ಕರ್ನಾಟಕಪ್ರಮುಖ ಸುದ್ದಿ

192 ಕೋಟಿ ವೆಚ್ಚದಲ್ಲಿ ಕುಡಿಯುವ ನೀರಿನ ಯೋಜನೆ: ಸಿಎಂ ಎಚ್.ಡಿ.ಕೆ ಶಂಕುಸ್ಥಾಪನೆ

ಹಾಸನ (ಫೆ.16): ಸಮ್ಮಿಶ್ರ ಸರ್ಕಾರ ಕಳೆದ 7 ತಿಂಗಳಿಂದ ಹಲವಾರು ಜನಪರ ಯೋಜನೆಗಳಿಗೆ ಚಾಲನೆ ನೀಡಿದ್ದು, ರಾಜ್ಯದ ಸಮಗ್ರ ಅಭಿವೃದ್ದಿ ದೃಷ್ಠಿಯಿಂದ ಈ ವರ್ಷದ ಬಜೆಟ್ ಮಂಡನೆ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ತಿಳಿಸಿದ್ದಾರೆ.

ದುದ್ದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಹೊಳೆನರಸೀಪುರ ತಾಲ್ಲೂಕಿನ ಮಾವಿನಕೆರೆ ಗ್ರಾಮದ ಹತ್ತಿರ ಹೇಮಾವತಿ ನದಿಯಿಂದ ನೀರನ್ನು ಎತ್ತಿ ಹಾಸನ ತಾಲ್ಲೂಕಿನ ದುದ್ದ ಹಾಗೂ ಶಾಂತಿಗ್ರಾಮ ಹೋಬಳಿಗಳ 160 ಕೆರೆಗಳು ಮತ್ತು 10ಕಟ್ಟೆಗಳಿಗೆ ನೀರನ್ನು ತುಂಬಿಸುವ ರೂ 333 ಕೋಟಿಗಳ ಅಂದಾಜು ಮೊತ್ತದ ಕಾಮಗಾರಿಗೆ ಹಾಗೂ ಹೇಮಾವತಿ ಜಲಾಶಯದಿಂದ ದುದ್ದ ಮತ್ತು ಶಾಂತಿಗ್ರಾಮ ಹೋಬಳಿಗಳಲ್ಲಿನ 196 ಗ್ರಾಮಗಳಿಗೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಶಂಕು ಸ್ಥಾಪನೆ ನೆರವೇರಿಸಿ ಮುಖ್ಯಮಂತ್ರಿ ಅವರು ಮಾತನಾಡಿ ಕೃಷಿಕರಿಗೆ ಆರ್ಥಿಕ ಶಕ್ತಿ ತುಂಬಿಸಲು ಹಲವಾರು ಯೋಜನೆಯನ್ನು ರೂಪಿಸಲಾಗಿದೆ ಎಂದರು.

ಕೃಷಿ, ಪಶು ಸಂಗೋಪನೆ, ನೀರಾವರಿಗೆ ಆದ್ಯತೆ ನೀಡಿ 46000 ಕೋಟಿಗೂ ಅಧಿಕ ಅನುದಾನ ಕಾಯ್ದಿರಿಸಲಾಗಿದೆ. ರೈತರ ಆತ್ಮಹತ್ಯೆ ಮತ್ತು ಸಾಲದ ಹಿನ್ನೆಲೆಯಲ್ಲಿ ರೈತ ಕುಟುಂಬಗಳು ಅನಾಥರಾಗುತ್ತಿದ್ದು ಯುವಕರು ಕೃಷಿಯ ಬಗ್ಗೆ ನಿರಾಸಕ್ತಿ ತೋರುತ್ತಿದ್ದಾರೆ ಅದನ್ನು ತಪ್ಪಿಸಿ ಕೃಷಿಯತ್ತ ಆಸಕ್ತಿ ಮೂಡಿಸಲು ಕೃಷಿಗೆ ಹೆಚ್ಚಿನ ಪ್ರೋತ್ಸಾಹ ನೀಡಲಾಗುತ್ತಿದೆ ಎಂದು ತಿಳಿಸಿದರು.

ಉತ್ತರ-ದಕ್ಷಿಣ ಕರ್ನಾಟಕ ಎಂಬ ಬೇದವಿಲ್ಲ ಎಲ್ಲಾ ಭಾಗದ ರೈತರ ಹಿತಕ್ಕಾಗಿ ಯೋಜನೆಗಳನ್ನು ಜಾರಿ ಮಾಡಲಾಗುತ್ತಿದೆ. 44 ಲಕ್ಷ ಕುಟುಂಬಗಳಿಗೆ 46000 ಕೋಟಿ ರೂಪಾಯಿ ಸಾಲಮನ್ನಾಕ್ಕಾಗಿ ಹಂತಹಂತವಾಗಿ ಹಣ ಬಿಡುಗಡೆ ಮಾಡಲಾಗುವುದು. ಹಾಸನದಲ್ಲಿ ಫೆ.18 ರಂದು ಹಾಸನ ನಗರದಲ್ಲಿ ರೈತ ಕುಟುಂಬಗಳಿಗೆ ಸಾಲಮನ್ನಾ ತೀರುವಳಿ ಪತ್ರ ನೀಡಲಾಗುವುದು ಎಂದರು.

ರಾಜ್ಯದಲ್ಲಿ ಹಾಲು ಉತ್ಪಾದನೆಯಲ್ಲಿ ದೇಶದಲ್ಲಿ ಎರಡನೇ ಸ್ಥಾನದಲ್ಲಿದ್ದೇವೆ ಹಾಲಿನ ಪ್ರೋತ್ಸಾಹಧನವನ್ನು ರೂ 6 ಏರಿಕೆ ಏ.1 ರಿಂದ ಜಾರಿಗೆ ಬರಲಿದೆ. ರಾಜ್ಯದಲ್ಲಿ 2400 ಕೋಟಿ ರೂ ಹಾಲು ಉತ್ಪಾದಕರಿಗೆ ಪ್ರೋತ್ಸಾಹಧನ ನೀಡುತ್ತಿದ್ದೇವೆ. ಎಂದು ತಿಳಿಸಿದರು.

ಅಲ್ಲದೇ ಪಂಪ್‍ಸೆಟ್‍ಗೆ ಉಚಿತ ವಿದ್ಯುತ್ ಪೂರೈಕೆಗೆ 11000 ಕೋಟಿ ಬಜೆಟ್‍ನಲ್ಲಿ ಹಣ ಒದಗಿಸಲಾಗಿದೆ ಎಂದು ಮುಖ್ಯ ಮಂತ್ರಿ ಕುಮಾರಸ್ವಾಮಿ ಹೇಳಿದರು. ಕೃಷಿಕರಿಗೆ ಸರ್ಕಾರದಲ್ಲಿ ಹತ್ತಾರು ರೀತಿಯ ನೆರವು ಯೋಜನೆ ರೂಪಿಸಲಾಗಿದೆ. ರೈತ ಎಂದೂ ಸಾಲಗಾರನಾಗಬಾರದು ಆ ರೀತಿಯಲ್ಲಿ ಲಾಭದಾಯಕ ಕೃಷಿ ಪದ್ದತಿ ಜಾರಿಗೆ ಪ್ರಯತ್ನಿಸಲಾಗಿದೆ ಎಂದರಲ್ಲದೆ. ಮುಂದಿನ ಮಾರ್ಚ್ ತಿಂಗಳ ಒಳಗೆ ಸಂಪೂರ್ಣ ಸಾಲಮನ್ನಾ ಮಾಡಲಾಗುವುದು ಅಲ್ಲದೇ ಮುಂದಿನ ಬಜೆಟ್‍ನಲ್ಲಿ ಕೃಷಿ ಲಾಭದಾಯಕವಾಗುವ ಯೋಜನೆಗಳನ್ನು ರೂಪಿಸಲಾಗುವುದು ಹಾಗೂ ಶಾಂತಿಗ್ರಾಮ ಹೋಬಳಿ 196 ಗ್ರಾಮಗಳಿಗೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ರೂಪಿಸಲಾಗಿದೆ ಎಂದು ಅವರು ಹೇಳಿದರು.

ಸಚಿವರಾದ ಹೆಚ್.ಡಿ. ರೇವಣ್ಣ ಅವರು ಮಾತನಾಡಿ ದುದ್ದ, ಶಾಂತಿಗ್ರಾಮ ಹೋಬಳಿ ಜನತೆಯ ಬಹುದಿನಗಳ ಕನಸು ಈಡೇರುವ ಕಾಲ ಬಂದಿದೆ.
192.64 ಕೋಟಿ ರೂಪಾಯಿ ವೆಚ್ಚದಲ್ಲಿ ಹೇಮಾವತಿ ಜಲಾಶಯದಿಂದ ದುದ್ದ ಮತ್ತು ಶಾಂತಿಗ್ರಾಮ ಹೋಬಳಿಗಳ 196 ಕೆರೆಗಳಿಗೆ ನೀರು ತುಂಬಿಸುವ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಇಂದು ಚಾಲನೆ ನೀಡಿದ್ದು ನಾಳೆಯಿಂದಲೇ ಕೆಲಸ ಪ್ರಾರಂಭವಾಗಲಿದೆ ಎಂದು ಸಚಿವ ರೇವಣ್ಣ ಅವರು ಹೇಳಿದರು.

ಇದಲ್ಲದೆ ದುದ್ದ ಗ್ರಾಮದಲ್ಲಿ 220/110/66 ಕೆ.ವಿ. ವಿದ್ಯುತ್ ಸ್ವಿಕರಣಾ ಕೇಂದ್ರ ಮತ್ತು ಸೋಮನಹಳ್ಳಿ ಗ್ರಾಮದಲ್ಲಿ 66/11 ಕೆ.ವಿ. ವಿದ್ಯುತ್ ಉಪಕೇಂದ್ರಗಳನ್ನು ಸ್ಥಾಪಿಸಲಾಗುವುದು ಆ ಕಾಮಗಾರಿಗಳಿಗೆ ಶಿಲನ್ಯಾಸ ನೆರವೇರಿಸಲಾಗಿದೆ ಎಂದು ಸಚಿವ ರೇವಣ್ಣ ಹೇಳಿದರು.

ಕೆ.ಎಂ ಶಿವಲಿಂಗೇಗೌಡ ಅವರು ಮಾತನಾಡಿ ದುದ್ದ ಶಾಂತಿ ಗ್ರಾಮ ಹೋಬಳಿಯ ಜನರ ನಿರೀಕ್ಷೆ ಇಂದು ಈಡೇರುತ್ತಿದೆ. ದೇವೇಗೌಡರ ಮಾರ್ಗದರ್ಶನದಲ್ಲಿ ಜಿಲ್ಲಾ ಪ್ರಗತಿಯಾಗುತ್ತಿದೆ. ಕುಮಾರಸ್ವಾಮಿ ಅವರು ರಾಜ್ಯವನ್ನು ಅತ್ಯಂತ ಸಮರ್ಥವಾಗಿ ಮುನ್ನೆಡೆಸುತ್ತಿದ್ದಾರೆ. ದೇವೇಗೌಡರು ಶತಮಾನದ ಯುಗಪುರುಷ ಅತ್ಯುತ್ತಮವಾದ ಬಜೆಟ್ ಮಂಡಿಸಿದ್ದಾರೆ ಎಂದರು.

ಸಾಲಮನ್ನ ಪ್ರಾರಂಭವಾಗಿದ್ದು ಎಲ್ಲರ ಸಾಲವು ಮನ್ನಕ್ಕೆ ಬಜೆಟ್ ನಲ್ಲಿ 18000 ಕೋಟಿ ಹಣ ಇಡಲಾಗಿದೆ. 44 ಲಕ್ಷ ಜನರು ವಾಣಿಜ್ಯ ಬ್ಯಾಂಕ್ ನಲ್ಲಿ ಮಾಡಿರುವ ಸಾಲಮನ್ನಾ ಮಾಡಲಾಗಿದ್ದು ಹಣ ಬಿಡುಗಡೆ ಮಾಡಲಾಗುತ್ತಿದೆ ಎಂದರು.

ವಿಧಾನ ಪರಿಷತ್ ಸದಸ್ಯರು ಹಾಗೂ ಸಂಸದೀಯ ಕಾರ್ಯದರ್ಶಿಗಳಾದ ಎಂ.ಎ ಗೋಪಾಲಸ್ವಾಮಿ, ಶಾಸಕರುಗಳಾದ ಎ.ಟಿ.ರಾಮಸ್ವಾಮಿ, ಹೆಚ್.ಕೆ.ಕುಮಾರಸ್ವಾಮಿ, ಕೆ.ಎಸ್.ಲಿಂಗೇಶ್, ಸಿ.ಎನ್ ಬಾಲಕೃಷ್ಣ, ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪ್ರದಾನ ಕಾರ್ಯದರ್ಶಿ ಎಲ್.ಕೆ ಅತಿಕ್, ಜಲಸಂಪನ್ಮೂಲ ಇಲಾಖೆಯ ಪ್ರದಾನ ಕಾರ್ಯದರ್ಶಿಗಳಾದ ಕೆ.ರಾಕೇಶ್ ಸಿಂಗ್, ಐ.ಜಿ ಶರತ್ ಚಂದ್ರ, ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಎ.ಎನ್ ಪ್ರಕಾಶ್ ಗೌಡ, ಅಪರ ಜಿಲ್ಲಾಧಿಕಾರಿಯಾದ ಎಂ.ಎಲ್.ವೈಶಾಲಿ, ಮತ್ತಿತರರು ಹಾಜರಿದ್ದರು. (ಎನ್.ಬಿ)

Leave a Reply

comments

Related Articles

error: