ವಿದೇಶ

ಪುಲ್ವಾಮಾ ದಾಳಿ ಆತಂಕದ ವಿಷಯ, ಇದಕ್ಕೆ ನಮ್ಮ ಬೆಂಬಲವಿಲ್ಲ: ಪಾಕಿಸ್ತಾನ

ಇಸ್ಲಾಮಾಬಾದ್‌,ಫೆ.15-ಜಮ್ಮು-ಕಾಶ್ಮೀರದ ಪುಲ್ವಾಮಾದ ಆವಂತಿಪೋರಾದಲ್ಲಿ ಸಿಆರ್‌ಪಿಎಫ್ ಯೋಧರ ಮೇಲೆ ನಡೆದ ದಾಳಿ ತೀವ್ರ ಆತಂಕದ ವಿಷಯ. ಆದರೆ ಇದಕ್ಕೆ ನಾವು ಹೊಣೆಯಲ್ಲ ಎಂದು ಪಾಕಿಸ್ತಾನ ಸರ್ಕಾರ ಹೇಳಿದೆ.

ಭಾರತ ಸರ್ಕಾರ ತನಿಖೆ ನಡೆಸದೆ ಈ ದಾಳಿಗೆ ಪಾಕ್ ಬೆಂಬಲವಿದೆ ಎಂದು ಹೇಳಬಾರದು. ಯಾವುದೇ ತನಿಖೆ ನಡೆಸದೆ ಭಾರತದ ಮಾಧ್ಯಮಗಳು ಈ ದಾಳಿಗೆ ಪಾಕ್ ಹೆಸರನ್ನು ಜೋಡಿಸುತ್ತಿರುವುದನ್ನು ನಾವು ಬಲವಾಗಿ ತಿರಿಸ್ಕರಿಸುತ್ತೇವೆ ಎಂದಿದೆ.

ಅಂತಾರಾಷ್ಟ್ರೀಯ ಭಯೋತ್ಪಾದಕ ಮಸೂದ್ ಅಜರ್‌ ನೇತೃತ್ವದ ಪಾಕಿಸ್ತಾನ ಮೂಲದ ಜೈಷೆ ಮೊಹಮ್ಮದ್ ಭಯೋತ್ಪಾದಕ ಸಂಘಟನೆಗೆ ಪಾಕಿಸ್ತಾನ ಸರ್ಕಾರ ಸಂಪೂರ್ಣ ಸ್ವಾತಂತ್ರ್ಯ ನೀಡಿದೆ. ತನ್ನ ನೆಲದಿಂದ ಭಯೋತ್ಪಾದಕ ಕೃತ್ಯಗಳನ್ನು ಪ್ರಾಯೋಜಿಸುತ್ತಿರುವ ಈತ ಹಾಗೂ ಇತರ ಉಗ್ರರ ವಿರುದ್ಧ ಪಾಕಿಸ್ತಾನ ಕ್ರಮ ಕೈಗೊಳ್ಳದಿದ್ದಲ್ಲಿ ದಂಡಿಸುವ ಸಂಪೂರ್ಣ ಅಧಿಕಾರ ಭಾರತಕ್ಕಿದೆ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ.

ಭಯೋತ್ಪಾದಕರ ಪಟ್ಟಿಯಲ್ಲಿ ಜೈಷೆ ಮೊಹಮ್ಮದ್‌ ಮುಖ್ಯಸ್ಥ ಮಸೂದ್ ಅಜರ್‌ನನ್ನು ಸೇರಿಸುವಂತೆ ಅಂತಾರಾಷ್ಟ್ರೀಯ ಸಮುದಾಯದ ಎಲ್ಲ ಸದಸ್ಯರಿಗೆ ನಾವು ಮತ್ತೊಮ್ಮೆ ಆಗ್ರಹಿಸುತ್ತಿದ್ದೇವೆ. ವಿಶ್ವಸಂಸ್ಥೆ ಭದ್ರತಾ ಮಂಡಳಿಯ 1267ನೇ ಅಧಿನಿಯಮದಡಿ ಈತನನ್ನು ಅಂತಾರಾಷ್ಟ್ರೀಯ ಭಯೋತ್ಪಾದಕನೆಂದು ಘೋಷಿಸಲು ಯಾವ ದೇಶಗಳೂ ಅಡ್ಡಗಾಲು ಹಾಕಬಾರದು ಎಂದು ವಿದೇಶಾಂಗ ಸಚಿವಾಲಯ ಹೇಳಿದೆ.

ಈ ದಾಳಿಯನ್ನು ಜಗತ್ತಿನ ಹಲವು ದೇಶಗಳು ಖಂಡಿಸಿವೆ. ಭಯೋತ್ಪಾದನೆ ವಿರುದ್ಧ ಭಾರತ ನಡೆಸುವ ಸಮರಕ್ಕೆ ಸಂಪೂರ್ಣ ಬೆಂಬಲ ನೀಡುವುದಾಗಿ ಘೋಷಿಸಿವೆ. (ಎಂ.ಎನ್)

 

Leave a Reply

comments

Related Articles

error: