ಮೈಸೂರು

ಪ್ರತಿಭೆಗೆ ಯಾರ ಹಂಗಿಲ್ಲ: ಕಲೆಯ ನಿಜವಾದ ಶಕ್ತಿ ಅರ್ಥ ಮಾಡಿಕೊಂಡರೆ ಬದುಕು ಸುಲಭ

ಎರಡೆರಡು ಪದವಿ ಪಡೆದು, ಮಾರ್ಕ್ಸ್’ಕಾರ್ಡ್‍ಗಳ ಕಂತೆಯನ್ನು ಬ್ಯಾಗಲಿಟ್ಟುಕೊಂಡು ಸರ್ಕಾರಿ ಕೆಲಸಕ್ಕೆ ದಿನ ಬೆಳಗಾದರೆ ಅಲೆಯುವ ಸಾವಿರಾರು ಮಂದಿ ನಮ್ಮ ಕಣ್ಣ ಮುಂದಿದ್ದಾರೆ. ಆದರೆ, ತಮ್ಮಲ್ಲಿನ ಪ್ರತಿಭೆಯಿಂದ ಯಾರ ಹಂಗೂ ಇಲ್ಲದೆ ಕಷ್ಟಪಟ್ಟು ದುಡಿದು ಸಾಧನೆ ಮಾಡುವವರು ಅತಿ ವಿರಳ. ಅಂತಹ ವಿಶಿಷ್ಟ ಮಹಿಳೆಯರಲ್ಲಿ ಇವರೂ ಒಬ್ಬರು.

ಓದಿದ್ದು ಎಂಕಾಂ. ಆದರೆ, ಕೆಲಸಕ್ಕೆಂದು ಬೇರೆಯವರ ಮೇಲೆ ಅವಲಂಬಿತವಾಗಲಿಲ್ಲ. ತಮ್ಮ ಕೌಶಲದ ಮೇಲೆ ನಂಬಿಕೆಯಿಟ್ಟು, ಸಾಧನೆಯ ಬೆನ್ನೇರಿ ಸ್ವಾಭಿಮಾನದ ಬದುಕು ಕಟ್ಟಿಕೊಂಡಿರುವ ಛಲಗಾತಿಯೇ ರಾಮಕೃಷ್ಣ ನಗರದ ನಿವಾಸಿ ಜ್ಯೋತಿ ಟಿ.ಸಿ. ಇಂದು ಆಧುನಿಕತೆಯ ಹೊಡೆತಕ್ಕೆ ಸಿಲುಕಿರುವ ನಾವು ಎಲ್ಲವನ್ನೂ ತಂತ್ರಜ್ಞಾನದ ಮೂಲಕವೇ ಮಾಡುತ್ತೇವೆ. ನಮ್ಮಲ್ಲಿ ಅಗಾಧ ಪ್ರತಿಭೆ ಇದ್ದರೂ ಅದನ್ನು ಅನ್ವೇಷಿಸುವ ಕೆಲಸಕ್ಕೆ ಹೋಗುವುದೇ ಇಲ್ಲ. ಸಣ್ಣಪುಟ್ಟ ಕೆಲಸಗಳನ್ನೂ ಯಂತ್ರಗಳಿಂದ ಮಾಡುತ್ತ ಯಾಂತ್ರಿಕ ಬದುಕು ಸಾಗಿಸುತ್ತಿರುವ ನಾವು, ಯಂತ್ರ ಮಾನವರಾಗಿದ್ದೇವೆ. ಆದರೆ, ಜ್ಯೋತಿ ಅವರು ತಮ್ಮಲ್ಲಿನ ವಿಶಿಷ್ಟ ಪ್ರತಿಭೆ ಹಾಗೂ ಕಲೆಯಿಂದ ಗಮನ ಸೆಳೆಯುತ್ತಿದ್ದಾರೆ.

ರಂಗಾಯಣದ ಆವರಣದಲ್ಲಿ ನಡೆಯುತ್ತಿರುವ ಬಹುರೂಪಿ ಬಹುಭಾಷಾ ಅಂತಾರಾಷ್ಟ್ರೀಯ ನಾಟಕೋತ್ಸವದಲ್ಲಿ ತಾವೇ ತಯಾರಿಸಿದ ಉಲ್ಲನ್ ಹಾರ, ರಿಬ್ಬನ್ ಹಾರ, ಕ್ರಿಸ್ಟನ್ ಹಾರ, ಗ್ಲಾಸ್ ಪೈಯಿಟಿಂಗ್‍ಗಳು, ಪಾಟ್‍ಗಳು, ಫ್ಲವರ್ ಪಾಟ್, ಬುಟ್ಟಿ, ಮನೆ ಸೇರಿದಂತೆ ವಿವಿಧ ವಸ್ತುಗಳನ್ನು ಪ್ರದರ್ಶನಕ್ಕಿಟ್ಟಿದ್ದು ನೋಡುಗರ ಗಮನ ಸೆಳೆಯುತ್ತಿವೆ. ಯಾವುದೇ ಯಂತ್ರೋಪಕರಣಗಳ ಸಹಾಯವಿಲ್ಲದೇ ಕೈಯಿಂದಲೇ ಮಾಡಿರುವುದರಿಂದ ಮತ್ತೆ ಮತ್ತೆ ನೋಡುವ ಆಸೆಯಿಂದ ಸಾರ್ವಜನಿಕರು ಮಳಿಗೆಯ ಕಡೆಗೆ ಮುಖ ಮಾಡುತ್ತಿದ್ದಾರೆ.

ವೃತ್ತಿಯೂ ಹೌದು, ಪ್ರವೃತ್ತಿಯೂ ಹೌದು

ಜ್ಯೋತಿ ಅವರು ಈ ಕಲೆಯನ್ನು ವೃತ್ತಿಯಾಗಿ ಮಾಡಿಕೊಂಡಿದ್ದು, ಜೀವನ ನಿರ್ವಹಣೆಗೆ ಬಳಸಿಕೊಳ್ಳುತ್ತಿದ್ದಾರೆ. ಮನೆಯಲ್ಲಿದ್ದುಕೊಂಡೇ ಸುಲಭವಾಗಿ ಸಂಪಾದನೆ ಮಾಡಬಹುದು ಎಂಬ ಉದ್ದೇಶದಿಂದ ಅಲಂಕಾರಿಕ ವಸ್ತುಗಳನ್ನು ತಯಾರಿಸಿ, ಅದನ್ನು ಮಾರಾಟ ಮಾಡಿ ಬಂದ ಹಣದಿಂದ ಜೀವನ ನಡೆಸುತ್ತಿದ್ದಾರೆ. ಹೊಸ ಮನೆಯ ಅಂದ ಹೆಚ್ಚಿಸುವ ವಸ್ತುಗಳು, ಶುಭ ಸಮಾರಂಭಗಳಿಗೆ ನೀಡುವ ಉಡುಗೊರೆಗಳು, ಹೆಂಗಳೆಯರ ಇಷ್ಟವಾದ ಉಡುಪು ಸೀರೆಯ ನವೀನ ವಿನ್ಯಾಸ ಮಾಡುವ ಕಲೆಯನ್ನು ಜ್ಯೋತಿ ಸಿದ್ಧಿಸಿಕೊಂಡಿದ್ದಾರೆ.

ಕಸದಿಂದಲೇ ರಸ

ಕಸದಿಂದಲೇ ರಸ ಎಂಬ ಮಾತನ್ನು ಜ್ಯೋತಿ ಅವರು ಅಕ್ಷರಶಃ ನಿಜವಾಗಿಸುತ್ತಾರೆ. ನಿರುಪಯುಕ್ತ ಎಂದು ಬಿಸಾಡುವ ವಸ್ತುಗಳನ್ನೇ ಬಳಸಿಕೊಂಡು ಸುಂದರ ವಿನ್ಯಾಸ ರಚಿಸುತ್ತಾರೆ. ತಿಂದು ಬಿಸಾಡುವ ಐಸ್‍ಕ್ರೀಂ ಕಡ್ಡಿಯಿಂದ ಸುಂದರ ಮನೆ, ಬೊಂಬಿನ ಸಹಾಯದಿಂದ ಮಾಡಿದ ಮೊರ, ಬುಟ್ಟಿಗಳು, ಕಂಗೊಳಿಸುವ ಪುಷ್ಪಗಳನ್ನು, ಕ್ರಿಸ್ಟನ್‍ಗಳನ್ನು ಬಳಸಿಕೊಂಡು ಮಾಡಿದ ಕಿವಿ ಓಲೆಗಳು, ವೈರ್ ಬ್ಯಾಗ್‍ಗಳ ಕಲಾಪ್ರತಿಭೆಯಿಂದ ಸುಂದರವಾಗಿ ಮೂಡಿಬಂದಿವೆ.

ಸಿಟಿಟುಡೆಯೊಂದಿಗೆ ಮಾತನಾಡಿದ ಜ್ಯೋತಿ ಪ್ರತಿಯೊಬ್ಬರಲ್ಲೂ ಒಂದಲ್ಲಾ ಒಂದು ಕಲೆ ಇದ್ದೇ ಇರುತ್ತದೆ. ಅದನ್ನು ಹೊರತೆಗೆಯುವ ಕೆಲಸ ಮಾಡಬೇಕಷ್ಟೆ. ಇಂದು ಎಲ್ಲರೂ ಸರ್ಕಾರಿ ಉದ್ಯೋಗವೇ ಬೇಕು ಎಂದು ಕಾಯಬಾರದು. ಸಿಕ್ಕ ಅವಕಾಶಗಳನ್ನು ಸರಿಯಾಗಿ ಬಳಸಿಕೊಂಡು ಮೇಲೇರಬೇಕು. ಪ್ರಯತ್ನಪಟ್ಟರೆ ಯಾವುದೂ ಅಸಾಧ್ಯವಲ್ಲ. ನನ್ನಲ್ಲಿನ ಕಲೆಯನ್ನು ಬೇರೆಯವರಿಗೂ ತಿಳಿಸಬೇಕು ಎಂಬ ಉದ್ದೇಶದಿಂದ ಹಲವರಿಗೆ ಹೇಳಿಕೊಡುತ್ತಿದ್ದೆ. ಆದರೆ, ಅವರಾರು ಕಲೆಯ ನಿಜವಾದ  ಶಕ್ತಿಯನ್ನು ಅರ್ಥ ಮಾಡಿಕೊಳ್ಳಲಿಲ್ಲ. ಅಂತರ್ಜಾಲದಲ್ಲಿ ಎಲ್ಲವೂ ಸಿಗುತ್ತದೆ ಎಂದು ಅರ್ಧಕ್ಕೆ ಬಿಟ್ಟು ಹೋದರು. ಆದರೆ, ನಮ್ಮೊಳಗಿನ ಕಲೆಯನ್ನು ನಾವೇ ಹೊರತೆಗೆಯಬೇಕು. ಅಂತರ್ಜಾಲ ಕೇವಲ ಮಾಹಿತಿ ನೀಡುತ್ತದೆ ಅಷ್ಟೆ. ಅಪ್ಪ ಅಮ್ಮನಿಗೆ ಭಾರವಾಗಿ ಬದುಕದೆ ಏನಾದರೂ ಸಾಧನೆ ಮಾಡುವ ಛಲದಿಂದ ಈ ಕೆಲಸ ಮಾಡುತ್ತಿದ್ದೇನೆ. ಸಂಪಾದನೆಯೊಂದಿಗೆ ಆತ್ಮತೃಪಿಯೂ ಇದೆ ಎಂದರು.

ಮುಖ್ಯವಾಗಿ ಸಾಧನೆಗೆ ಮನಸ್ಸು, ಸಾಧಿಸುವ ಛಲ ಮುಖ್ಯ. ಸಾಧನೆಗೆ ಅಸಾಧ್ಯವಾದದ್ದು ಯಾವುದು ಇಲ್ಲ. ತಾನು ಹಿಡಿದ ಕಾರ್ಯದಲ್ಲಿ ದೃಢವಾದ ನಂಬಿಕೆ, ಸತತ ಪ್ರಯತ್ನ, ನಿರಂತರ ಅಭ್ಯಾಸದಿಂದ ಗುರಿಮುಟ್ಟಬಹುದೆಂದು ತೋರಿಸುವ ಮೂಲಕ ಮಾದರಿಯಾಗಿದ್ದಾರೆ.

ಬಿ.ಎಂ.

Leave a Reply

comments

Related Articles

error: