ಪ್ರಮುಖ ಸುದ್ದಿ

ರೋಗಗ್ರಸ್ಥ ಮೈಸೂರು ಫಾಲ್ಕನ್ ಟೈರ್ಸ್ ಲಿಮಿಟೆಡ್ ಪುನಶ್ಚೇತನಕ್ಕಾಗಿ ಉನ್ನತ ಮಟ್ಟದ ಸಭೆ

ರಾಜ್ಯ(ಬೆಂಗಳೂರು)ಫೆ.16:-  ರೋಗಗ್ರಸ್ಥ ಮೈಸೂರು ಫಾಲ್ಕನ್ ಟೈರ್ಸ್ ಲಿಮಿಟೆಡ್ ಪುನಶ್ಚೇತನಕ್ಕಾಗಿ ಕರ್ನಾಟಕದ ಬೃಹತ್ & ಮಧ್ಯಮ ಪ್ರಮಾಣದ ಕೈಗಾರಿಕೆಗಳ ಸಚಿವಾಲಯದಿಂದ   ಬೆಂಗಳೂರಿನಲ್ಲಿ ಉನ್ನತ ಮಟ್ಟದ ಸಭೆ ಆಯೋಜಿಸಲಾಗಿತ್ತು.

ಕರ್ನಾಟಕದ ಬೃಹತ್ & ಮಧ್ಯಮ ಪ್ರಮಾಣದ ಕೈಗಾರಿಕೆಗಳ ಸಚಿವ ಕೆ.ಜೆ.ಜಾರ್ಜ್ ಅವರು ಈ ಜಂಟಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕದ ಉನ್ನತ ಶಿಕ್ಷಣ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಮತ್ತು ಪ್ರವಾಸೋದ್ಯಮ ಖಾತೆ ಸಚಿವ ಸಾ.ರಾ.ಮಹೇಶ್, ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಮತ್ತು ಉದ್ಯೋಗಿ ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸಿದ್ದರು.

ರೋಗಗ್ರಸ್ತ ಫಾಲ್ಕನ್ ಟೈರ್ಸ್ ಲಿಮಿಟೆಡ್ ಪುನಶ್ಚೇತನಗೊಳಿಸುವ ನಿಟ್ಟಿನಲ್ಲಿ ಹಲವು ಕಾರ್ಯತಂತ್ರಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಕಂಪನಿಯಲ್ಲಿ 2500ಕ್ಕಿಂತಲೂ ಹೆಚ್ಚು ಉದ್ಯೋಗಿಗಳು ಕಾರ್ಯ ನಿರ್ವಹಿಸುತ್ತಿರುವುದರಿಂದ ಕಂಪನಿಯ ಪುನಶ್ಚೇತನಕ್ಕೆ ತ್ವರಿತ ಕ್ರಮ ಕೈಗೊಳ್ಳುವಂತೆ ಸಲಹೆ ಮಾಡಲಾಯಿತು. ಈ ಉದ್ಯೋಗಿಗಳ ಜೀವನಾಧಾರವನ್ನು ಭದ್ರಗೊಳಿಸುವ ಸಾಧ್ಯತೆಗಳ ಬಗ್ಗೆ ಚರ್ಚಿಸುವುದು ಸಭೆಯ ಪ್ರಮುಖ ಉದ್ದೇಶವಾಗಿತ್ತು.

ಕಂಪನಿಯ ಪುನಶ್ಚೇತನದ ನಿಟ್ಟಿನಲ್ಲಿ ಸಾಧ್ಯವಿರುವ ಎಲ್ಲ ಪ್ರಯತ್ನವನ್ನು ಸರ್ಕಾರ ನಡೆಸಲಿದೆ. ಅಂತೆಯೇ ಉದ್ಯೋಗಿಗಳ ಜೀವನಾಧಾರವನ್ನು ಸುಭದ್ರಗೊಳಿಸಲು ಸರ್ಕಾರ ಪ್ರಯತ್ನಿಸಲಿದೆ ಎಂದು ಸಚಿವ ಕೆ.ಜೆ.ಜಾರ್ಜ್ ಭರವಸೆ ನೀಡಿದರು.

ಕಂಪನಿಯ ಪುನಶ್ಚೇತನಕ್ಕೆ ಅನುಷ್ಠಾನಗೊಳಿಸಬಹುದಾದ ಕಾರ್ಯಸಾಧು ಎನಿಸುವ ಕ್ರಮಗಳ ಬಗ್ಗೆ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳಿಂದ ಮತ್ತು ಉದ್ಯೋಗಿ ಪ್ರತಿನಿಧಿಗಳಿಂದ ಕರ್ನಾಟಕದ ಬೃಹತ್ & ಮಧ್ಯಮ ಪ್ರಮಾಣದ ಕೈಗಾರಿಕೆಗಳ ಸಚಿವರು ಸಲಹೆಗಳನ್ನು ಪಡೆದರು. (ಎಸ್.ಎಚ್)

Leave a Reply

comments

Related Articles

error: