ಪ್ರಮುಖ ಸುದ್ದಿ

ಸಂಚಾರ ದಟ್ಟಣೆ ಸಮಸ್ಯೆಗೆ ಕಡಿವಾಣ ಹಾಕಲು ಹದಿನೈದು ವರ್ಷ ಹಳೆಯ ವಾಹನಗಳಿಗೆ ನಿಷೇಧ ಹೇರಲಾಗುವುದು : ಸಚಿವ ಡಿ.ಸಿ.ತಮ್ಮಣ್ಣ

ರಾಜ್ಯ(ಬೆಂಗಳೂರು)ಫೆ.12:- ನಗರ ವ್ಯಾಪ್ತಿಯಲ್ಲಿ ಸಂಚಾರ ದಟ್ಟಣೆ ಸಮಸ್ಯೆಗೆ ಕಡಿವಾಣ ಹಾಕಲು ಹದಿನೈದು ವರ್ಷ ಹಳೆಯ ವಾಹನಗಳಿಗೆ ನಿಷೇಧ ಹೇರಲಾಗುವುದು ಎಂದು ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ತಿಳಿಸಿದರು.

ನಗರದಲ್ಲಿ ಪುರಭವನದ ಸಭಾಂಗಣದಲ್ಲಿ ಸಾರಿಗೆ ಇಲಾಖೆ, ಸಂಚಾರ ಪೊಲೀಸ್ ಸಹಯೋಗದೊಂದಿಗೆ ಆಯೋಜಿಸಿದ್ದ, 30ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ-2019 ಸಮಾರೋಪ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಸಂಚಾರ ದಟ್ಟಣೆ ಸಮಸ್ಯೆ ಹೆಚ್ಚಾಗಿದೆ. ಈ ನಿಟ್ಟಿನಲ್ಲಿ ವಾಹನಗಳ ನಿಷೇಧ ಅಗತ್ಯತೆ ಇದೆ.ಅದು ಅಲ್ಲದೆ, ಬೆಂಗಳೂರು ವ್ಯಾಪ್ತಿಯಲ್ಲಿ ವಾಹನ ದಟ್ಟಣೆ ತಗ್ಗಿಸಲು ವಾರ್ಡ್ ಮಟ್ಟದಲ್ಲಿ ಜಾಗೃತಿ, ಅರಿವು ಕಾರ್ಯಕ್ರಮ ನಡೆಸಲಾಗುವುದು. ಬಳಿಕ, ಕಾರು ವಾಹನ ಸಂಚಾರ ತಗ್ಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು. ರಾಜ್ಯದಲ್ಲಿ ಒಟ್ಟು 7 ಕೋಟಿ ಜನಸಂಖ್ಯೆ ಇದೆ.ಇದರ ಅರ್ಧ ಭಾಗದಷ್ಟು ವಾಹನಗಳು ನೋಂದಣಿ ಆಗಿವೆ.ಇನ್ನೂ, ರಾಜಧಾನಿ ಬೆಂಗಳೂರಿನಲ್ಲಿಯೇ, ಒಂದು ಕೋಟಿ ಜನ ಸಂಖ್ಯೆ ಇದ್ದು, ಇಲ್ಲಿಯೂ, 1 ಕೋಟಿ ವಾಹನಗಳು ಸಂಚಾರ ಮಾಡುತ್ತಿವೆ. ಇದರ ನಡುವೆ ಹೊರ ರಾಜ್ಯಗಳಿಂದಲೂ ಲಕ್ಷಾಂತರ ವಾಹನ ಬರುತ್ತಿವೆ ಎಂದು ಹೇಳಿದರು.

ಇದಕ್ಕೂ ಮೊದಲು ಮಾತನಾಡಿದ ಶಾಸಕ ಉದಯ್ ಬಿ.ಗರುಡಾಚಾರ್, ನಗರ ವ್ಯಾಪ್ತಿಯಲ್ಲಿ ಸಂಚಾರ ದಟ್ಟಣೆ ಸಮಸ್ಯೆಗೆ ಕಡಿವಾಣ ಹಾಕಲು ಹದಿನೈದು ವರ್ಷ ಹಳೇಯ ವಾಹನ ನಿಷೇಧ ಮಾಡಬೇಕು ಎಂದು ಹೇಳಿದರು.

ಸಾರಿಗೆ ಮತ್ತು ರಸ್ತೆ ಸುರಕ್ಷತಾ ಆಯುಕ್ತ ವಿ.ಪಿ.ಇಕ್ಕೇರಿ ಮಾತನಾಡಿ, ವಾಹನಗಳ ಚಾಲಕರು ಮತ್ತು ದ್ವಿಚಕ್ರವಾಹನಗಳ ಸವಾರರು ಸುರಕ್ಷತಾ ನಿಯಮಗಳನ್ನು ಅನುಸರಿಸದಿರುವುದರಿಂದ ಅಪಘಾತಗಳು ಹೆಚ್ಚಾಗಿ ದೇಶದಲ್ಲಿ ಪ್ರತಿವರ್ಷ 1.50ಲಕ್ಷ ಕ್ಕೂ ಅಧಿಕ ಪ್ರಯಾಣಿಕರು ಸಾವನ್ನಪ್ಪುತ್ತಿದ್ದಾರೆ. ಆಕಸ್ಮಿಕ ಅಪಘಾತಗಳ ಗಂಭೀರತೆಯನ್ನು ಅರಿತ ಸರಕಾರವು ಸವಾರರು ಅನುಸರಿಸಬೇಕಾದ ರಸ್ತೆ ಸುರಕ್ಷ ತಾ ಕ್ರಮಗಳ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕಾರ್ಯದಲ್ಲಿ ನಿರತವಾಗಿದೆ ಎಂದು ತಿಳಿಸಿದರು.

ಸಮಾವೇಶದಲ್ಲಿ ಬಿಎಂಟಿಸಿ ಅಧ್ಯಕ್ಷ ಎನ್.ಎ.ಹ್ಯಾರಿಸ್, ಗೃಹ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್, ಸಿನಿಮಾ ನಟ ಪ್ರೇಮ್, ನಟಿ ರಾಗಿಣಿ ದ್ವಿವೇದಿ, ಬೆಂಗಳೂರು ಸಂಚಾರ ಪೊಲೀಸ್ ಆಯುಕ್ತ ಪಿ.ಹರಿಶೇಖರನ್ ಸೇರಿದಂತೆ ಪ್ರಮುಖರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: