ಮೈಸೂರು

ಪ್ರೇಮಿಗಳ ದಿನಾಚರಣೆ ಹಿನ್ನೆಲೆ : ನಿಬಂಧನೆಗಳನ್ನು ಉಲ್ಲಂಘಿಸಿದಲ್ಲಿ ಕಾನೂನುರೀತ್ಯಾ ಕ್ರಮ : ಪೊಲೀಸ್ ಆಯುಕ್ತ ಕೆ.ಟಿ. ಬಾಲಕೃಷ್ಣ

ಮೈಸೂರು,ಫೆ.12:- 14-02-2019 ರಂದು ನಗರದಾದ್ಯಂತ ಪ್ರೇಮಿಗಳ ದಿನಾಚರಣೆ (ವೆಲೆಂಟೈನ್ಸ್ ಡೇ) ಆಚರಿಸಲಾಗುವುದು.  ಈ ಆಚರಣೆ ಹಿನ್ನೆಲೆಯಲ್ಲಿ  ಹಲವು ಸಂಘಟನೆಗಳು ವಿಭಿನ್ನ ನಿಲುವುಗಳನ್ನು ಹೊಂದಿದ್ದು,  ನಗರದಲ್ಲಿ ಶಾಂತಿ, ಸುವ್ಯವಸ್ಥೆಯನ್ನು ಮತ್ತು ನೆಮ್ಮದಿ ಕಾಪಾಡುವ ದೃಷ್ಟಿಯಿಂದ ಸಾರ್ವಜನಿಕರಿಗೆ,  ವಿಶೇಷವಾಗಿ ಯುವಕ ಯುವತಿಯರ ಗಮನಕ್ಕೆ ಮೈಸೂರು ನಗರ ಪೊಲೀಸ್ ಆಯುಕ್ತ ಕೆ.ಟಿ. ಬಾಲಕೃಷ್ಣ ಸೂಚನೆ ನೀಡಿದ್ದಾರೆ.

ಪ್ರೀತಿಯ ಹೆಸರಿನಲ್ಲಿ ಅನೈತಿಕ ಚಟುವಟಿಕೆ ನಡೆಸಬಾರದು. ರೇವ್ ಪಾರ್ಟಿ, ನಂಗಾನಾಚ್ ಮುಂತಾದ ಅಶ್ಲೀಲ ಚಟುವಟಿಕೆಗಳಲ್ಲಿ ತೊಡಗಬಾರದು.  ಅಮಲು ತರುವ ಗಾಂಜಾ, ಅಫೀಮು, ಚರಸ್ ಹಾಗೂ ಇತರೆ ಯಾವುದೇ ಮಾದಕ ವಸ್ತುಗಳನ್ನು ಉಪಯೋಗಿಸಬಾರದು.  ಪ್ರೇಮಿಗಳ ದಿನಾಚರಣೆ ವಿರೋಧಿಸಿ ಯುವ ಪೀಳಿಗೆಯಲ್ಲಿ ಜಾಗೃತಿ ಮೂಡಿಸಲು ಪ್ರಚಾರ ಮಾಡುವ ನೆಪದಲ್ಲಿ ಯಾವುದೇ ವ್ಯಕ್ತಿಯ ವಿರುದ್ಧ ಪ್ರತಿಭಟನೆ/ದಾಳಿ/ ಹಲ್ಲೆ  ಮಾಡಬಾರದು. ಪ್ರೇಮಿಗಳ ಗ್ರೀಟಿಂಗ್ಸ್ ಹಾಗೂ ಪ್ರೇಮ ಸಂಕೇತವನ್ನು ಸುಡಬಾರದು/ವಿರೂಪಗೊಳಿಸಬಾರದು. ಪ್ರೇಮಿಗಳ ದಿನಾಚರಣೆ ಆಚರಿಸುವಾಗ ಸಾರ್ವಜನಿಕ ಸ್ಥಳದಲ್ಲಿ ಸಭ್ಯತೆಯ ಎಲ್ಲೆ ಮೀರಬಾರದು.   ಕಾನೂನು ಬಾಹಿರ ಚಟುವಟಿಕೆಗಳನ್ನು ನಡೆಸಬಾರದು.

ಈ ನಿಬಂಧನೆಗಳನ್ನು ಉಲ್ಲಂಘಿಸಿರುವುದು ಕಂಡು ಬಂದಲ್ಲಿ ಅಂತಹವರ ವಿರುದ್ಧ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದು, ನಿಬಂಧನೆಗಳನ್ನು ಉಲ್ಲಂಘಿಸಿರುವುದು ಸಾರ್ವಜನಿಕರ ಗಮನಕ್ಕೆ ಬಂದಲ್ಲಿ ಕೂಡಲೇ ಸಂಬಂಧಪಟ್ಟ ವ್ಯಾಪ್ತಿಯ  ಪೊಲೀಸ್ ಠಾಣೆಗೆ ಅಥವಾ  ಪೊಲೀಸ್ ಕಂಟ್ರೋಲ್ ರೂಂಗೆ ದೂರವಾಣಿ ಸಂಖ್ಯೆ.100, 2418139, 2418339 ಗೆ ಮಾಹಿತಿ ನೀಡುವಂತೆ ಕೋರಿದ್ದಾರೆ.

ನಗರದಲ್ಲಿ ಪ್ರೇಮಿಗಳ ದಿನಾಚರಣೆಯನ್ನು  ಶಾಂತ ರೀತಿಯಲ್ಲಿ ಆಚರಿಸಲು ಹಾಗೂ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ನಗರ ಪೊಲೀಸರಿಗೆ  ಸಾರ್ವಜನಿಕರು ಸಹಕರಿಸುವಂತೆ ಅವರು ತಿಳಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: