ಕರ್ನಾಟಕಮೈಸೂರು

‘ರಾಜ್ಯಕ್ಕೆ ಮೈಸೂರು ಮಹಾರಾಣಿಯರ ಕೊಡುಗೆ’ ಬಿಂಬಿಸುವ ಜಿ.ಪಂ. ದಸರಾ ಸ್ತಬ್ಧಚಿತ್ರ

ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ದಸರಾ ಉತ್ಸವಕ್ಕೆ ದಿನಗಣನೆ ಆರಂಭವಾಗಿದೆ. ದಸರಾ ಕೇವಲ ಹಬ್ಬವಲ್ಲ. ದೇವತೆಗಳಿಗೆ ಭಕ್ತಿಯಿಂದ ಪೂಜೆ ಸಲ್ಲಿಸುವುದು ನಮ್ಮ ಸಂಪ್ರದಾಯ. ಇದು ರಾಜ್ಯಾದ್ಯಂತ ನಡೆಯುವುದರಿಂದ ನಾಡಹಬ್ಬವೆಂದು ಪರಿಗಣಿಸಲ್ಪಟ್ಟಿದೆ. ದಸರಾ ಉತ್ಸವದ ಪ್ರಮುಖ ಆಕರ್ಷಣೆ ಜಂಬೂ ಸವಾರಿ. ಆನೆಯ ಮೇಲೆ ಅಂಬಾರಿಯನ್ನಿರಿಸಿ ಅದರಲ್ಲಿ ಚಾಮುಂಡೇಶ್ವರಿ ಮೂರ್ತಿಯನ್ನು ಇಡಲಾಗುತ್ತದೆ. ಈ ವೇಳೆ ರಾಜ್ಯದ ವಿವಿಧ ಜಿಲ್ಲೆಗಳಿಂದಾಗಮಿಸಿದ ಸ್ತಬ್ಧ ಚಿತ್ರಗಳು ಪಾಲ್ಗೊಳ್ಳುತ್ತವೆ. ಸ್ತಬ್ಧ ಚಿತ್ರಗಳು ಅಲ್ಲಿನ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತವೆ.

ಈ ಬಾರಿಯೂ ಸಹ ಸ್ತಬ್ಧ ಚಿತ್ರಗಳು ಪಾಲ್ಗೊಳ್ಳಲಿವೆ. ರಾಜ್ಯದ 30 ಜಿಲ್ಲೆಗಳ ಸ್ತಬ್ಧ ಚಿತ್ರಗಳು ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳುತ್ತವೆ. ರಾಜ್ಯದ ಎಲ್ಲಾ ಇಲಾಖೆಗಳು ತಮ್ಮ ತಮ್ಮ ಪರಿಕಲ್ಪನೆಯಡಿ ಸ್ತಬ್ಧ ಚಿತ್ರಗಳನ್ನು ನಿರ್ಮಿಸಬೇಕಾಗುತ್ತದೆ. ಚೆಸ್ಕಾಂ, ಪ್ರವಾಸೋದ್ಯಮ, ಕಲೆ ಮತ್ತು ವಾಸ್ತುಶಿಲ್ಪ, ಮಹಿಳೆ ಮತ್ತು ಮಕ್ಕಳ ಕಲ್ಯಾಣಾಭಿವೃದ್ಧಿ, ಶಿಕ್ಷಣ ವಿಷಯಗಳನ್ನು ಬಿಂಬಿಸುವ 37 ಸ್ತಬ್ಧ ಚಿತ್ರಗಳು ಜಂಬೂಸವಾರಿ ಜೊತೆ ಪ್ರದರ್ಶನಗೊಳ್ಳಲಿವೆ. ಮೈಸೂರು ಜಿಲ್ಲಾ ಪಂಚಾಯತ್ ಸಹ ಮೈಸೂರು ರಾಜ ಮನೆತನದ ಮಹಾರಾಣಿಯರ ಕೊಡುಗೆಗಳನ್ನು ಬಿಂಬಿಸುವ ಸ್ತಬ್ಧ ಚಿತ್ರಗಳನ್ನು ಪ್ರದರ್ಶಿಸಲಿದೆ.

ಮೈಸೂರು ರಾಣಿಯರು ಮೈಸೂರು ಮತ್ತು ರಾಜ್ಯಕ್ಕೆ ವಿವಿಧ ರೀತಿಯಲ್ಲಿ ನೀಡಿದ ಕೊಡುಗೆ, ಸಮಾಜಕ್ಕೆ ಒಡೆಯರ್ ಮನೆತನ ರಚನಾತ್ಮಕವಾಗಿ ನೀಡಿದ ಕೊಡುಗೆಗಳು ಸೇರಿದಂತೆ ಶಿವನ ಸಮುದ್ರ ವಿದ್ಯುತ್ ಉತ್ಪಾದನೆಯಲ್ಲಿ ರಾಣಿಯರ ಕೊಡುಗೆ ಇವುಗಳನ್ನು ಸ್ತಬ್ಧಚಿತ್ರ ಒಳಗೊಳ್ಳಲಿದೆ. ಮಹಾರಾಣಿ ಕಾಲೇಜ್, ವಾಣಿ ವಿಲಾಸ ನೀರು ಸರಬರಾಜು ಮಂಡಳಿಯ ಸ್ತಬ್ಧಚಿತ್ರಗಳೂ ಪಾಲ್ಗೊಳ್ಳಲಿವೆ ಎಂದು ಜಿಲ್ಲಾ ಪಂಚಾಯತ್ ಯೋಜನಾಧಿಕಾರಿ ಪ್ರಭುಸ್ವಾಮಿ ‘ಸಿಟಿಟುಡೆ’ಗೆ ತಿಳಿಸಿದರು.

ನಾಲ್ವಡಿ ಕೃಷ್ಣರಾಜ ಒಡೆಯರು ಕೆಆರ್‍ಎಸ್‍ ಡ್ಯಾಂ ಕಟ್ಟಲು ನಿರ್ಧರಿಸಿದಾಗ ಆರ್ಥಿಕ ಮುಗ್ಗಟ್ಟನ್ನು ಎದುರಿಸಬೇಕಾಗಿ ಬಂತು. ಆಗ ರಾಣಿ ಪ್ರತಾಪ ಕುಮಾರಿ ತಮ್ಮ ರಾಜಮನೆತನದ ಒಡವೆಗಳನ್ನು ಅಡವಿರಿಸಿ ಡ್ಯಾಂ ನಿರ್ಮಾ‍ಣಕ್ಕೆ ಸಹಕರಿಸಿದ್ದರಂತೆ. ಇದನ್ನು ನೆನಪಿಸಲೋಸುಗ ಸ್ತಬ್ಧಚಿತ್ರದಲ್ಲಿ ರಾಣಿಯರ ಕೊಡುಗೆಗಳನ್ನು ಅಳವಡಿಸಲಾಗಿದೆ ಎಂದರು.

ದೊಡ್ಡಕೆರೆ ಮೈದಾನದ ದಸರಾ ವಸ್ತು ಪ್ರದರ್ಶನದಲ್ಲಿ ಮುಂದುವರಿದ ಜೀವನಶೈಲಿ ಸ್ತಬ್ಧಚಿತ್ರ ಮಳಿಗೆ ತೆರೆದುಕೊಳ್ಳಲಿದೆ. ಇದು ಗ್ರಾಮೀಣ ಭಾಗದ ಜನಜೀವನವನ್ನು ನೆನಪಿಸಲಿದ್ದು, ಸ್ತಬ್ಧಚಿತ್ರ ಮಳಿಗೆ ನಿರ್ಮಾಣಕ್ಕೆ 14 ಲಕ್ಷ ರೂ. ತಗುಲಲಿದೆ. ಮಳಿಗೆಯು ದಸರಾ ಆರಂಭಕ್ಕೆ ಮುನ್ನ ಅಕ್ಟೋಬರ್ 1 ರ ಒಳಗೆ ಸಂಪೂರ್ಣವಾಗಲಿದೆ.

Leave a Reply

comments

Related Articles

error: