ಮೈಸೂರು

ನಗರದ ಯಾವುದೇ ವಾರ್ಡ್ ಗಳಿಗೂ ಬೀದಿ ದೀಪವನ್ನು ನೀಡದಿರುವ ಪಾಲಿಕೆ ಕ್ರಮವನ್ನು ವಿರೋಧಿಸಿ ಪ್ರತಿಭಟನೆ

ಮೈಸೂರು,ಫೆ.14:- ನಗರದ ಯಾವುದೇ ವಾರ್ಡ್ ಗಳಿಗೂ ಬೀದಿ ದೀಪವನ್ನು ನೀಡದಿರುವ ಪಾಲಿಕೆ ಕ್ರಮವನ್ನು ವಿರೋಧಿಸಿ ಇಂದು ನಗರ ಪಾಲಿಕೆ ಮುಂದೆ ಬಿಜೆಪಿ ಪಾಲಿಕೆ ಸದಸ್ಯರು ಪ್ರತಿಭಟನೆ ನಡೆಸಿದರು.

ನಗರ ಪಾಲಿಕೆ ಮುಂಭಾಗ ಟ್ಯೂಬ್ ಲೈಟ್ ಖಾಲಿ ಫ್ರೇಮ್ ಹಿಡಿದು ಪಾಲಿಕೆ ಬಿಜೆಪಿ ಸದಸ್ಯರು  ಪಾಲಿಕೆ ವಿರೋಧ ಪಕ್ಷದ ನಾಯಕ ಬಿ.ವಿ.ಮಂಜನಾಥ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು. ಬೀದಿದೀಪ ನೀಡದ ಸರ್ಕಾರ ಹಾಗೂ ಪಾಲಿಕೆ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಪಾಲಿಕೆ ಸದಸ್ಯ, ವಿರೋಧ ಪಕ್ಷದ ನಾಯಕ  ಬಿ.ವಿ.ಮಂಜುನಾಥ್ ಮಾತನಾಡಿ ಮೈಸೂರಿನ ಯಾವುದೇ ವಾರ್ಡ್ ಗಳಿಗೂ ಪಾಲಿಕೆ ಬೀದಿದೀಪ ನೀಡಿಲ್ಲ. ಕೆಲವು ಕಡೆ ಬೀದಿದೀಪಗಳು ಕೆಟ್ಟಿವೆ. ಅದನ್ನು ಸರಿಪಡಿಸುವ ಗೋಜಿಗೂ ಹೋಗಿಲ್ಲ. ರಾತ್ರಿ ವೇಳೆ ನಗರದಲ್ಲಿ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿವೆ. ಬೀದಿ ದೀಪದ ಕೊರತೆ ಬಗ್ಗೆ ಸರ್ಕಾರದ ಗಮನಸೆಳೆಯಲು ಮೇಯರ್ ವಿಫಲರಾಗಿದ್ದಾರೆ. ಈ ಬಗ್ಗೆ ಕೌನ್ಸಿಲ್ ಸಭೆಯಲ್ಲಿ ಹಲವು ಬಾರಿ ಚರ್ಚೆ ಮಾಡಿದರೂ ಸಮಸ್ಯೆ ಮಾತ್ರ ಬಗೆಹರಿಯುತ್ತಿಲ್ಲ. ಕೂಡಲೇ ನಗರದ ಎಲ್ಲಾ ವಾರ್ಡ್ ಗಳಿಗೂ ಬೀದಿದೀಪಗಳನ್ನು ಪೂರೈಕೆ ಮಾಡಬೇಕು ಇಲ್ಲವಾದಲ್ಲಿ ಹೋರಾಟ ಮುಂದುವರೆಸುವುದಾಗಿ ತಿಳಿಸಿದರು.

ಪ್ರತಿಭಟನೆಯಲ್ಲಿ ಪಾಲಿಕೆಯ ಬಿಜೆಪಿ ಸದಸ್ಯರಾದ ಸತೀಶ್, ಎಂ.ಸಿ.ರಮೇಶ್, ಸಾತ್ವಿಕ್, ಆರ್.ಕೆ.ಶರತ್ ಕುಮಾರ್, ಸುಬ್ಬಯ್ಯ, ಲಕ್ಷ್ಮಿ, ವೇದಾವತಿ, ಭರತ್, ರೂಪಾ, ಸೌಮ್ಯಾ ಮತ್ತಿತರರು ಪಾಲ್ಗೊಂಡಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: