ಮೈಸೂರು

ಮೈಸೂರು ರಾಜರ ಆಡಳಿತ ಎಲ್ಲರಿಗೂ ಆದರ್ಶ : ರಾಜವಂಶಸ್ಥ ಯದುವೀರ ಒಡೆಯರ್

‘ರಾಜಮಾರ್ಗ’ ಕೃತಿ ಲೋಕಾರ್ಪಣೆ

ಮೈಸೂರು,ಫೆ.16:- ಮೈಸೂರು ರಾಜರ ಆಡಳಿತ ಎಲ್ಲರಿಗೂ ಆದರ್ಶ ಎಂದು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದರು.

ಅವರಿಂದು ಭಾರತೀಯ ವಿದ್ಯಾಭವನದ ಬಿಪಿಬಿಐಎಂ ಸಭಾಂಗಣದಲ್ಲಿ ಭಾರತೀಯ ವಿದ್ಯಾಭವನ ಭವನ್ಸ್ ಪ್ರಿಯಂವದಾ ಬಿರ್ಲಾ ಇನ್ಸಿಟಿಟ್ಯೂಟ್ ಆಫ್ ಮ್ಯಾನೇಜ್ ಮೆಂಟ್ ವತಿಯಿಂದ ಹಮ್ಮಿಕೊಳ್ಳಲಾದ  ಲೇಖಕ ಕೆ.ಜೈರಾಜ್ ಅವರ  ‘ರಾಜಮಾರ್ಗ’ ಕೃತಿ ಲೋಕಾರ್ಪಣೆ ಕಾರ್ಕ್ರಮದಲ್ಲಿ ಪಾಲ್ಗೊಂಡು ಕೃತಿ ಲೋಕಾರ್ಪಣೆಗೊಳಿಸಿ ಮಾತನಾಡಿದರು. ಭಾರತೀಯ ವಿದ್ಯಾಭವನಕ್ಕೂ ಅರಮನೆಗೂ ಅವಿನಾಭಾವ ಸಂಬಂಧವಿದೆ. ನಮ್ಮ ತಾತನವರಾದ ಜಯಚಾಮರಾಜೊಡೆಯರ್ ಬೆಂಗಳೂರಿನಲ್ಲಿ ಇದರ ಚೇರ್ಮನ್ ಆಗಿದ್ದರು. ನಂತರ ಮೈಸೂರಿನಲ್ಲಿ ನಮ್ಮ ತಂದೆಯವರಾದ ಶ್ರೀಕಂಠದತ್ತ ಒಡೆಯರ್ ಚೇರ್ಮನ್ ಆಗಿದ್ದರು. ಭಾರತೀಯ ವಿದ್ಯಾಭವನದಲ್ಲಿ ನಡೆಯುವ ಯಾವುದಾದರೂ ಒಂದು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕೆಂಬ ಆಸೆ ಕಳೆದ ಮೂರು ವರ್ಷಗಳಿಂದ ಇತ್ತು. ಇವತ್ತು ಪೂರ್ಣಗೊಂಡಿದೆ ಎಂದರು. ರಾಜಮಾರ್ಗ ಕೃತಿ ಮೈಸೂರು ರಾಜರ ಆಡಳಿತದ ಕುರಿತು ತಿಳಿಸುತ್ತದೆ.ಮೈಸೂರು ರಾಜರ ಆಡಳಿತ ಎಲ್ಲರಿಗೂ ಆದರ್ಶ ಎನ್ನುವುದನ್ನು ನಡೆದ ಸತ್ಯ ಕಥೆಯ ಮೂಲಕ ವಿವರಿಸಿದರು. ಅವರು ನ್ಯಾಯೋಚಿತವಾದ ಆಡಳಿತ ನೀಡುತ್ತಿದ್ದರು ಎಂದರು.

ಭಾರತೀಯ ವಿದ್ಯಾಭವನದ ಅಧ್ಯಕ್ಷ ಪ್ರೊ.ಎ.ವಿ.ನರಸಿಂಹಮೂರ್ತಿ ಮಾತನಾಡಿ ‘ರಾಜಮಾರ್ಗ’ ಗಲ್ಲಿ ಗಲ್ಲಿಯಲ್ಲಿ ಯಾಕೆ ತಿರುಗುತ್ತೀಯಾ, ರಾಜಮಾರ್ಗದಲ್ಲಿ ಹೋಗು ಎಂಬುದನ್ನು ತಿಳಿಸುವಂತಿದೆ. ಲೇಖಕ ಜೈರಾಜ್ ಅವರು ರಾಜಮಾರ್ಗದಲ್ಲಿ ಹೋಗಿ ಯಶಸ್ಸು ಕಂಡು ಪ್ರೀತಿಪಾತ್ರರಾಗಿದ್ದಾರೆ. ಐಎಎಸ್ ಎಂದರೆ ಐ ಆ್ಯಮ್ ಸೇಫ್ ಎಂದು ಹಾಸ್ಯ ಚಟಾಕಿ ಹಾರಿಸಿದಾಗ ಸಭೆ ಗೊಳ್ಳೆಂದು ನಕ್ಕಿತು. ಆದರೆ ಐಎಎಸ್ ಅಧಿಕಾರಿಯಾಗಿದ್ದ ಜೈರಾಜ್ ಅವರು ಆ ಗುಂಪಿಗೆ ಸೇರಿದವರಲ್ಲ. ಸುರಕ್ಷತೆ ಇಡೀ ಸಮೂಹಕ್ಕೆ ಬೇಕು, ಸಮಾಜಕ್ಕೆ ಬೇಕು ಎಂಬ ಗುಂಪಿಗೆ ಸೇರಿದವರು. ಇದು ವೈಶಿಷ್ಟ್ಯ ಎಮದರು. ಅಮೇರಿಕದ ಹಾರ್ವರ್ಡ್ ವಿವಿಯಲ್ಲಿ ಪ್ರವೇಶ ಪಡೆಯುವುದು ಎಷ್ಟು ಕಷ್ಟವೆಂಬುದು ನನಗೆ ಗೊತ್ತು. ಅಲ್ಲಿ ಪ್ರವೇಶಪಡೆದು ಪದವಿ ಪಡೆದವರು. ಏಕೆಂದರೆ ಅವರಿಗೆ ಯೋಗ್ಯತೆಯಿದೆ. ಎಷ್ಟೋ ಮಂತ್ರಿ, ಮುಖ್ಯಮಂತ್ರಿಗಳ ಜೊತೆ ಒಡನಾಡಿದ್ದಾರೆ. ಗ್ರಾಮೀಣ ಬದುಕಿಗೆ ಪ್ರಾಮುಖ್ಯತೆ ಕೊಟ್ಟು ಗ್ರಾಮವಾಸ್ತವ್ಯ ಮಾಡಿ ಜನರ ಸಮಸ್ಯೆ ಆಲಿಸಿ ಪರಿಹರಿಸಿದವರು. ಎಲೆಕ್ಟ್ರಿಕ್ ಸಿಟಿ ಡಿಪಾರ್ಟ್ ಮೆಂಟ್ ನಲ್ಲಿ ಸಾಕಷ್ಟು ಕೊಡುಗೆ ಕೊಟ್ಟವರು. ಇಂದಿಗೂ ನಾವು ಎಲೆಕ್ಟ್ರಿಕ್ ಸಿಟಿ ಡಿಪಾರ್ಟ್ ಮೆಂಟ್ ಗೆ ಸಾಕಷ್ಟು ಬೈಯ್ಯುತ್ತೇವೆ. ಪರೀಕ್ಷೆ ಬರುವಾಗ ಕರೆಂಟ್ ತೆಗಿತಾರೆ ಅಂತ. ಇವರು ಚೆನ್ನಾಗಿ ಕೆಲಸ ಮಾಡಿ  ಬುನಾದಿ ಹಾಕಿದರು. ಮೋದಿಯವರು ಗುಜರಾತ್ ನಲ್ಲಿ ಮುಖ್ಯಮಂತ್ರಿಯಾಗಿದ್ದಾಗ ಅಲ್ಲಿ ಹೋಗಿ ನೋಡಿ ಅವರು ಹೇಗೆ ಯಶಸ್ವಿಯಾಗಿದ್ದಾರೆ ಎಂದು ನೋಡಿ ಬಂದು ಜ್ಯೋತಿ ಭಾಗ್ಯ ನೀಡಿದರು. ನಿವೃತ್ತಿ ಪಡೆಯಬೇಕೆಂದುಕೊಂಡಾಗ ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪನವರು ದಯವಿಟ್ಟು ನಿವೃತ್ತಿ ಪಡೆಯಬೇಡಿ. ನಿಮ್ಮಂತಹ ದಕ್ಷ ಅಧಿಕಾರಿಯ ಅವಶ್ಯಕತೆ ಈ ನಾಡಿಗಿದೆ ಎಂದಿದ್ದರು. ಅವರ ಕರ್ತವ್ಯ ನಿಷ್ಠೆ ಇದರಿಂದಲೇ ತಿಳಿಯಲಿದೆ ಎಂದರು. ಕೃತಿಯಲ್ಲಿ ಹತ್ತಾರು ವಿಷಯ ಪ್ರಸ್ತಾಪ ಮಾಡಿದ್ದಾರೆ. ಇವರಿಂದ ಇನ್ನೂ ಹೆಚ್ಚಿನ ಕೃತಿಗಳು ಹೊರಬರಲಿ ಎಂದು ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಲೇಖಕ ಜೈರಾಜ್,ಬಿಪಿಬಿಐಎಂ ಅಧ್ಯಕ್ಷ ನಾ.ರಾಮಾನುಜ, ಗೌರವ ಕಾರ್ಯದರ್ಶಿ ಪಿ.ಎಸ್.ಗಣಪತಿ, ಕೋಶಾಧ್ಯಕ್ಷ ಡಾ.ಎ.ಟಿ.ಭಾಷ್ಯಂ, ಪ್ರಹ್ಲಾದ್ ರಾವ್ ಉಪಸ್ಥಿತರಿದ್ದರು.

ಕಾರ್ಯಕ್ರಮಕ್ಕೂ ಮುನ್ನ ಹುತಾತ್ಮ ಯೋಧರಿಗೆ ಮೌನಾಚರಣೆಗೈದು ಶ್ರದ್ದಾಂಜಲಿ ಅರ್ಪಿಸಲಾಯಿತು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: