ಮೈಸೂರು

ಮೈಸೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಿ.ಜೆ.ವಿಜಯ್ ಕುಮಾರ್ ಗೆ ಮೈಸೂರು ಲೋಕಸಭಾ ಟಿಕೇಟ್ ನೀಡುವಂತೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ್ ಒತ್ತಾಯ

ಮೈಸೂರು,ಫೆ.12:-  ಮೈಸೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಿ.ಜೆ.ವಿಜಯ್ ಕುಮಾರ್ ಗೆ ಮೈಸೂರು ಲೋಕಸಭಾ ಟಿಕೇಟ್ ನೀಡಬೇಕೆಂದು  ವರುಣ ಮತ್ತು ಟಿ.ನರಸೀಪುರ ಯೂತ್ ಬ್ಲಾಕ್ ಕಾಂಗ್ರೆಸ್ ಒತ್ತಾಯಿಸಿದೆ.

ತಿ.ನರಸೀಪುರ ಪಟ್ಟಣದ ಕಬಿನಿ ಅತಿಥಿ ಗೃಹದಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಟಿ.ನರಸೀಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ್ ಮಾತನಾಡಿ ಮೈಸೂರು ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಮೈಸೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಿ.ಜೆ.ವಿಜಯ್ ಕುಮಾರ್ ಅವರು ಸಾಕಷ್ಟು ಕೊಡುಗೆಗಳನ್ನು ನೀಡಿದ್ದಾರೆ. ಅಲ್ಲದೇ ಮೂಲತಃ ಅವರು ಪಿರಿಯಾಪಟ್ಟಣ ನಿವಾಸಿಯಾಗಿರುವುದರಿಂದ ಮತದಾರರು ಚಿರಪರಿಚಿತರಾಗಿದ್ದಾರೆ. ಹಾಗಾಗಿ ಪಕ್ಷಕ್ಕೆ ಅವರು ದುಡಿದ ಸೇವೆಯನ್ನು ಗುರುತಿಸಿ ಮೈಸೂರು ಕೊಡಗು ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿಯಾಗಿ ಕಣ್ಣಕ್ಕಿಳಿಸಬೇಕೆಂದು ಮನವಿ ಮಾಡಿದರು.

ಮೈಸೂರು ಜಿಲ್ಲಾ ಕಾಂಗ್ರೆಸ್ ಮಾಧ್ಯಮ ವಕ್ತಾರ ಸಂತೃಪ್ತಿ ಕುಮಾರ್ ಮಾತನಾಡಿ ಮೈಸೂರು ಕೊಡಗು ಲೋಕಸಭಾ ಕ್ಷೇತ್ರದಲ್ಲಿ 63% ಯುವ ಮತದಾರರು ಇರುವುದರಿಂದ ಅವರೆಲ್ಲರ ಒಮ್ಮತ ಅಭಿಪ್ರಾಯ ಮೈತ್ರಿ ಪಕ್ಷದ ಅಭ್ಯರ್ಥಿಯಾಗಿ ಬಿ.ಜೆ.ವಿಜಯ್ ಕುಮಾರ್ ಅವರನ್ನು ಆಯ್ಕೆ ಮಾಡಬೇಕೆಂದು ತಿಳಿಸಿದರು. ಇದಲ್ಲದೆ ಒಂದು ವೇಳೆ ಸಮನ್ವಯ ಸಮಿತಿ ಅಧ್ಯಕ್ಷರಾದ ಸಿದ್ದರಾಮಯ್ಯ ನವರು ಮೈಸೂರು ಕೊಡಗು ಕ್ಷೇತ್ರದಿಂದ  ಅಭ್ಯರ್ಥಿಯಾದರೆ ನಮಗೂ ಕೂಡ ತುಂಬಾ ಖುಷಿಯ ವಿಷಯ. ಒಂದು ವೇಳೆ ಅವರು ಚುನಾವಣೆಯಿಂದ ದೂರ ಉಳಿದರೆ ಸಿದ್ದರಾಮಯ್ಯ ನವರು ಗುರುತಿಸುವ ಅಭ್ಯರ್ಥಿಗಾಗಿ ಒಮ್ಮತದಿಂದ ನಾವೆಲ್ಲರೂ ದುಡಿಯುತ್ತೇವೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ತಾಪಂ ಸದಸ್ಯ ರಾಮಲಿಂಗಯ್ಯ, ಟಿ.ಎಸ್.ಲೋಕೇಶ್,ಶಿವಪ್ರಸಾದ್,ಕೆಪಿಸಿಸಿ ಸದಸ್ಯ ಧನಂಜಯ್,ಕೇತಹಳ್ಳಿ ಸಿದ್ದಶೆಟ್ಟಿ,ಎಪಿಎಂಸಿ ಸದಸ್ಯ ಸ್ವಾಮಿನಾಯಕ್,ಡಾ.ಪ್ರದೀಪ್ ಸೇರಿದಂತೆ ಮತ್ತಿತರರು ಹಾಜರಿದ್ದರು.(ಕೆ.ಎಸ್,ಎಸ್.ಎಚ್)

Leave a Reply

comments

Related Articles

error: