ಕರ್ನಾಟಕ

ಮುಖ್ಯಮಂತ್ರಿ ಕಾರ್ಯಕ್ರಮ: ಜಿಲ್ಲಾಡಳಿತದಿಂದ ಪೂರ್ವ ತಯಾರಿ

ಹಾಸನ (ಫೆ.13): ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಫೆ.15 ಮತ್ತು 16 ರಂದು ಜಿಲ್ಲಾ ಪ್ರವಾಸ ಕೈಗೊಳ್ಳುವ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ಪೂರ್ವಭಾವಿ ಸಭೆ ನಡೆಸಿ ಅಧಿಕಾರಿಗಳಿಗೆ ವಿವಿಧ ನಿರ್ದೇಶನಗಳನ್ನು ನೀಡಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ, ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ನಡೆಸಿದ ಅವರು ಫೆ.15 ಮತ್ತು ಫೆ.16 ರಂದು ನಡೆಯುವ ಮುಖ್ಯಮಂತ್ರಿಯವರು ಕಾರ್ಯಕ್ರಮದಲ್ಲಿ ಯಾವುದೇ ಶಿಷ್ಟಾಚಾರ ಉಲ್ಲಂಘನೆಯಾಗದಂತೆ ಎಚ್ಚರ ವಹಿಸಿ ಎಲ್ಲಾ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಿದರು.

ಫೆ.15 ರಂದು ಮಧ್ಯಾಹ್ನ 2.30ಕ್ಕೆ ಸಾತೇನಹಳ್ಳಿಗೆ ಹಾಗೂ 3.30ಕ್ಕೆ ದುದ್ದದಲ್ಲಿ ಮುಖ್ಯಮಂತ್ರಿಯವರು ವಿವಿದ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆ ನೆರವೇರಿಸುವರು ಹಾಗೇ ಅಂದು 5 ಗಂಟೆಗೆ ಜಿಲ್ಲಾ ಆಸ್ಪತ್ರೆಯಲ್ಲಿ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಫೆ.15 ರಂದು ಸಂಜೆ 5.30 ಕ್ಕೆ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯುವ ವೇದಿಕೆ ಕಾರ್ಯಕ್ರಮದಲ್ಲಿ ಸಾಲಮನ್ನಾ ಫಲಾನುಭವಿಗಳಿಗೆ ತೀರುವಳಿ ಪತ್ರ ವಿತರಣಾ ಸಮಾರಂಭ ಏರ್ಪಡಿಸಲಾಗಿದೆ. ಇದಕ್ಕೆ ಸಹಕಾರ ಇಲಾಖೆ ಮತ್ತು ಲೀಡ್ ಬ್ಯಾಂಕ್ ಅಗತ್ಯ ಸಿದ್ದತೆ ಮಾಡಿಕೊಂಡು ಎಲ್ಲಾ ತಾಲ್ಲೂಕಿನಿಂದಲೂ ರೈತರನ್ನು ಕರೆತರಬೇಕು ಎಂದರು.

ಫೆ.16 ರಂದು ಬೆಳಗ್ಗೆ 9 ಗಂಟೆಗೆ ಜಿಲ್ಲಾ ಕ್ರೀಡಾಂಗಣದಲ್ಲಿ ಮುಖ್ಯ ಮಂತ್ರಿಯವರು ಆರೋಗ್ಯ ಮೇಳ ಉದ್ಘಾಟಿಸಲಿದ್ದಾರೆ. ರಾಜ್ಯದ ವಿವಿಧ ಕಡೆಗಳಿಂದ ತಜ್ಞ ವೈದ್ಯರು ಆಗಮಿಸುತ್ತಿರುವುದರಿಂದ ಹೆಚ್ಚಿನ ಜನರಿಗೆ ಇದರ ಲಾಭ ದೊರೆಯಬೇಕು ಹಾಗಾಗಿ ವ್ಯಾಪಕ ಪ್ರಚಾರ ಕೈಗೊಳ್ಳುವಂತೆ ಜಿಲ್ಲಾಧಿಕಾರಿಯವರು ಸೂಚನೆ ನೀಡಿದರು.

ಜಿಲ್ಲಾ ಪಂಚಾಯಿತಿ ಆರೋಗ್ಯ ಮೇಳದ ಕರ್ತವ್ಯವು ಮುಖ್ಯ ಕಾರ್ಯ ನಿರ್ವಾಹಕಾಧಿಕಾರಿ ಪುಟ್ಟಸ್ವಾಮಿ ಅವರು ಮಾತನಾಡಿ 400 ಕ್ಕೂ ಅಧಿಕ ವೈದ್ಯರು ಆಗಮಿಸುತ್ತಿದ್ದಾರೆ ಪ್ರತಿ ಗ್ರಾಮ ಪಂಚಾಯಿತಿಯಿಂದ 1.ಕೆ.ಎಸ್.ಆರ್.ಟಿ.ಸಿ ಬಸ್ ವ್ಯವಸ್ಥೆ ಮಾಡಲಾಗಿದ್ದು. ಪಿ.ಡಿ.ಓಗಳು ಮತ್ತು ಆಶಾಕಾರ್ಯಕರ್ತೆಯರು ರೋಗಿಗಳನ್ನು ಕರೆತರಲಿದ್ದಾರೆ ಎಂದರು.

ಜಿಲ್ಲಾ ಶಸ್ತ್ರ ಚಿಕಿತ್ಸಕರಾದ ಡಾ|| ಶಂಕರ್ ಅವರು ಮಾತನಾಡಿ ಆರೋಗ್ಯ ಮೇಳಕ್ಕೆ ಅಗತ್ಯ ಸಿದ್ದತೆ ಮಾಡಿಕೊಳ್ಳಲಾಗಿದೆ ವೈದ್ಯರು ಹಾಗೂ ಔಷದೋಪಚಾರಗಳಿಗೆ ಯಾವುದೇ ಕೊರತೆ ಇಲ್ಲ ಖಾಸಗಿ ವೈದ್ಯಕೀಯ ಶಿಕ್ಷಣ ಸಂಸ್ಥೆಗಳು ಹಾಗೂ ಔಷಧ ವಿತರಕರು ಕೂಡ ಆರೋಗ್ಯ ಮೇಳಕ್ಕೆ ನೆರವು ನೀಡುತ್ತಿದ್ದಾರೆ ಎಂದರು.

ಫೆ.17 ರಂದು ಕೃಷಿ ಮೇಳ ಹಾಗೂ ಫೆ.18 ರಂದು ಮಹಿಳಾ ಮೇಳ ಫೆ.23 ಮತ್ತು 24 ರಂದು ಉದ್ಯೋಗ ಮೇಳಗಳು ನಡೆಯಲಿದ್ದು ಅದಕ್ಕೆ ಅಗತ್ಯ ಸಿದ್ದತೆಗಳನ್ನು ಆಯಾಯ ಇಲಾಖೆಗಳು ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹೇಳಿದರು.

ಈ ಮೇಳಕ್ಕೆ ಅಗತ್ಯವಿರುವ ಮಳಿಗೆಗಳನ್ನು ಲೋಕೋಪಯೋಗಿ ಇಲಾಖೆಯ ಮೂಲಕ ನಿರ್ಮಿಸಿಕೊಡುವಂತೆ ಜಿಲ್ಲಾಧಿಕಾರಿಯವರು ಸೂಚಿಸಿದರು.
ನಗರಸಭೆ ಆಯುಕ್ತರಾದ ಬಿ.ಎ. ಪರಮೇಶ್, ಕೈಗಾರಿಕೆ ಇಲಾಖೆ ಜಂಟಿ ನಿರ್ದೇಶಕರಾದ ಎಸ್.ಎನ್.ಹೆಗ್ಗಡೆ, ಜಂಟಿ ಕೃಷಿ ನಿರ್ದೇಶಕರಾದ ಡಾ.ಮಧುಸೂಧನ್, ತೋಟಗಾರಿಕೆ ಇಲಾಖೆ ಉಪನಿರ್ದೇಶಕರಾದ ಸಂಜಯ್, ಲೋಕೋಪಯೋಗಿ ಕಾರ್ಯಪಾಲಕ ಅಭಿಯಂತರರಾದ ಮಂಜು, ಗ್ರಾಮೀಣಾ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಕಾರ್ಯಪಾಲಕ ಅಭಿಯಂತರರಾದ ಆನಂದ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು. (ಎನ್.ಬಿ)

Leave a Reply

comments

Related Articles

error: