ಪ್ರಮುಖ ಸುದ್ದಿಮೈಸೂರು

ಮೈಸೂರು-ಹಾಸನ ಹೆದ್ದಾರಿಯಲ್ಲಿ ಅಪಘಾತ; ಪುರ ಗ್ರಾಮದ ಸಂತೋಷ್ ಸಾವು; ಮೂವರಿಗೆ ಗಾಯ

ಲಾರಿ – ಓಮ್ನಿವ್ಯಾನ್ ಮಧ್ಯೆ ಸಂಭವಿಸಿದ ಅಪಘಾತದಲ್ಲಿ ಕಾರಿನ ಚಾಲಕ ಸ್ಥಳದಲ್ಲಿಯೇ ಮೃತಪಟ್ಟು, ಮೂವರು ಗಾಯಗೊಂಡಿರುವ ಘಟನೆ ಕೆ.ಆರ್. ನಗರ ತಾಲೂಕಿನ ಮೈಸೂರು-ಹಾಸನ ರಾಜ್ಯ ಹೆದ್ದಾರಿಯಲ್ಲಿ ನಡೆದಿದೆ.

ಅಪಘಾತದಲ್ಲಿ ಕಾರು ಚಾಲಕ ಪುರ ಗ್ರಾಮದ ಸಂತೋಷ್ (32) ಎಂಬಾತ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಭತ್ತದ ವ್ಯಾಪಾರಿಯಾಗಿದ್ದ ಸಂತೋಷ್ ತನ್ನ ತಾಯಿಗೆ ಅನಾರೋಗ್ಯ ಕಾರಣದಿಂದ ಕುಟುಂಬದೊಂದಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ವಾಪಸ್ ಸ್ವಗ್ರಾಮಕ್ಕೆ ಕಾರಿನಲ್ಲಿ (ಕೆಎ-12, ಎನ್-1848) ತೆರಳುತ್ತಿದ್ದ. ಈ ವೇಳೆ ಹಾಸನ ಮಾರ್ಗದಿಂದ ಮುಸುಕಿನ ಜೋಳ ತುಂಬಿಕೊಂಡು ಬರುತ್ತಿದ್ದ ಲಾರಿ (ಕೆ.ಎ.13-8790) ತಿರುವು ಪಡೆಯಲು ಯತ್ನಿಸಿದಾಗ ಈ ಅವಘಡ ಸಂಭವಿಸಿದೆ.

ಅಪಘಾತದಿಂದ ಕಾರು ಚಾಲಕ ಸಂತೋಷ್ ಸ್ಥಳದಲ್ಲಿಯೇ ಸಾವನ್ನಪ್ಪಿದರೆ, ಕಾರಿನಲ್ಲಿದ್ದ ಅವರ ತಾಯಿ ರುಕ್ಮಿಣಿ, ಪತ್ನಿ ಮಮತ ಹಾಗೂ ಒಂಭತ್ತು ತಿಂಗಳ ಮಗುವಿಗೆ ಸಣ್ಣಪುಟ್ಟ ಗಾಯಗಳಾಗಿ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದಿಂದ ಲಾರಿ ಪಲ್ಟಿ ಹೊಡೆದಿದ್ದರೆ, ಕಾರು ಸಂಪೂರ್ಣ ಜಖಂಗೊಂಡಿದೆ. ಘಟನೆ ಬಳಿಕ ಲಾರಿ ಚಾಲಕ ಪರಾರಿಯಾಗಿದ್ದಾನೆ.

ಈ ಸಂಬಂಧ ಕೆ. ಆರ್. ನಗರ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಚಾಲಕನ ಪತ್ತಗೆ ಬಲೆ ಬೀಸಿದ್ದಾರೆ.

Leave a Reply

comments

Related Articles

error: