ಕರ್ನಾಟಕಪ್ರಮುಖ ಸುದ್ದಿ

ಚಿತ್ರ ನಿರ್ಮಾಪಕಿ ಜಯಶ್ರೀ ದೇವಿ ಇನ್ನಿಲ್ಲ

ಬೆಂಗಳೂರು (ಫೆ.13): ಭವಾನಿ, ನಮ್ಮೂರ ಮಂದಾರ ಹೂವೆ, ಅಮೃತ ವರ್ಷಿಣಿ, ಶ್ರೀ ಮಂಜುನಾಥ, ನಿಶ್ಯಬ್ದ, ಕೋಣ ಈದೈತೆ ಮುಂತಾದ ಚಿತ್ರಗಳ ನಿರ್ಮಾಪಕಿ ಹಾಗೂ ಇತ್ತೀಚೆಗೆ ಬಿಡುಗಡೆಯಾದ ಮುಕುಂದ ಮುರಾರಿ ಚಿತ್ರದ ಕಾರ್ಯಕಾರಿ ನಿರ್ಮಾಪಕಿ ಜಯಶ್ರೀ ದೇವಿ ಇಂದು ಬೆಳಗ್ಗೆ ಹೈದರಾಬಾದ್ನ ಅಪೋಲೋ ಆಸ್ಪತ್ರೆಯಲ್ಲಿ ಹೃದಯಫಾತದಿಂದ ನಿಧನರಾದರು. ಅವರಿಗೆ 60 ವರ್ಷ ವಯಸ್ಸಾಗಿತ್ತು.

1995ರಲ್ಲಿ ಡಾ.ವಿಷ್ಣುವರ್ಧನ್, ಕುಮಾರ್ ಗೋವಿಂದ್ ನಟಿಸಿದ್ದ ಕೋಣ ಇದೈತೆ ಎಂಬ ಚಿತ್ರವನ್ನು ನಿರ್ಮಿಸಿ, ನಿರ್ದೇಶಿಸುವ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಜಯಶ್ರೀ ಅವರು ಇದುವರೆಗೂ 20ಕ್ಕೂ ಹೆಚ್ಚು ಚಿತ್ರಗಳನ್ನು ನಿರ್ಮಿಸಿದ್ದಾರೆ.

ಕೋಣ ಇದೈತೆ ಚಿತ್ರದ ನಂತರ ಶಶಿಕುಮಾರ್, ದೇವರಾಜ್, ಸಿತಾರಾ ಅಭಿನಯದ ಭವಾನಿ ಸಿನಿಮಾವನ್ನು ನಿರ್ದೇಶಿಸಿದ್ದರು. ಭವಾನಿ ಚಿತ್ರದ ನಂತರ ಪೂರ್ಣ ಪ್ರಮಾಣವಾಗಿ ನಿರ್ಮಾಣದತ್ತಲೇ ಗಮನ ಹರಿಸಿದ ಜಯಶ್ರೀ ದೇವಿ ಅವರು, ಶಿವರಾಜ್‍ಕುಮಾರ್ ಅಭಿನಯದ ನಮ್ಮೂರ ಮಂದಾರ ಹೂವೇ, ಗಡಿಬಿಡಿ ಕೃಷ್ಣ, ಪ್ರೇಮ ರಾಗ ಹಾಡು ಗೆಳತಿ, ಡಾ.ವಿಷ್ಣುವರ್ಧನ್ ಅಭಿನಯಿಸಿದ್ದ ಹಬ್ಬ, ನಿಶ್ಯಬ್ದ, ಅಂಬರೀಷ್ ನಟನೆಯ ಶ್ರೀ ಮಂಜುನಾಥ, ವಂದೇ ಮಾತಾರಂ, ಬಂಗಾರದ ಮನೆ, ಅಮೃತವರ್ಷಿಣಿ, ದೇವರು ವರವನು ಕೊಟ್ರೆ ಚಿತ್ರಗಳಿಗೆ ಬಂಡವಾಳ ಹೂಡಿದ್ದಾರೆ.

ಜಯಶ್ರೀದೇವಿ ಅವರು ಉಪೇಂದ್ರ, ಕಿಚ್ಚ ಸುದೀಪ್ ನಟಿಸಿದ್ದ ಮುಕುಂದ ಮುರಾರಿ ಹಾಗೂ ದರ್ಶನ್‍ರ ಕುರುಕ್ಷೇತ್ರ ಚಿತ್ರಗಳಿಗೆ ಕಾರ್ಯಕಾರಿ ನಿರ್ಮಾಪಕಿಯಾಗಿದ್ದಾರೆ. ಇಂದು ಸಂಜೆ ವೇಳೆಗೆ ಜಯಶ್ರೀ ದೇವಿಯ ಪಾರ್ಥಿವ ಶರೀರ ಬೆಂಗಳೂರಿಗೆ ಬರಲಿದ್ದು ನಾಳೆ ಯಲಹಂಕದ ಚಿತಾಗಾರದಲ್ಲಿ ಅವರ ಅಂತಿಮ ಕಾರ್ಯಗಳು ನಡೆಯಲಿದೆ ಎಂದು ನಿಕಟವರ್ತಿ ನಟ ವಾಸು ಅವರು ತಿಳಿಸಿದ್ದಾರೆ.

ಜಯಶ್ರೀ ಅವರ ನಿಧನಕ್ಕೆ ಕರ್ನಾಟಕ ವಾಣಿಜ್ಯಮಂಡಳಿ ಅಧ್ಯಕ್ಷ ಎಸ್.ಎ.ಚಿನ್ನೇಗೌಡ, ನಿರ್ಮಾಪಕ ಮುನಿರತ್ನ ಸೇರಿದಂತೆ ಕಲಾವಿದರು ಹಾಗೂ ತಂತ್ರಜ್ಞರು ಕಂಬನಿ ಮಿಡಿದಿದ್ದಾರೆ. (ಎನ್.ಬಿ)

Leave a Reply

comments

Related Articles

error: