ಮೈಸೂರು

ಸಮಾಜದ ಏಳಿಗೆಗೆ ಮಹಾನ್ ಪುರುಷರ ಜಯಂತಿ ಆಚರಣೆ ಅವಶ್ಯಕ : ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್

ಮೈಸೂರು, ಫೆ.13:-  ಸಮಾಜದ ಏಳಿಗೆಗೆ ಮಹಾನ್ ಪುರುಷರು ಕೊಡುಗೆ ನೀಡಿದ್ದು, ಅವರುಗಳ ಜಯಂತಿ ಆಚರಣೆ ತುಂಬಾ ಅವಶ್ಯಕ. ಆದರ್ಶ ವ್ಯಕ್ತಿಗಳ ಇತಿಹಾಸಗಳನ್ನು ಜನರಿಗೆ ತಿಳಿಸುವ ಕರ್ತವ್ಯವನ್ನು ಮಾಡಲು ನಾವು ಸದಾ ಸಿದ್ದರಿದ್ದೇವೆ ಎಂದು ಜಿಲ್ಲಾಧಿಕಾರಿ ಅಭಿರಾಮ್.ಜಿ ಶಂಕರ್ ಹೇಳಿದರು.

ನಿನ್ನೆ ಮೈಸೂರಿನ ಕರ್ನಾಟಕ ಕಲಾಮಂದಿರದಲ್ಲಿ ನಡೆದ ಶ್ರೀ ಸವಿತಾ ಮಹರ್ಷಿ ಜಯಂತಿ ಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸರ್ಕಾರವು ಈ ವರ್ಷದಿಂದ ಶ್ರೀ ಸವಿತಾ ಮಹರ್ಷಿ ಜಯಂತಿಯನ್ನು ರಾಜ್ಯದ ಎಲ್ಲಾ ಕಡೆ ಆಚರಿಸಲು ತೀರ್ಮಾನಿಸಿದೆ. ಹಾಗಾಗಿ ಇಂತಹ ಪುಣ್ಯ ಪುರುಷರ ಜಯಂತಿಗಳಿಗೆ ನಾವು ಸದಾ ಬೆನ್ನೆಲುಬಾಗಿ ನಿಲ್ಲುತ್ತೇವೆ. ಇವರ ವಿಚಾರಗಳನ್ನು ತಿಳಿದು ಶೈಕ್ಷಣಿಕವಾಗಿ ಮತ್ತು ಆರ್ಥಿಕವಾಗಿ ಸವಿತಾ ಸಮಾಜವು ಮುಂದೆ ಬರಬೇಕು ಎಂದು ಹೇಳಿದರು.

ಜಯಂತಿಯನ್ನು ಕುರಿತು ಉಪನ್ಯಾಸ ನಡೆಸಿಕೊಟ್ಟ ಮೈಸೂರಿನ ಉರಿಲಿಂಗ ಪೆದ್ದಿಮಠದ ಪರಮಪೂಜ್ಯ ಜ್ಞಾನಪ್ರಕಾಶ ಸ್ವಾಮಿಗಳು ಮಹಾತ್ಮರ ಜಯಂತಿಗಳ ಆಚರಣೆ ಮಾನವೀಯ ಮೌಲ್ಯ ತಿಳಿಸುತ್ತದೆ. ಅವುಗಳನ್ನು ಆಚರಿಸಬೇಕು. ಜಯಂತಿಗಳನ್ನು ಒಂದು ಜಾತಿಗೆ ಸೀಮಿತಗೊಳಿಸಬಾರದು. ಸರ್ಕಾರವು ಈ ರೀತಿಯ ಮಹಾತ್ಮರ ಜಯಂತಿಗಳಿಂದ ಜನರಿಗೆ ಅವರ ಆದರ್ಶಗಳನ್ನು ತರೆದಿಡುವ ಕಾರ್ಯ ನಡೆಸುತ್ತಿದೆ. ಇದು ಉತ್ತಮವಾದ ಬೆಳವಣಿಗೆ ಎಂದರು.

ಶ್ರೀ ಸವಿತಾ ಮಹರ್ಷಿಯು ಶಿವನ ಮೂರನೇ ಕಣ್ಣಿಂದ ಜನಿಸಿದ ಮಹಾ ಪುರುಷ ಎಂದು ಪುರಾಣವು ಹೇಳುತ್ತದೆ, ಅಂತಹ ಶ್ರೇಷ್ಠ ಸಮಾಜ ಸವಿತ ಸಮಾಜವಾಗಿದೆ. ಸವಿತಾ ಮಹರ್ಷಿಯು ಸೂರ್ಯನ ದಿಕ್ಕನ್ನೇ ಬದಲಿಸಿದವರು ಹಾಗಾಗಿಯೇ ರಥಸಪ್ತಮಿಯ ದಿವಸ ಅವರ ಜಯಂತಿ ಆಚರಣೆಯಾಗುತ್ತಿರುವುದು. ಇವರು ಸಾಮವೇದವನ್ನು ರಚಿಸಿ ಆಯುರ್ವೇದಿಕ್ ಕಂಡುಹಿಡಿದಂತಹ ಮೂಲ ಪುರುಷರಾಗಿರುವುದು ಸವಿತ ಸಮಾಜದ ಸಾಧನೆಯನ್ನು ತೋರುತ್ತದೆ ಎಂದರು.

ಇಂತಹ ಶ್ರೇಷ್ಠ ಸಮಾಜವು ಕ್ಷೌರಿಕ, ನಾದ ಸ್ವರ ಮುಂತಾದ ತಮ್ಮ ಮೂಲ ಕಸುಬುಗಳಲ್ಲಿ ನಿಸ್ವಾರ್ಥ ಸೇವೆಯನ್ನು ಮಾಡುತ್ತಾ ಬಂದಿದೆ. ಹಾಗೆಯೇ ಶೈಕ್ಷಣಿಕವಾಗಿಯೂ ತಮ್ಮ ಆಸಕ್ತಿ ತೋರಬೇಕು ವಿದ್ಯೆ ಎಂಬುದು ಹುಲಿ ಇದ್ದ ಹಾಗೆ. ನೀವೆಲ್ಲಾ ಹುಲಿಗಳಾಗಬೇಕು ಎಂದು ಅವರು ಹೇಳಿದರು.

ಸಮಾರಂಭದಲ್ಲಿ ಸವಿತ ಸಮಾಜದ ಜಿಲ್ಲಾಧ್ಯಕ್ಷ ಎಲ್.ಆರ್ ನಾಗೇಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಸ್.ಚೆನ್ನಪ್ಪ, ಭರತ್ ಸ್ವಾಮಿಗಳು ಮತ್ತು ಸವಿತ ಸಮಾಜದ ಜಿಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು. (ಎಸ್.ಎಚ್)

Leave a Reply

comments

Related Articles

error: