ಪ್ರಮುಖ ಸುದ್ದಿಮೈಸೂರು

ದುರಂತ ಸಂಭವಿಸದಂತೆ ಎಚ್ಚರ ವಹಿಸಿ : ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ದೀಪಕ್ ಅಭಿಮತ

ದುರಂತಗಳು ಸಂಭವಿಸಿದ ಮೇಲೆ ಸರ್ಕಾರ ಮತ್ತು ಮಾಧ್ಯಮಗಳು ಎಚ್ಚೆತ್ತುಕೊಳ್ಳುವುದಕ್ಕಿಂತ ಮುಂಜಾಗೃತೆ ವಹಿಸುವುದು ಒಳಿತೆಂದು ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ದೀಪಕ್ ಅಭಿಪ್ರಾಯಪಟ್ಟರು.

ಬುಧವಾರ, ಪತ್ರಕರ್ತರ ಭವನದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಪತ್ರಕರ್ತರಿಗಾಗಿ ಆಯೋಜಿಸಿದ್ದ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಗುರುತರ ಜವಾಬ್ದಾರಿ ಮಾಧ್ಯಮಗಳ ಮೇಲಿದ್ದು, ಪತ್ರಕರ್ತರು ಮೊದಲು ಜಾಗೃತರಾಗಬೇಕು. ಜನರಿಗೆ ಭಯ ಬಿತ್ತರಿಸುವ ಬದಲು ಆತ್ಮವಿಶ್ವಾಸ ಮೂಡಿಸಿ. ನಿಖರ ಸುದ್ದಿಗಳನ್ನು ಪರಿಣಾಮಕಾರಿಯಾಗಿ ನೀಡುವ ಮೂಲಕ ಭಯ ಭೀತಿ ತೊಲಗಿಸಬೇಕು ಈ ನಿಟ್ಟಿನಲ್ಲಿ ಪತ್ರಕರ್ತರು ಹೆಚ್ಚು ಸಂವೇದನೆಯಿಂದ ಜಾಗೃತರಾಗಬೇಕು ಎಂದು ಆಶಿಸಿದರು.

ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ. ಚಿದಂಬರ ಎಸ್. ಅವರು ಮಾತನಾಡಿ, ಮೈಸೂರು ಸ್ಚಚ್ಛ ನಗರದಲ್ಲಿ ನಂ.1 ಅಷ್ಟೇ ಅಲ್ಲ, ಸಾಂಕ್ರಾಮಿಕ ರೋಗಗಳಲ್ಲಿಯೂ ನಂ.1 ಎಂದು ತಿಳಿಸಿದರು. ಡೆಂಗ್ಯೂ, ಮಲೇರಿಯಾ, ಚಿಕನ್‍ಗೂನ್ಯ, ನಿಯಂತ್ರಣಕ್ಕೆ ಆರೋಗ್ಯ ಇಲಾಖೆಯಿಂದ ಹೆಚ್ಚಿನ ಒತ್ತು ನೀಡಲಾಗಿದೆ. ಸಾರ್ವಜನಿಕರಿಗೆ ಮಾರಣಾಂತಿಕವಲ್ಲದ ಸಾಂಕ್ರಾಮಿಕ ರೋಗಗಳ ಬಗ್ಗೆ ಹೆಚ್ಚು ಜಾಗೃತರಾಗಬೇಕು. ಮಲೇರಿಯಾದಿಂದ ಸಾವು ಸಂಭವಿಸುವುದಿಲ್ಲ, ಡೆಂಗ್ಯೂಗೂ ಇನ್ನೂ ನಿಖರವಾದ ಮದ್ದಿಲ್ಲ. ಕೇವಲ ರೋಗ ಪ್ರತಿರೋಧಕಗಳನ್ನು ನೀಡಲಾಗುವುದು ಎಂದು ತಿಳಿಸಿದರು.

2015ರ ಪೂರ್ವದಲ್ಲಿ ರೋಗ/ರೋಗಿಯ ದಾಖಲೆಗಳನ್ನು ಇಲಾಖೆಯಲ್ಲಿ ದಾಖಲಿಸುತ್ತಿರಲಿಲ್ಲ. ಆದರೀಗ ರೋಗ ಹಾಗೂ ರೋಗಿಯ ಸಂಪೂರ್ಣ ಮಾಹಿತಿಯನ್ನು ದಾಖಲಿಸಿ 15 ದಿನಗಳಿಗೊಮ್ಮೆ ವರದಿ ಬಿಡುಗಡೆಗೊಳಿಸಲಾಗುತ್ತಿದೆ. 2016ರಲ್ಲಿ ಡೆಂಗ್ಯೂ, ಚಿಕನ್‍ಗೂನ್ಯದಿಂದ ಜೀವಹಾನಿಯಾಗಿಲ್ಲ. ಕಳೆದ ವರ್ಷ ಮೈಸೂರು ಜಿಲ್ಲೆಯಲ್ಲಿ ಮಲೇರಿಯಾ ಪ್ರಕರಣ ದಾಖಲಾಗಿಲ್ಲವಾದರೂ ನೆರೆ ಜಿಲ್ಲೆಗಳಾದ ಉತ್ತರಕನ್ನಡ, ಉಡುಪಿ, ಮಂಗಳೂರು ಕರಾವಳಿ ಭಾಗಗಳಲ್ಲಿ ಇದರ ಹಾವಳಿಯಿದ್ದು, ಹರಡುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಕ್ರೂರಪ್ರಾಣಿ ದಾಳಿಗಿಂತಲೂ ಸೊಳ್ಳೆ ಕಡಿತದಿಂದಲೇ ಹೆಚ್ಚಿನ ಸಾವುಗಳು ಸಂಭವಿಸಿದೆ. ಆದ್ದರಿಂದ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಚವಾಗಿಟ್ಟುಕೊಂಡು ಸೊಳ್ಳೆಗಳ ಸಂತತಿ ನಿಯಂತ್ರಿಸುವ ಮೂಲಕ ಸಾಂಕ್ರಾಮಿಕ ರೋಗಗಳನ್ನು ತಡೆಯುಬೇಕು. 2020ರೊಳಗೆ ರಾಜ್ಯವೂ ಮಲೇರಿಯಾ ಮುಕ್ತವಾಗಬೇಕು. ಮಲೇರಿಯಾವಷ್ಟೇ ಅಲ್ಲ, ಡೆಂಗ್ಯೂ, ಚಿಕನ್‍ಗೂನ್ಯವು ಸಂಪೂರ್ಣ ನಿರ್ಮೂಲನೆಯಾಗಬೇಕಿದ್ದು ಅನಗತ್ಯ ನೀರು ಸಂಗ್ರಹವಾಗದಂತೆ ಎಚ್ಚರವಹಿಸಿ, ಶುಚ್ಚಿತ್ವ ಕಾಪಾಡಿ ಎಂದು ಸಲಹೆ ನೀಡಿದರು.

ಕಾರ್ಯಾಗಾರದಲ್ಲಿ ಮಲೇರಿಯಾ, ಆನೆಕಾಲು ರೋಗ, ಮೆದುಳುಜ್ವರ, ಡೆಂಗ್ಯೂ ಹಾಗೂ ಚಿಕನ್‍ಗೂನ್ಯದ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ಜಾಗೃತಿ ಮೂಡಿಸಿ ಈಗಾಗಲೇ ರೋಗ ನಿಯಂತ್ರಣಕ್ಕೆ ಇಲಾಖೆಯಿಂದ ಕೈಗೊಂಡಿರುವ ಮುಂಜಾಗೃತ ಕ್ರಮದ ಬಗ್ಗೆ ತಿಳಿಸಿದರು.

ಜಿಲ್ಲಾ ಪ್ರಕರ್ತರ ಸಂಘದ ಕಾರ್ಯದರ್ಶಿ ಲೋಕೇಶ್ ಬಾಬು, ಭೀಮಣ್ಣ ಹಾಗೂ ಇತರರು ಉಪಸ್ಥಿತರಿದ್ದರು.

Leave a Reply

comments

Related Articles

error: