ಪ್ರಮುಖ ಸುದ್ದಿ

ದಂತ ವಿಜ್ಞಾನ ಪದವಿ ಸಮಾವೇಶ : ಫೆ.28 ರಂದು ವಿರಾಜಪೇಟೆಯಲ್ಲಿ ಚಾಲನೆ

ರಾಜ್ಯ(ಮಡಿಕೇರಿ) ಫೆ.15 :- ವೀರಾಜಪೇಟೆಯ ಕೂರ್ಗ್ ಇನ್‍ಸ್ಟಿಟ್ಯೂಟ್ ಆಫ್ ಡೆಂಟಲ್ ಸೈನ್ಸಸ್ ವತಿಯಿಂದ   ಅಂತರರಾಷ್ಟ್ರೀಯ ದಂತ ವೈದ್ಯಕೀಯ ವಿದ್ಯಾಸಂಸ್ಥೆಗಳ ಒಕ್ಕೂಟದ ಸಹಯೋಗದಲ್ಲಿ  ದಂತ ವಿಜ್ಞಾನ ಪದವಿಗೆ ಸಂಬಂಧಿಸಿದ  ಮೂರು ದಿನಗಳ ಅಂತಾರಾಷ್ಟ್ರೀಯ ಮಟ್ಟದ  ಸಮಾವೇಶ ಫೆ.28 ಹಾಗೂ ಮಾ.1, 2ರಂದು ವೀರಾಜಪೇಟೆಯಲ್ಲಿ ನಡೆಯಲಿದೆ.

ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಕೂರ್ಗ್ ಇನ್ಸ್ಟಿಟ್ಯೂಟ್ ಆಫ್ ಡೆಂಟಲ್ ಸೈನ್ಸಸ್‍ನ ಉಪ ಪ್ರಾಂಶುಪಾಲ ಡಾ.ಜಿತೇಶ್ ಜೈನ್ ಹಾಗೂ ಬಾಯಿ ರೋಗ ವಿಭಾಗದ ಮುಖ್ಯಸ್ಥ ಡಾ. ಶಶಿಧರ್ ಅವರುಗಳು, ವಿಶ್ವದ ಇತರ ದೇಶಗಳಿಗೆ ಹೋಲಿಸಿದಲ್ಲಿ ಕಳೆದ ಏಳು ದಶಕಗಳಿಂದಲೂ ಭಾರತ ದಂತ ವೈದ್ಯಕೀಯ ಕ್ಷೇತ್ರದ ಸಂಶೋಧನೆಯಲ್ಲಿ ಹಿಂದೆ ಬಿದ್ದಿದೆ. ಇದನ್ನು ಸರಿದೂಗಿಸುವ ನಿಟ್ಟಿನಲ್ಲಿ ವೀರಾಜಪೇಟೆಯ ಕೊಡಗು ದಂತ ವೈದ್ಯಕೀಯ ಮಹಾವಿದ್ಯಾಲಯವು ವಿಶ್ವದ ವಿವಿಧ ದಂತವೈದ್ಯಕೀಯ ಶಿಕ್ಷಣ ಸಂಸ್ಥೆಗಳೊಂದಿಗೆ ಒಡಂಬಡಿಕೆ ಮಾಡಿಕೊಳ್ಳುವುದರೊಂದಿಗೆ ಪರಸ್ಪರ ಜ್ಞಾನ ವಿನಿಮಯದ ರಾಯಭಾರಿಯಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ಹೇಳಿದರು.

ಕಳೆದ ಮೂರು ವರ್ಷಗಳಿಂದ ಸಂಸ್ಥೆಯು ವಿವಿಧ ವಿಷಯಗಳಲ್ಲಿ ಸಮಾವೇಶಗಳನ್ನು ಆಯೋಜಿಸುತ್ತಾ ಬರುತ್ತಿದ್ದು, ಕಳೆದ ಸಾಲಿನಲ್ಲಿ ನಡೆದ ಸಮಾವೇಶದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಆರು ವಿಶ್ವವಿದ್ಯಾಲಯಗಳು ಹಾಗೂ ಭಾರತದ 50 ದಂತ ವೈದ್ಯಕೀಯ ಕಾಲೇಜುಗಳು ಸಮಾವೇಶದಲ್ಲಿ ಭಾಗವಹಿಸುವುದರೊಂದಿಗೆ ಈ ಸಮಾವೇಶ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುವಂತಾಗಿದೆ ಎಂದು ನುಡಿದರು.

ಪ್ರಸಕ್ತ ಸಾಲಿನ ಸಮಾವೇಶವು ವಿಜ್ಞಾನ ದಿನವಾದ ಫೆ.28ರಂದು ಆರಂಭವಾಗಲಿದ್ದು, ವಿಶ್ವದ ವಿವಿಧ ರಾಷ್ಟ್ರಗಳ ಸುಮಾರು 200 ಹಾಗೂ  ದೇಶದ ವಿವಿಧ ವಿದ್ಯಾಸಂಸ್ಥೆಗಳ ಸುಮಾರು 900 ಮಂದಿ ಭಾಗವಹಿಸುವ ಮೂಲಕ ಸುಮಾರು ಒಂದು ನೂರಕ್ಕೂ ಅಧಿಕ ಪ್ರಬಂಧಗಳನ್ನು ಮಂಡಿಸಲಿದ್ದಾರೆ. ವೀರಾಜಪೇಟೆ ದಂತ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಅಂದಾಜು 50 ಸಂಶೋಧನಾ ಪ್ರಬಂಧಗಳನ್ನು ಸಮಾವೇಶದಲ್ಲಿ ಮಂಡಿಸಲಿರುವುದಾಗಿ ಮಾಹಿತಿಯನ್ನಿತ್ತರು.

ಸಮಾವೇಶದಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧವಾಗಿರುವ ಜಪಾನ್‍ನ ತ್ಸುರುಮಿ ವಿವಿ, ಅಲಬಾಮ ವಿವಿ. ಟೆಕ್ಸಾಸ್ ವಿವಿ, ಹಂಗೇರಿಯ ಡೆಬ್ರಿಸೆನ್ ವಿವಿ, ಸ್ವಿಟ್ಜರ್ಲೆಂಡ್‍ನ ಜಿನಿವಾ ವಿವಿ, ಹಾಂಗ್‍ಕಾಂಗ್, ಸಿಂಗಪೂರ್ ವಿವಿ ಸೇರಿದಂತೆ ಇಪ್ಪತ್ತಕ್ಕೂ ಹೆಚ್ಚಿನ ವಿವಿಗಳ ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದಾರೆಂದು ವಿವರಿಸಿದರು.

ಕ್ಷೀಣವಾಗುತ್ತಿರುವ ರೋಗನಿರೋಧಕ ಶಕ್ತಿ-ದೇಶದ ಜನರಲ್ಲಿ ರೋಗ ನಿರೋಧಕ ಶಕ್ತಿ ಕುಂಠಿತವಾಗುತ್ತಿರುವ ಹಿನ್ನೆಲೆಯಲ್ಲಿ ಈ ಬಾರಿ ವಿಶೇಷವಾಗಿ ರೋಗ ನಿರೋಧಕ ಶಕ್ತಿಯನ್ನು ಪುನಶ್ಚೇತನಗೊಳಿಸುವ ದಿಸೆಯಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಹೆಚ್ಚು ಗಮನಹರಿಸಲಾಗುತ್ತಿದೆ ಎಂದು ಹೇಳಿದ ಅವರು, ಈ ಬಾರಿಯ ಸಮಾವೇಶದಲ್ಲಿ ಅತ್ಯಂತ ಪ್ರಮುಖವಾಗಿ ಮನುಷ್ಯನನ್ನು ಕಾಡುವ ವಿವಿಧ ರೋಗಗಳಿಗೆ ಸಂಬಂಧಿಸಿದಂತೆ ಯಾವ ರೋಗ ನಿರೋಧಕ ಔಷಧಿಗಳನ್ನು (ಆ್ಯಂಟಿ ಬಯೋಟಿಕ್)ನೀಡಬೇಕು ಎನ್ನುವ ಬಗ್ಗೆ ವಿಸ್ತøತ ಚರ್ಚೆ ನಡೆಸಿ, ಅಂತರಾಷ್ಟ್ರೀಯ ಮಟ್ಟದಲ್ಲಿ ರೋಗ ನಿರೋಧಕ ಔಷಧಿಗಳ ತಜ್ಞರಾದ ಅಮೇರಿಕಾದ ಟೆಕ್ಸಾಸ್ ವಿಶ್ವವಿದ್ಯಾನಿಲಯದ ಡಾ.ರಘುನಾಥ್ ಪುಟ್ಟಯ್ಯ ಅವರ ಮಾರ್ಗದರ್ಶನದಲ್ಲಿ ನಿಯಮವನ್ನು ರೂಪಿಸಲಾಗುತ್ತದೆಂದು ವಿವರಿಸಿದರು. ದಂತ ವೈದ್ಯಕೀಯಕ್ಕೆ ಸಂಬಂಧಿಸಿದಂತೆ ವಿಶ್ವದ ವಿವಿಧೆಡೆಗಳಲ್ಲಿ ನಡೆಯುತ್ತಿರುವ ಸಂಶೋಧನೆ, ಚಿಕಿತ್ಸಾ ಕ್ರಮಗಳ ಮೇಲೆ ಬೆಳಕು ಚೆಲ್ಲಲಿರುವ ಅಂತರಾಷ್ಟ್ರೀಯ ಸಮಾವೇಶದಲ್ಲಿ ವೈದ್ಯಕೀಯ ವಿಜ್ಞಾನದ ಬಗ್ಗೆ ಆಸಕ್ತಿಯುಳ್ಳ ಯಾರು ಬೇಕಾದರು ಪಾಲ್ಗೊಳ್ಳಬಹುದೆಂದು ತಿಳಿಸಿದರು.

ಉದ್ಘಾಟನೆ- ಅಂತರಾಷ್ಟ್ರೀಯ ಸಮಾವೇಶವನ್ನು ಮಾರ್ಚ್ 1 ರಂದು ದುಬೈನ ಶಾರ್ಜಾ ವಿಶ್ವವಿದ್ಯಾನಿಲಯದ ಡೀನ್ ಪ್ರೊಫೆಸರ್ ಲಕ್ಷ್ಮಣ ಸಮರನಾಯಕೆ ಉದ್ಘಾಟಿಸಲಿದ್ದಾರೆ. ಜಪಾನ್‍ನ ತ್ಸುರುಮಿ ವಿಶ್ವವಿದ್ಯಾನಿಲಯದ ಡಾ. ಸಟೋಷಿ ನಾಗಸಾಕ,ಥಾಯ್ಲೆಂಡ್‍ನ ಚಿಯಾಂಗ್ ಮಾಯಿ ವಿಶ್ವವಿದ್ಯಾನಿಲಯದ ಡಾ. ದಿರಾವಟ್, ಅಮೇರಿಕಾದ ಅಲಬಾಮ ವಿಶ್ವವಿದ್ಯಾನಿಲಯದ  ಪ್ರೊ. ಚುಂಗ್ ಕಾವ್ ಹಾವ್ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ದಂತ ವ್ಯದ್ಯಕೀಯದ ಬಗ್ಗೆ ಉಪನ್ಯಾಸಗಳನ್ನು ನೀಡಲಿದ್ದಾರೆಂದು ಮಾಹಿತಿ ನೀಡಿದರು.  (ಕೆಸಿಐ,ಎಸ್.ಎಚ್)

Leave a Reply

comments

Related Articles

error: