮುಖ್ಯ ರಸ್ತೆಯಲ್ಲೇ ಪರಿಸ್ಥಿತಿ ಹೀಗಿರುವಾಗ ನಗರದೊಳಗಿನ ಬಡಾವಣೆಗಳ ಸ್ಥಿತಿಗತಿಯೇನು ಎಂದು ಪಾರ್ವತಿ ಫ್ಯಾನ್ಸಿ ಪ್ರಶ್ನಿಸಿದ್ದಾರೆ.
ತಾಲ್ಲೂಕು ಕಚೇರಿ ಇರುವ ಪ್ರದೇಶದಲ್ಲೇ ಕತ್ತಲು ಆವರಿಸಿಕೊಳ್ಳುವುದು ಆತಂಕದ ವಿಚಾರವಾಗಿದೆ. ಅನಾಹುತ ಸಂಭವಿಸುವ ಮೊದಲು ಪ್ರತಿಯೊಂದು ರಸ್ತೆ ಮತ್ತು ಬಡಾವಣೆಗಳಲ್ಲಿ ಬೀದಿ ದೀಪಗಳು ಬೆಳಗುವಂತೆ ಕ್ರಮ ಕೈಗೊಳ್ಳಬೇಕು. ಗುತ್ತಿಗೆದಾರರು ಬೀದಿ ದೀಪಗಳ ನಿರ್ವಹಣೆಯನ್ನು ಸಮರ್ಪಕವಾಗಿ ನಿಭಾಯಿಸಲು ನಗರಸಭೆ ಸೂಚನೆ ನೀಡಬೇಕೆಂದು ಅವರು ಒತ್ತಾಯಿಸಿದ್ದಾರೆ. (ಕೆಸಿಐ,ಎಸ್.ಎಚ್)

Leave a Reply

comments

Related Articles

error: