ಪ್ರಮುಖ ಸುದ್ದಿಮೈಸೂರು

ಫೆ.16ರಂದು ಪ್ರಾಥಮಿಕ ಶಾಲಾ ಶಿಕ್ಷಕರಿಂದ ಬೃಹತ್ ಪ್ರತಿಭಟನೆ

ಮೈಸೂರು, ಫೆ.13 : ನಗರದಲ್ಲೇ ಝಾಂಡಾ ಹೂಡಿರುವ ಕೆಲ ಶಿಕ್ಷಕರನ್ನು ವರ್ಗಾಯಿಸಿ, ಗ್ರಾಮಾಂತರ ಶಿಕ್ಷಕರಿಗೆ ಅನುಕೂಲ ಮಾಡಿಕೊಡಬೇಕು, ವರ್ಗಾವಣೆ ಪ್ರಕ್ರಿಯೆ ಶೀಘ್ರ ಆರಂಭವಾಗಬೇಕು, ಬಡ್ತಿ ಮೊದಲಾದ ವಿಷಯಕ್ಕೆ ಸಂಬಂಧಿಸಿದ ಸಮಸ್ಯೆ ಬಗೆಹರಿಸಬೇಕೆಂದು ಆಗ್ರಹಿಸಿ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಶಾಖೆ ಫೆ. 16 ರಂದು ನಗರದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ಆಯೋಜಿಸಿದೆ ಎಂದು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸೋಮೇಗೌಡ ತಿಳಿಸಿದರು.

ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪ್ರತಿ ವರ್ಷ ಮಾರ್ಚ್, ಏಪ್ರಿಲ್‌ನಲ್ಲಿ ನಡೆಯಬೇಕಾದ ವರ್ಗಾವಣೆ ಪ್ರಕ್ರಿಯೆ ತಟಸ್ಥವಾಗಿದ್ದು, ಇದರಿಂದಾಗಿ ವರ್ಗಾವಣೆ ಬಯಸಿರುವ ಶಿಕ್ಷಕರಿಗೆ ಅಪಾರ ಸಮಸ್ಯೆಯುಂಟಾಗಿದೆ. ಇನ್ನು, ನಗರದಲ್ಲಿಯೇ ಹಲವಾರು ವರ್ಷಗಳಿಂದ ಬಹುತೇಕ ಶಿಕ್ಷಕರು ತಳವೂರಿದ್ದು, ಇವರ ವರ್ಗಾವಣೆ ಕೈಗೊಳ್ಳದ ಕಾರಣ ಗ್ರಾಮಾಂತರ ಶಿಕ್ಷಕರು ಸಮಸ್ಯೆ ಎದುರಿಸುತ್ತಿದ್ದಾರೆ.

ಇನ್ನು, ಸೇವಾ ನಿರತ ಪದವೀಧರ ಶಿಕ್ಷಕರಿಗೆ ಬಡ್ತಿ ಅಗತ್ಯವಾಗಿದ್ದರೂ ಈಗಾಗಲೇ ಎರಡು ಬಾರಿ ನೇರ ನೇಮಕಾತಿ ಮೂಲಕ ಪದವೀಧರ ಶಿಕ್ಷಕರ ನೇಮಕಾತಿ ಪೂರ್ಣಗೊಂಡಿದೆ. ಈಗ ಮತ್ತೆ ಹತ್ತು ಸಾವಿರ ಪದವೀಧರ ಶಿಕ್ಷಕರಿಗೆ ನೇಮಕಾತಿ ಅಧಿಸೂಚನೆ ಹೊರಡಿಸಿರುವುದರಿಂದಾಗಿ ಸೇವಾನಿರತ ಶಿಕ್ಷಕರಿಗೆ ಅನ್ಯಾಯವಾಗುತ್ತಿದೆ. ಆದ್ದರಿಂದ ಕನಿಷ್ಠ ಷರತ್ತು ಬದ್ಧ ಬಡ್ತಿ ನೀಡಬೇಕೆಂದು ರ‍್ಯಾಲಿ ವೇಳೆ ಆಗ್ರಹಿಸಲಾಗುವುದೆಂದರು

ಜೊತೆಗೆ, ಸೇವಾ ಹಿರಿತನದ ಬಡ್ತಿ ಹೊಂದಿದವರಿಗೆ ಆಗುತ್ತಿರುವ ಅನ್ಯಾಯ ಸರಿಪಡಿಸಬೇಕು. ಶಿಕ್ಷಕರನ್ನು ಇನ್ನಿತರ ಕೆಲಸಗಳಿಗೆ ಬಳಸಿಕೊಳ್ಳುವುದು ತಪ್ಪಬೇಕು ಎಂಬಿವೇ ಮೊದಲಾದ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿ ಕಚೇರಿ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗುವುದೆಂದರು.

ಪದಾಧಿಕಾರಿಗಳಾದ ಬಸವರಾಜು, ಮಹೇಶ್, ವೈ.ಕೆ. ನಾಗರಾಜು, ಮಮತಾ, ಬಬಿತಾ ರಾಣಿ, ಕೌಶಲ್ಯ ಹಾಜರಿದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: