ಮೈಸೂರು

ಅತ್ಯುತ್ತಮ ಕೋಟ್ಪಾ ಕಾಯಿದೆ ಅನುಷ್ಠಾನಕ್ಕೆ ಇಲಾಖೆಗಳ ಸಹಕಾರ ಅತ್ಯಗತ್ಯ: ಡಾ. ಕುಸುಮ

ಮೈಸೂರು, ಫೆ.16:-  ಆರೋಗ್ಯ ಪೂರ್ಣ ಸಮಾಜ ರೂಪಿಸುವ ನಿಟ್ಟಿನಲ್ಲಿ ಮೈಸೂರು ಜಿಲ್ಲೆಯಾದ್ಯಂತ  ತಂಬಾಕು ನಿಯಂತ್ರಣವನ್ನು ಸವಾಲಾಗಿ ಸ್ವೀಕರಿಸಿ ತಂಬಾಕು ನಿಯಂತ್ರಣಕ್ಕೆ ಇರುವ ಕೋಟ್ಪಾ-2003 ಕಾಯ್ದೆಯನ್ನು ಕಟ್ಟುನಿಟ್ಟಾಗಿ ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಲು ಇಲಾಖೆಗಳ ಸಹಕಾರ ಅತ್ಯಗತ್ಯ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿಗಳು ಹಾಗು ತಂಬಾಕು ನಿಯಂತ್ರಣ ಜಿಲ್ಲಾ ಕಾರ್ಯಕ್ರಮಾಧಿಕಾರಿಗಳಾದ ಡಾ. ಕುಸುಮ ಅವರು ತಿಳಿಸಿದರು.
ಅವರು ನಿನ್ನೆ  ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ತಂಬಾಕು ನಿಯಂತ್ರಣ ಹಾಗೂ ತಂಬಾಕು ಮುಕ್ತ ಮೈಸೂರು ಯೋಜನೆಯ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದರು. ಜಿಲ್ಲೆಯ ಯುವಕರು, ಮಕ್ಕಳು ಹಾಗೂ ಧೂಮಪಾನ ಮಾಡದವರ ಹಿತ ಕಾಪಾಡುವ ಉದ್ದೇಶದಿಂದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ನೇತೃತ್ವದಲ್ಲಿ ಈಗಾಗಲೇ ತಂಬಾಕು ನಿಯಂತ್ರಣ ಕಾಯ್ದೆ – ಕೋಟ್ಪಾ 2003 ಅನ್ನು ಸಮರ್ಪಕವಾಗಿ ಅನುಷ್ಠಾನ ಮಾಡಲಾಗುತ್ತಿದೆ. ತಂಬಾಕು ನಿಯಂತ್ರಣವು ಕೇವಲ ಆರೋಗ್ಯ ಅಥವಾ ಪೋಲೀಸ್ ಇಲಾಖೆಯ ಪರಿದಿಗೆ ಬರುವುದಿಲ್ಲ. ಇದರಲ್ಲಿ ವಿವಿಧ ಇಲಾಖೆಗಳ ಸಹಯೋಗವು ಬಹಳ ಅತ್ಯಗತ್ಯ ಎಂದು ತಿಳಿಸಿದರು.
ಜಿಲ್ಲೆಯ ಎಲ್ಲಾ ಶಿಕ್ಷಣ ಸಂಸ್ಥೆಗಳ ಸುತ್ತಮುತ್ತ 100 ಗಜಗಳ ವ್ಯಾಪ್ತಿಯಲ್ಲಿ ತಂಬಾಕು ಉತ್ಪನ್ನಗಳ ಮಾರಾಟ ನಿಷೇಧ ಜಾರಿಯಲ್ಲಿದ್ದು, ಉಲ್ಲಂಘನೆಯಾಗಿದ್ದಲ್ಲಿ ಅಂತಹ ಮಾರಾಟ ಮಳಿಗೆಗಳನ್ನು ತೆರವುಗೊಳಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು.
ಸಾರ್ವಜನಿಕ ಸ್ಥಳಗಳಾದ ಬಸ್‍ಸ್ಟಾಂಡ್‍ಗಳು, ಪಾರ್ಕ್‍ಗಳು, ಹೋಟೆಲ್ ಹಾಗೂ ರೆಸ್ಟೊರೆಂಟ್‍ಗಳು, ಬೇಕರಿಗಳು, ಎಲ್ಲಾ ಅಂಗಡಿಮುಂಗಟ್ಟುಗಳು, ಸಿನಿಮಾ ಥಿಯೇಟರ್‍ಗಳು, ಸರ್ಕಾರಿ ಮತ್ತು ಖಾಸಗಿ ಕಚೇರಿಯ ಆವರಣಗಳು ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧ ಜಾರಿಗೊಳಿಸುವುದು ಹಾಗೂ ಇದಕ್ಕೆ ಸಂಬಂಧಪಟ್ಟ ಫಲಕಗಳು ಅಳವಡಿಸಿರುವುದನ್ನು ಖಾತ್ರಿ ಪಡಿಸಿಕೊಳ್ಳಬೇಕು. ಕಾನೂನು ಪ್ರಕಾರ ಮಾರಾಟ ಸ್ಥಳಗಳಲ್ಲಿ ತಂಬಾಕು ಉತ್ಪನ್ನಗಳ ದುಷ್ಪರಿಣಾಮದ ಕುರಿತು ಸೂಚನಾ ಫಲಕಗಳನ್ನು ಪ್ರದರ್ಶಿಸುವುದು ಕಡ್ಡಾಯವಾಗಿತ್ತದೆ ಎಂದರು.
ಸಾರ್ವಜನಿಕ ಸ್ಥಳಗಳಲ್ಲಿ ಹಾಗೂ ತಂಬಾಕು ಉತ್ಪನ್ನಗಳ ಮಾರಾಟ ಮಾಡುವ ಸ್ಥಳಗಳಲ್ಲಿ ತಂಬಾಕು ಉತ್ಪನ್ನಗಳ ಜಾಹೀರಾತುಗಳನ್ನು ತೆರವುಗೊಳಿಸಬೇಕು. ಪೊಲೀಸ್ ಠಾಣೆಗಳ ಹಾಗೂ ಪ್ರತಿ ಗ್ರಾಮಪಂಚಾಯಿತ್ಗಳ ಮಟ್ಟದಲ್ಲಿ ಕೋಟ್ಪಾ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ನಿಯಮಿತವಾಗಿ ವಿಶೇಷ ಕಾರ್ಯಾಚರಣೆಯನ್ನು ಹಾಗೂ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಬೇಕು ಎಂದರು.

ಮೈಸೂರು ನಗರ ಪೊಲೀಸ್ ವತಿಯಿಂದ ಉಪಸ್ಥಿತರಿದ್ದ ಸಹಾಯಕ ಪೊಲೀಸ್ ಆಯುಕ್ತರಾದ ಸಿ.ಗೋಪಾಲ್, ಅವರು ಮಾತನಾಡಿ “ನಗರದಲ್ಲಿ ಈಗಾಗಲೇ ಪೊಲೀಸ್ ಇಲಾಖೆಯ ವತಿಯಿಂದ ಕೋಟ್ಪಾ ಕಾಯಿದೆಯ ಅನುಷ್ಠಾನವನ್ನು ಸಮರ್ಪಕವಾಗಿ ಮಾಡಲಾಗುತ್ತಿದೆ ಹಾಗೂ ಶಾಲಾ ಕಾಲೇಜುಗಳಲ್ಲಿ ತಂಬಾಕು ಹಾಗೂ ಇತರೆ ತಂಬಾಕು ವ್ಯಸನದ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ಎಂದು ತಿಳಿಸಿದರು.

ಮೈಸೂರು ಮಹಾನಗರ ಪಾಲಿಕೆಯ ಆರೋಗ್ಯಾಧಿಕಾರಿಯಾದ ಡಾ. ಜಹನಾರಾ ತಬಸ್ಸುಂ ಮಾತನಾಡಿ, “ಪಾಲಿಕೆಯು ತಂಬಾಕು ನಿಯಂತ್ರಣವನ್ನು ಸವಾಲಾಗಿ ಸ್ವೀಕರಿಸಿದೆ. ಹೋಟೆಲ್, ಬಾರ್ & ರೆಸ್ಟೋರೆಂಟ್, ಪಬ್, ಕ್ಲಬ್‍ಗಳಲ್ಲಿ ಅನಧಿಕೃತವಾಗಿ ಸ್ಥಾಪಿಸಲಾಗಿರುವ ಧೂಮಪಾನ ವಲಯಗಳನ್ನು ತೆರವುಗೊಳಿಸಲಾಗುವುದು. ನಿಯಮನುಸಾರ ಪರವಾನಗಿಯನ್ನು ಪಡೆಯದ ಅಂಗಡಿ ಮುಂಗಟ್ಟುಗಳ ಮೇಲೆ  ಮೈಸೂರು ಮಹಾನಗರಪಾಲಿಕೆ ಆರೋಗ್ಯ ಅಧಿಕಾರಿಗಳು ಕ್ರಮ ಕೈಗೊಳ್ಳಲಿದ್ದಾರೆ ಎಂದರು.

ಸಭೆಯಲ್ಲಿ  ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಸಲಹೆಗಾರರಾದ ಶಿವಕುಮಾರ್, ರಾಜ್ಯ ತಂಬಾಕು ನಿಯಂತ್ರಣ ಕೋಶದ ಪ್ರಭಾಕರ್ ಪೂಜಾರಿ, ಮಾಯಾ ಇಂಡಿಯಾ ಸಂಸ್ಥೆಯ ಜಿತಿನ್ ಚಂದ್ರನ್ ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: