ಮೈಸೂರು

ಅತಿಥಿ ಉಪನ್ಯಾಸಕರ ವೇತನ ಹೆಚ್ಚಿಸಲು ಒತ್ತಾಯ : ಶಾಂತಿಯುತ ಮೆರವಣಿಗೆ

ಅತಿಥಿ ಉಪನ್ಯಾಸಕರಿಗೆ ವೇತನ ಹೆಚ್ಚಳ, ಸೇವಾ ಭದ್ರತೆ ನೀಡುವಂತೆ ಹಲವಾರು ವರ್ಷಗಳಿಂದ ಹೋರಾಟ ನಡೆಸುವ ಮೂಲಕ ಸರ್ಕಾರದ ಗಮನ ಸೆಳೆದಿದ್ದರೂ ಇದುವರೆಗೂ ಯಾವುದೇ ಸಕಾರಾತ್ಮಕ ಧೋರಣೆ ತಾಳದೇ ನಿರ್ಲಕ್ಷ್ಯವಹಿಸುತ್ತಿದೆ ಎಂದು ಆರೋಪಿಸಿ ಅತಿಥಿ ಉಪನ್ಯಾಸಕರ ಹಿತರಕ್ಷಣಾ ಸಂಘದ ವತಿಯಿಂದ ಶಾಂತಿಯುತ ಮೆರವಣಿಗೆ ನಡೆಯಿತು.

ಮೈಸೂರು, ಮಂಡ್ಯ, ಚಾಮರಾಜನಗರ ಜಿಲ್ಲೆಗಳ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರು ಮೈಸೂರಿನ ಕೋಟೆ ಆಂಜನೇಯ ದೇವಸ್ಥಾನದಿಂದ ಕಾಲೇಜು ಶಿಕ್ಷಣ ಇಲಾಖೆಯ ಪ್ರಾದೇಶಿಕ ಜಂಟಿ ನಿರ್ದೇಶಕರ ಕಚೇರಿಯವರೆಗೆ ಶಾಂತಿಯುತ ಮೆರವಣಿಗೆಯನ್ನು ಮಾಡಿ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಈ ಸಂದರ್ಭ ಮಾತನಾಡಿದ  ಅತಿಥಿ ಉಪನ್ಯಾಸಕರು ಯುಜಿಸಿ 2010ರ ನಿಯಮಾವಳಿಗಳನ್ನು ಉಲ್ಲಂಘಿಸಿ, 2009ರ ನಿಯಮಾವಳಿಯಂತೆ ಪ್ರಕಟಿಸುವ ಸಹಾಯಕ ಪ್ರಾಧ್ಯಾಪಕರು ಅಂತಿಮ ನೇಮಕಾತಿ ಪಟ್ಟಿಯನ್ನು ಪುನರ್ ಪರಿಶೀಲಿಸಬೇಕು. 2016-17ನೇ ಶೈಕ್ಷಣಿಕ ಸಾಲಿನ ಸೆಪ್ಟೆಂಬರ್ ತಿಂಗಳಿಂದ ಡಿಸೆಂಬರ್ ತಿಂಗಳವರೆಗಿನ ಗೌರವಧನವನ್ನು ಕೂಡಲೇ ಸಂಪೂರ್ಣ ಬಿಡುಗಡೆ ಮಾಡಬೇಕು. ಪ್ರಸ್ತುತ ನೀಡುತ್ತಿರುವ ಗೌರವಧನ ಪ್ರಚಲಿತ ದಿನದ ಬೆಲೆ ಏರಿಕೆಯ ಸಂದರ್ಭದಲ್ಲಿ ಅತ್ಯಂತ ಕಡಿಮೆ ಇದ್ದು, ಯುಜಿಸಿ ನಿಯಮಾವಳಿಯನ್ವಯ ಗೌರವಧನ ಹೆಚ್ಚಳ ಮಾಡಬೇಕು. ಉನ್ನತ ಶಿಕ್ಷಣ ಇಲಾಖೆಯ ಅತಿಥಿ ಉಪನ್ಯಾಸಕ ವೇತನ ಹೆಚ್ಚಳ ಕಡತ ಸಂಖ್ಯೆಯ ಪ್ರಕಾರ ಆರ್ಥಿಕ ಇಲಾಖೆಗೆ ಶಿಫಾರಸು ಮಾಡಿರುವ ವೇತನವನ್ನು 2016-17ನೇ ಸಾಲಿಗೆ ಅನ್ವಯವಾಗುವಂತೆ ಮಾಡಿ 12 ತಿಂಗಳು ವೇತನ ನೀಡಬೇಕು ಎಂದು ಒತ್ತಾಯಿಸಿದರು.

ಜಾಥಾದಲ್ಲಿ ರಾಜ್ಯಾಧ್ಯಕ್ಷ ಡಾ.ಹೆಚ್.ಸೋಮಶೇಖರ್, ಸಂಘಟನಾ ಕಾರ್ಯದರ್ಶಿ ರಾಜೇಶ್ ಕುಮಾರ್ ಕೆ. ಅಧ್ಯಕ್ಷ ಡಾ.ಕೆ.ಪ್ರದೀಪ್ ಕುಮಾರ್, ಉಪಾಧ್ಯಕ್ಷ ಹನುಮಂತೇಶ್ ಮತ್ತಿತರರು ಪಾಲ್ಗೊಂಡಿದ್ದರು.

Leave a Reply

comments

Related Articles

error: