ದೇಶಪ್ರಮುಖ ಸುದ್ದಿ

ಎಡಪಕ್ಷಗಳ ಜೊತೆ ಮೈತ್ರಿಗೆ ದೀದಿ ಅಸ್ತು: ಬಿಜೆಪಿಗೆ ಪ್ರಬಲ ಸವಾಲು?

ನವದೆಹಲಿ (ಫೆ.14): ಪ್ರಧಾನಿ ಅಭ್ಯರ್ಥಿ ಎಂದು ಬಿಂಬಿತವಾಗುವವರ ಪಟ್ಟಿ ದೊಡ್ಡದಿರುವುದರಿಂದ ಚುನಾವಣೆಗೂ ಮುನ್ನವೇ ಮಹಾಘಟಬಂಧನದಲ್ಲಿ ಬಿರುಕು ಮೂಡಬಹುದು ಎಂಬ ಲೆಕ್ಕಾಚಾರವಿದ್ದರೂ, ಇದೀಗ ಮಮತಾ ಬ್ಯಾನರ್ಜಿ ಅವರು ಕಾಂಗ್ರೆಸ್ ಮತ್ತು ಎಡಪಕ್ಷಗಳ ಜೊತೆ ಕೈಜೋಡಿಸುವುದಾಗಿ ಹೇಳಿದ್ದು, ಇದರಿಂದ ಪ.ಬಂಗಾಲದಲ್ಲಿ  ಎನ್‍ಡಿಎ ಸರ್ಕಾರಕ್ಕೆ ಆತಂಕ ಆರಂಭವಾಗಿದೆ.

ಬುಧವಾರ ದೆಹಲಿಯಲ್ಲಿ ಆಯೋಜಿಸಲಾಗಿದ್ದ ವಿಪಕ್ಷಗಳ ಸಮಾವೇಶದಲ್ಲಿ ಮಾತನಾಡಿದ ಮಮತಾ ಬ್ಯಾನರ್ಜಿ, ತಾವು ಎಡಪಕ್ಷ ಮತ್ತು ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸುವುದಾಗಿ ಖಚಿತ ಪಡಿಸಿದರು. ಆದರೆ ಪಶ್ಚಿಮ ಬಂಗಾಳದಲ್ಲಿ ಮಾತ್ರ ಕಾಂಗ್ರೆಸ್ ನಮ್ಮ ವಿಪಕ್ಷವಾಗಿಯೇ ಇರಲಿದೆ, ರಾಷ್ಟ್ರ ಮಟ್ಟದಲ್ಲಿ ಮಾತ್ರ ಈ ಮೈತ್ರಿ ಎಂದು ಅವರು ಸ್ಪಷ್ಟಪಡಿಸಿದರು.

ಜನವರಿ ತಿಂಗಳಿನಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಆಯೋಜಿಸಿದ್ದ ಬೃಹತ್ ಸಮಾವೇಶದಲ್ಲಿ ರಾಹುಲ್ ಗಾಂಧಿ ಭಾಗವಹಿಸದೆ ಕೇವಲ ಪತ್ರವನ್ನು ಕಳಿಸಿ, ನಮ್ಮ ಬೆಂಬಲ ನಿಮಗಿದೆ ಎಂದಿದ್ದರು. ಈ ಬೆಳವಣಿಗೆ ಸಾಕಷ್ಟು ಊಹಾಪೋಹಗಳಿಗೆ ದಾರಿ ಮಾಡಿಕೊಟ್ಟಿತ್ತು. ಮಮತಾ ದೀದಿ ಅವರನ್ನು ಪ್ರಧಾನಿ ಅಭ್ಯರ್ಥಿ ಎಂದು ಕೆಲವು ನಾಯಕರು ಬಿಂಬಿಸಿದ್ದು ರಾಹುಲ್ ಗಾಂಧಿ ಅವರಿಗೆ ಇರಿಸುಮುರಿಸುಂಟು ಮಾಡಿದೆ ಎನ್ನಲಾಗಿತ್ತು. ಇದೀಗ ಮೈತ್ರಿ ಮಾಡಿಕೊಂಡರೂ ಪ್ರಧಾನಿ ಅಭ್ಯರ್ಥಿ ಯಾರು ಎಂಬ ಪ್ರಶ್ನೆ ಎದ್ದಾಗ ಉಭಯ ನಾಯಕರ ನಡುವಲ್ಲಿ ಭಿನ್ನಾಭಿಪ್ರಾಯ ಎದ್ದರೆ ಅಚ್ಚರಿಯಿಲ್ಲ.

ಕೇವಲ ರಾಷ್ಟ್ರ ರಾಜಕಾರಣದ ವಿಷಯ ಬಂದಾಗ ಮಾತ್ರ ನಾವು ಕಾಂಗ್ರೆಸ್ ಮತ್ತು ಎಡಪಕ್ಷಗೊಳೊಂದಿಗೆ ಮೈತ್ರಿ ಮಾಡಿಕೊಳ್ಳುತ್ತಿದ್ದೇವೆ. ಮಿಕ್ಕಂತೆ ರಾಜ್ಯ ರಾಜಕಾರಣದ ವಿಷಯ ಬಂದಾಗ ಆ ಎರಡು ಪಕ್ಷಗಳೂ ನಮಗೆ ವಿರೋಧ ಪಕ್ಷವೇ ಎಂದು ದೀದಿ ಖಚಿತಪಡಿಸಿದ್ದಾರೆ. ಮಹಾಘಟಬಂಧನದಲ್ಲಿ ಕಾಂಗ್ರೆಸ್ ಸಹ ಭಾಗವಾಗುವುದಾದರೆ ನಾನು ಬೆಂಬಲ ನೀಡುವುದಿಲ್ಲ ಎಂದು ಹಲವು ಬಾರಿ ಉಚ್ಚರಿಸಿರುವ ಬಿಎಸ್ಪಿ ನಾಯಕಿ ಮಾಯಾವತಿ ದೀದಿ ನಿಲುವನ್ನು ಸ್ವಾಗತಿಸುತ್ತಾರಾ? ಇದೀಗ ಮಹಾಘಟಬಂಧನಕ್ಕೆ ಕಾಂಗ್ರೆಸ್ ಅನ್ನೂ ದೀದಿ ಸೇರಿಕೊಂಡಿದ್ದರಿಂದ ಮಾಯಾವತಿ ಅದರ ಭಾಗವಾಗದೆ ದೂರವೇ ಉಳಿಯುತ್ತಾರಾ ಎಂಬುದನ್ನು ಕಾದುನೋಡಬೇಕಿದೆ.

ಇದೇ ವೇಳೆ ‘ಮೋದಿ ಮತ್ತೊಮ್ಮೆ’ ಎಂದು ಹೇಳುವ ಮೂಲಕ ವಿರೋಧ ಪಕ್ಷಗಳಿಗೆ ಇರಿಸುಮುರಿಸುಂಟು ಮಾಡಿದ ಮುಲಾಯಂ ಸಿಂಗ್ ಯಾದವ್ ಅವರ ನಡೆ ಏನು? ಸಂಸತ್ತಿನಲ್ಲಿ ಸೋನಿಯಾ ಗಾಂಧಿ ಪಕ್ಕವೇ ಕುಳಿತು, ಮೋದಿ ಅವರಿಗೆ ನನ್ನ ಅಭಿನಂದನೆ ಎಂದು ಹೇಳಿದ್ದು ಲೋಕಸಭಾ ಚುನಾವಣೆಯ ನಂತರ ಮತ್ತೊಮ್ಮೆ ಪಕ್ಷಗಳ ಧೃವೀಕರಣವಾಗಬಹುದೇ ಎಂಬ ಅನುಮಾನ ಹುಟ್ಟುಹಾಕಿದೆ. (ಎನ್.ಬಿ)

Leave a Reply

comments

Related Articles

error: