ಕರ್ನಾಟಕಮೈಸೂರು

ಕಾವೇರಿ ಜಲ ವಿವಾದ: ಕನ್ನಡ ಪರ ಸಂಘಟನೆಗಳಿಂದ ಸಂಸದರ ನಿವಾಸಕ್ಕೆ ಮುತ್ತಿಗೆ

ಕಾವೇರಿ ವಿವಾದದಲ್ಲಿ ಸುಪ್ರೀಂ ಕೋರ್ಟ್ ಆದೇಶದ ವಿರುದ್ಧ ಜಿಲ್ಲೆಯಲ್ಲಿ ನಡೆಯುತ್ತಿರುವ ಪ್ರತಿಭಟನೆ ಮುಂದುವರಿದಿದೆ.

ಕೇಂದ್ರ ಸರ್ಕಾರದ ಗಮನ ಸೆಳೆಯುವಲ್ಲಿ ಸಂಸದರು ವಿಫಲರಾಗಿದ್ದಾರೆ. ಕಾವೇರಿ ವಿವಾದದ ಕುರಿತಂತೆ ಸಂಸದರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಿ, ನಮ್ಮ ಜೊತೆ ಬೆಂಬಲಕ್ಕೆ ನಿಲ್ಲಲಿ ಎಂದು ಕಾವೇರಿ ಕ್ರಿಯಾ ಸಮಿತಿಯ ಅಧ್ಯಕ್ಷ ಪ. ಮಲ್ಲೇಶ ಅವರು ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಹಾಗೂ ಚಾಮರಾಜನಗರ ಸಂಸದ ಧ್ರುವನಾರಾಯಣ ಅವರ ನಿವಾಸದ ಮುಂದೆ ಪ್ರತಿಭಟನೆ ನಡೆಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಾನಸಗಂಗೋತ್ರಿಯ ವಿದ್ಯಾರ್ಥಿಗಳು ತರಗತಿಯನ್ನು ಬಹಿಷ್ಕರಿಸಿ ವಿಶ್ವವಿದ್ಯಾನಿಲಯದ ಶತಮಾನೋತ್ಸವ ಕ್ಲಾಕ್ ಟವರ್ ಬಳಿ ಪ್ರತಿಭಟನೆ ನಡೆಸಿದರು. ಸುಪ್ರೀಂಕೋರ್ಟ್ ಆದೇಶದ ವಿರುದ್ಧ ಸಿಡಿದೆದ್ದ ವಿದ್ಯಾರ್ಥಿಗಳು, ಸಂಸದರು ತಮ್ಮ ಸ್ಥಾನಕ್ಕೆ ತಕ್ಷಣ ರಾಜೀನಾಮೆ ನೀಡಿ ಪ್ರಧಾನಮಂತ್ರಿ ಈ ವಿಷಯದಲ್ಲಿ ಮಧ್ಯಸ್ಥಿಕೆ ವಹಿಸುವಂತೆ ನೋಡಿಕೊಳ್ಳಬೇಕು ಎಂದು ಒತ್ತಾಯಿಸಿದರು.

ನೀರೀಲ್ಲದೆ ಬೆಳೆ ನಷ್ಟವಾಗಿ ಕಣ್ಣೀರಿಡುತ್ತಿರುವ ರೈತರಿಗೆ ರಾಜ್ಯ ಸರ್ಕಾರ ತಕ್ಷಣ ಪರಿಹಾರ ಬಿಡುಗಡೆಗೊಳಿಸಬೇಕು ಎಂದು ಆಗ್ರಹಿಸಿದರು. ಪರಿವರ್ತನಾ ತಂಡದವರು ರಾಜ್ಯ ಸರ್ಕಾರದ ಅವಸ್ಥೆಯ ಕುರಿತು ಬೀದಿ ನಾಟಕವನ್ನು ಪ್ರದರ್ಶಿಸಿದರು.

ಮೈಸೂರಿನ ವಕೀಲರು ತಮ್ಮ ಕಾರ್ಯಕಲಾಪಗಳನ್ನು ಬಹಿಷ್ಕರಿಸಿ ಸುಪ್ರೀಂ ಕೋರ್ಟ್ ಆದೇಶದ ವಿರುದ್ಧ ಸಿಡಿದೆದ್ದು ರಾಜ್ಯಕ್ಕೆ ನ್ಯಾಯ ಒದಗಿಸುವಂತೆ ಒತ್ತಾಯಿಸಿದರು.

ಸುಪ್ರೀಂ ಕೋರ್ಟ್ ಆದೇಶದ ವಿರುದ್ಧ ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಕೆ. ದೀಪಕ್ ಮತ್ತು ಕಾರ್ಯದರ್ಶಿ ಲೋಕೇಶ್ ಬಾಬು ನೇತೃತ್ವದಲ್ಲಿ ಬುಧವಾರ ಪತ್ರಿಕಾ ಭವನದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ರ್ಯಾಲಿ ನಡೆಸಿದರು.

ತಮಿಳುನಾಡಿಗೆ ರಾಜ್ಯದಿಂದ ನೀರು ಬಿಡಲು ಆದೇಶಿಸಿರುವ ಸುಪ್ರೀಂಕೋರ್ಟ್ ನಿಲುವು  ನ್ಯಾಯಸಮ್ಮತವಾದುದಲ್ಲ. ಕನ್ನಡ ಹೋರಾಟಗಾರರು, ಸಮಾಜವಾದಿಗಳು, ಲೇಖಕರು ಮತ್ತು ಕನ್ನಡಪರ ಸಂಘಟನೆಗಳು ಈ ಆದೇಶವನ್ನು ವಿರೋಧಿಸಿವೆ. ಈ ಸಮಯದಲ್ಲಿ ನಮ್ಮ ಒಗ್ಗಟ್ಟನ್ನು ಪ್ರದರ್ಶಿಸಬೇಕು. ರಾಜಕೀಯ ನಾಯಕರು ಪಕ್ಷಭೇದ ಮರೆತು ನ್ಯಾಯಕ್ಕಾಗಿ ಹೋರಾಡಬೇಕು ಎಂದಿದ್ದಾರೆ.

ಕರ್ನಾಟಕ ಸೇನಾಪಡೆಯು ಜಿಲ್ಲಾಧಿಕಾರಿ ಕಚೇರಿ ಎದುರು ನ್ಯಾಯಕ್ಕಾಗಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ಪ್ರಧಾನಿಯವರಿಗೆ ಮನವಿ ಸಲ್ಲಿಸಿದೆ. ಮನವಿಯಲ್ಲಿ ಸುಪ್ರೀಂಕೋರ್ಟ್ ತಮಿಳುನಾಡಿಗೆ 6 ಸಾವಿರ ಕ್ಯೂಸೆಕ್ ನೀರು ಬಿಡಲು ಆದೇಶಿಸಿರುವುದು ನ್ಯಾಯಸಮ್ಮತವಾದುದಲ್ಲ. ಕೃಷ್ಣಾ-ಕಳಸಾ ಬಂಡೂರಿ ವಿಷಯದಲ್ಲೂ ನಮಗೆ ಅನ್ಯಾಯವಾಗಿದೆ. ಸಂವಿಧಾನದ 262ನೇ ವಿಧಿಯಲ್ಲಿ ನೀರಿನ ವಿಷಯ ಸುಪ್ರೀಂಕೋರ್ಟ್ ಅಡಿಯಲ್ಲಿ ಬರುವುದಿಲ್ಲವಾದರೂ ಸುಪ್ರೀಂಕೋರ್ಟ್ ಈ ವಿಷಯದಲ್ಲಿ ಮೂಗು ತೂರಿಸುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.

ಮೈಸೂರು ಕನ್ನಡ ವೇದಿಕೆ ವತಿಯಿಂದಲೂ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಯಿತು. ಬಾಲರಾಜು, ಅಂಕಣಕಾರ ಬನ್ನೂರು ಕೆ.ರಾಜು ಮತ್ತಿತರ ಸದಸ್ಯರು ಪಾಲ್ಗೊಂಡಿದ್ದರು. ಬನ್ನೂರು ರಾಜು ಅವರು ಮಾತನಾಡಿ ಕಾವೇರಿ ವಿಷಯದಲ್ಲಿ ರಾಜ್ಯ ಪರಿತಪಿಸುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಅದ್ಧೂರಿ ದಸರಾ ಬೇಕಿತ್ತೆ ಎಂದು ಪ್ರಶ್ನಿಸಿದರು. ಕಳೆದ ವರ್ಷ ರೈತರ ಆತ್ಮಹತ್ಯೆ ಮತ್ತು ಬರದಿಂದ ಕಡಿಮೆ ವೆಚ್ಚದ ದಸರಾ ಮಾಡಲಾಗಿತ್ತು. ಈ ವರ್ಷ ಕಳೆದ ವರ್ಷಕ್ಕಿಂತಲೂ ಪರಿಸ್ಥಿತಿ ಕ್ಲಿಷ್ಟವಾಗಿದೆ. ಆದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯಾಕೆ ಆಡಂಬರದ ದಸರಾಗೆ ಒಪ್ಪಿಗೆ ಕೊಟ್ಟಿದ್ದಾರೋ ಗೊತ್ತಿಲ್ಲ. ದಸರಾ ಮತ್ತು ಜಂಬೂಸವಾರಿಯನ್ನು ಅರಮನೆಗಷ್ಟೇ ಸೀಮಿತಗೊಳಿಸಲಿ ಎಂದು ಆಗ್ರಹಿಸಿದರು.

Leave a Reply

comments

Related Articles

error: