ಮೈಸೂರು

ದಮನಿತ ಮಹಿಳೆಯರಿಗೆ ಸೌಲಭ್ಯ ಒದಗಿಸಿ : ಜಿ.ಪಂ.ಸಿಇಒ ಕೆ. ಜ್ಯೋತಿ

ಮೈಸೂರು, ಫೆ.16:-  ದಮನಿತ ಮಹಿಳೆಯರಿಗೆ ಮನೆ, ನಿವೇಶನ, ಪಡಿತರ ಚೀಟಿ, ಆಧಾರ್ ಕಾರ್ಡ್, ಮತ್ತು ಪ್ರತ್ಯೇಕ ಯೋಜನೆಗಳಾದ ಚೇತನ ಯೋಜನೆ, ಉದ್ಯೋಗಿನಿ, ಕಿರುಸಾಲ ಯೋಜನೆ, ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಎಲ್ಲಾ ಇಲಾಖೆಗಳು ಒಮ್ಮತದಿಂದ ಕಾರ್ಯನಿರ್ವಹಿಸಬೇಕು. ದಮನಿತ ಮಹಿಳೆಯರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಶ್ರಮಿಸಬೇಕು  ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕೆ.ಜ್ಯೋತಿ ಅವರು ತಿಳಿಸಿದರು.

ಜಿಲ್ಲೆಯಲ್ಲಿ ದಮನಿತ ಮಹಿಳೆಯರ ಕುಂದು ಕೊರತೆ ನಿವಾರಿಸಲು “ಜಿಲ್ಲಾ ಮಟ್ಟದ ಸಲಹಾ ಕೋಶ”  ರಚಿಸಲಾಗಿದ್ದು, ನಿನ್ನೆ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಮೊದಲ ಸಭೆ ಅಯೋಜಿಸಲಾಗಿತ್ತು. ಸಭೆಯ ಅಧ್ಯಕ್ಷತೆ ವಹಿಸಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು ಮಾತನಾಡಿದರು.

ದಮನಿತ ಮಹಿಳೆಯರಿಗಾಗಿ ಜಾರಿಗೊಂಡ ಸರ್ಕಾರದ ಯೋಜನೆಗಳು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಇಲಾಖೆಗಳ ನಡುವೆ  ಸಮನ್ವಯತೆ ಹೆಚ್ಚಾಗಬೇಕು. ಏಕಗವಾಕ್ಷಿ ವ್ಯವಸ್ಥೆಗಳ ಸಲಹ ಕೋಶ ರಚನೆಯಾಗಬೇಕು. ಈ ಸಲಹಾ ಕೋಶಕ್ಕೆ ಜಿಲ್ಲಾಧಿಕಾರಿಗಳು  ಅಧ್ಯಕ್ಷರಾಗಿ,  ಜಿಲ್ಲಾ ಮಟ್ಟದ ಇಲಾಖೆಗಳ ಮುಖ್ಯಸ್ಥರು ಸದಸ್ಯರಾಗಿ ಕಾರ್ಯನಿರ್ವಹಿಸಬೇಕು . ಇದಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖಾ ಅಧಿಕಾರಿಗಳಿಗೆ ತಿಳಿಸಿದರು.

.ಜಿಲ್ಲಾ ಮಟ್ಟದ ಅಧಿಕಾರಿಗಳು ತಮ್ಮ ಇಲಾಖೆಯಿಂದ  ದಮನಿತ ಮಹಿಳೆಯರಿಗೆ ಸಿಗುವ ಸೌಲಭ್ಯವನ್ನು ಸರಿಯಾದ ಮಾಹಿತಿಯೊಂದಿಗೆ ಸಲಹಾ ಕೋಶಕ್ಕೆ ಸಲ್ಲಿಸಬೇಕು. ಸಲಹಾ ಕೋಶದಲ್ಲಿ ಅವರಿಗೆ ಬೇಕಿರುವ ಸೌಲಭ್ಯಗಳ ಮಾಹಿತಿ ನೀಡಿ ಅವರಿಗೆ ಸರ್ಕಾರದಿಂದ ಸೌಲಭ್ಯ ಪಡೆಯಲು ಸಹಕರಿಸಬೇಕು. ಈ ಪ್ರಕ್ರಿಯೆಯಲ್ಲಿ ದಮನಿತ ಮಹಿಳೆಯರ ಸ್ಥಿತಿಗತಿಗಳು ಗುಪ್ತವಾಗಿರಲಿ ಎಂದು ತಿಳಿಸಿದರು.

ಪ್ರತಿ ತಿಂಗಳು ಅಧ್ಯಕ್ಷರ ಸಮ್ಮುಖದಲ್ಲಿ ಸಭೆ ನಡೆಸಬೇಕು ಹಾಗೂ ಒಡನಾಡಿ ಸಂಸ್ಥೆಯನ್ನು ಭೇಟಿ ಮಾಡಿ ಮಾಹಿತಿಯನ್ನು             ಪಡೆದುಕೊಳ್ಳಬೇಕೆಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯವರಿಗೆ ತಿಳಿಸಿದರು.

ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರು ಪದ್ಮ ಕೆ , ಉದ್ಯೋಗ ಮತ್ತು ವಿನಿಮಯ ಕಚೇರಿಯ ಸಹಾಯಕ ನಿರ್ದೇಶಕರಾದ ರಾಣಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಪ್ರಕಾಶ್, ಒಡನಾಡಿ ಸ್ಟ್ಯಾಲಿ, ಹಾಗೂ ಇನ್ನೂ ಇತರ ಅಧಿಕಾರಿಗಳು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: