ಮೈಸೂರು

ದೇಶಾಭಿಮಾನ ಬೆಳೆಸುವ ‘ಉರಿ’ ಚಲನಚಿತ್ರ ಪ್ರದರ್ಶನಕ್ಕೆ ಉತ್ತಮ ಪ್ರತಿಕ್ರಿಯೆ : ಮತ್ತೆ ಎರಡು ದಿನ ವಿಶೇಷ ಪ್ರದರ್ಶನಕ್ಕೆ ವ್ಯವಸ್ಥೆ

ಮೈಸೂರು,ಫೆ.16:-  ಪಾಕಿಸ್ತಾನ ಪ್ರಚೋದಿತ ಉಗ್ರರು ವಿನಾಕಾರಣ ಮಾಡುತ್ತಿದ್ದ ದಾಳಿಗೆ ಪ್ರತಿಯಾಗಿ ಭಾರತ ಸರ್ಜಿಕಲ್ ಸ್ಟ್ರೈಕ್ ಮೂಲಕ ಬುದ್ಧಿ ಕಲಿಸಿದ ಘಟನೆ ಆಧಾರಿತ ‘ಉರಿ, ದಿ ಸರ್ಜಿಕಲ್ ಸ್ಟ್ರೈಕ್’ ಚಲನಚಿತ್ರವನ್ನು ಡಿ.ಆರ್.ಸಿ.ಚಿತ್ರಮಂದಿರದಲ್ಲಿ ಏರ್ಪಡಿಸಿದ್ದ ವಿಶೇಷ ಪ್ರದರ್ಶನಗಳಿಗೆ ದೊರೆತ ಉತ್ತಮ ಪ್ರತಿಕ್ರಿಯೆಯಿಂದ ಮತ್ತೆ ಎರಡು ದಿನ ವಿಶೇಷ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.

ಜಿ.ಎಸ್.ಎಸ್. ಯೋಗಾ ಫೌಂಡೇಷನ್ ಮತ್ತು ಡಿ.ಆರ್.ಸಿ. ಚಿತ್ರಮಂದಿರದ ಸಹಯೋಗದಲ್ಲಿ ಮೊದಲ ಬಾರಿಗೆ ಅತ್ಯಂತ ವಿಶೇಷ ರಿಯಾಯಿತಿ ದರದಲ್ಲಿ “ಉರಿ, ದಿ ಸರ್ಜಿಕಲ್ ಸ್ಟ್ರೈಕ್” ಚಲನಚಿತ್ರವನ್ನು ಇತ್ತೀಚೆಗೆ ಪ್ರದರ್ಶಿಸಲಾಯಿತು. ಇದಕ್ಕೆ ಸಿಕ್ಕ ಉತ್ತಮ ಪ್ರತಿಕ್ರಿಯೆಯಿಂದ ಮತ್ತೊಮ್ಮೆ ಫೆ. 10 ರಿಂದ 14ರವರೆಗೆ ವಿಶೇಷ ಪ್ರದರ್ಶನ ಏರ್ಪಡಿಸಲಾಗಿತ್ತು. ಈ ಚಿತ್ರ ವೀಕ್ಷಣೆಗೆ ಇನ್ನೂ ಬೇಡಿಕೆ ಬರುತ್ತಿರುವ ಹಿನ್ನೆಲೆಯಲ್ಲಿ ಕೊನೆಯ ಹಂತವಾಗಿ ಫೆ. 16 ಮತ್ತು ಫೆ. 17 ರಂದು ವಿಶೇಷ ಪ್ರದರ್ಶನ ಏರ್ಪಡಿಸಲಾಗಿದೆ. ಫೆ. 14ರ ವರೆಗೆ 8034 ಜನರು ವಿಶೇಷ ಪ್ರದರ್ಶನದಲ್ಲಿ ಚಲನಚಿತ್ರ ವೀಕ್ಷಣೆ ಮಾಡಿದ್ದಾರೆ. ಚಲನಚಿತ್ರ ವೀಕ್ಷಣೆಗೆ ಫೆ. 10 ರಂದು ಸೈನಿಕರೂ ಸಹ ಭಾಗವಹಿಸಿದ್ದು ವಿಶೇಷವಾಗಿದೆ.

ಸರ್ಜಿಕಲ್ ಸ್ಟ್ರೈಕ್‍ಅನ್ನು ಚಲನಚಿತ್ರವಾಗಿ ರೂಪಿಸಿದ ಆದಿತ್ಯ ಧರ್ ಮತ್ತು ವಿಕ್ಕಿ ಕೌಶಲ್ ತಂಡ ನಿಜಕ್ಕೂ ಯಶಸ್ವಿಯಾಗಿದೆ. ಕಾಶ್ಮೀರದಲ್ಲಿನ ಉರಿ ಎಂಬ ಸೇನಾನೆಲೆಗೆ ಪಾಕ್ ಉಗ್ರರು ವಿನಾಕಾರಣ ಮನಸೋ ಇಚ್ಛೆ ದಾಳಿ ಮಾಡಿದ್ದರು. ಈ ಶತ್ರುಗಳಿಗೆ ಬುದ್ಧಿ ಕಲಿಸಬೇಕೆಂದೇ ಭಾರತದ ರಕ್ಷಣಾ ಇಲಾಖೆ ಸರ್ಜಿಕಲ್ ಸ್ಟ್ರೈಕ್ ಮಾಡಿ ಶತ್ರುಗಳ ಅಡಗುದಾಣವನ್ನು ನಾಶಗೊಳಿಸಿದ್ದನ್ನು ಚಲನಚಿತ್ರದಲ್ಲಿ ಮನೋಜ್ಞವಾಗಿ ಬಿಂಬಿಸಲಾಗಿದೆ.

ವಿದ್ಯಾರ್ಥಿ ಯುವಜನರಿಗೆ ದೇಶಾಭಿಮಾನದ ಪ್ರೇರಣೆ ಸಿಗಬೇಕು. ಅವರಿಗೆ ದೇಶಪ್ರೇಮ ಇಮ್ಮಡಿಯಾಗಬೇಕು. ಯುವಜನರಿಗೆ ಈ ದೇಶ ನನ್ನದು ಎಂಬ ಭಾವನೆ ಮೂಡಿಸಲು ಸಿನಿಮಾ ಅತ್ಯಂತ ಪ್ರಭಾವಿ ಮಾಧ್ಯಮವಾಗಿರುವ ಹಿನ್ನೆಲೆಯಲ್ಲಿ ಯುವ ಜನರಿಗೆ, ಹೈಸ್ಕೂಲ್ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಪ್ರೋತ್ಸಾಹಕವಾಗಿ ಈ ಚಲನಚಿತ್ರವನ್ನು ವಿಶೇಷ ಪ್ರದರ್ಶನ ಮಾಡಲಾಯಿತು ಎಂದು ಜಿ.ಎಸ್.ಎಸ್. ಯೋಗಾ ಫೌಂಡೇಷನ್‍ನ ಶ್ರೀಹರಿ ಹೇಳಿದ್ದಾರೆ.

ಯುದ್ಧ ವರದಿಗಳು ಯಾವಾಗಲೂ ರೋಚಕ. ಆದರೆ ನಮ್ಮ ದೇಶ, ನಮ್ಮ ಸೈನಿಕರು ಎನ್ನುವ ಹೆಮ್ಮೆ ಮೂಡಿಸುವ ಇಂತಹ ಅಭಿಯಾನಕ್ಕೆ ವಿದ್ಯಾರ್ಥಿಗಳು ಚಿತ್ರ ವೀಕ್ಷಣೆಯ ನಂತರ ಮೆಚ್ಚುಗೆ  ವ್ಯಕ್ತಪಡಿಸಿದ್ದಾರೆ. (ಎಸ್.ಎಚ್)

Leave a Reply

comments

Related Articles

error: